ಹಳ್ಳ ಮುಚ್ಚಲು ಆಗ್ರಹ
ಚಿಂತಾಮಣಿ: ಪಟ್ಟಣದ ಆಜಾದ್ ಚೌಕದ ಬಳಿ ಇರುವ ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ಹಳ್ಳವನ್ನು ಮುಚ್ಚದೆ ಇರುವುದರಿಂದ ಸುಗಮವಾಗಿ ಸಂಚರಿಸಲು ಆಗದೆ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇಲ್ಲಿ ಸಂಚರಿಸುವ ವಾಹನಗಳು ಹಲವು ಬಾರಿ ಅಪಘಾತಕ್ಕೀಡಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವ ಬಗ್ಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಡಾಂಬರೀಕರಣಕ್ಕಾಗಿ ರಸ್ತೆಯನ್ನು ಅಗೆದು ಮುಚ್ಚದೆ ಇರುವುದರಿಂದ ನಾನಾ ಸಮಸ್ಯೆಗಳು ತಲೆದೂರಿರುತ್ತಿವೆಯೆಂದು ನಾಗರಿಕರು ಆರೋಪಿಸಿದ್ದಾರೆ. ಹತ್ತಿರವಿರುವ ಸರ್ಕಾರಿ ಕಿರಿಯ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ವೃದ್ಧರು, ಮಹಿಳೆಯರು ತೆರೆದ ಹಳ್ಳಕ್ಕೆ ಬಿದ್ದು ಕೈಕಾಲು ಗಾಯ ಮಾಡಿಕೊಂಡಿದ್ದಾರೆ. ಮಂಗಳವಾರ ಟಾಟಾ ಇಂಡಿಕಾ ಕಾರೊಂದು ಹಳ್ಳಕ್ಕೆ ಬಿದ್ದು ಸಾರ್ವಜನಿಕರು ಅದನ್ನು ಮೇಲೆತ್ತಿದ್ದಾರೆ. ಈ ಕೂಡಲೇ ಹಳ್ಳವನ್ನು ಮುಚ್ಚಿ ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದ್ವಿಚಕ್ರ ವಾಹನ ಸವಾರ ಸಾವು
ಟೇಕಲ್: ಮರಳು ಲಾರಿ- ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲೆ ಅಸುನೀಗಿದ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡದಾನವನಹಳ್ಳಿ ಬಳಿ ಬುಧವಾರ ಮಧ್ಯಾಹ್ನ ಜರುಗಿದೆ. ತೊರಲಕ್ಕಿಯ ಅಂಗಡಿ ಮಾಲೀಕ ಓಂಪ್ರಕಾಶ್ (35) ಮೃತಪಟ್ಟ ದುರ್ದೈವಿ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದು, ಸ್ಥಳೀಯ ಜನರು ಲಾರಿ ಮತ್ತು ಚಾಲಕನನ್ನು ಬೂದಿಕೋಟೆಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಸ್ತಿ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸರ್ಕಾರಿ ಸೌಲತ್ತು ಅರ್ಹರಿಗೆ ತಲುಪಲಿ
ಬಂಗಾರಪೇಟೆ: ಸರ್ಕಾರದ ಸವಲತ್ತುಗಳು ಉಳ್ಳವರ ಪಾಲಾಗದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರ ವಹಿಸಿ ಅರ್ಹ ವ್ಯಕ್ತಿಗಳಿಗೆ ಮಾತ್ರ ದಕ್ಕುವಂತೆ ದಕ್ಷತೆಯಿಂದ ಕಾರ್ಯ ರ್ನಿಹಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೂಚನೆ ನೀಡಿದರು. ಇಲ್ಲಿನ ತಾಪಂ ಸಭಾಂಗಣದಲ್ಲಿ ಕರೆದಿದ್ದ ಕ್ಷೇತ್ರದ ಎಲ್ಲಾ ಪಂಚಾಯಿತಿಗಳ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಕ್ಷೇತ್ರವು ಈಗಾಗಲೇ ಬರದಿಂದ ತತ್ತರಿಸಿದೆ. ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸೌಲಭ್ಯಗಳಿಂದ ವಂಚಿತರಾಗಿ ನರಳಾಡುತ್ತಿದ್ದಾರೆ. ಸರ್ಕಾರದ ಅನುಕೂಲಗಳು ಬರೀ ಅರ್ಹರಿಗೆ ಮಾತ್ರ ದೊರೆಯಬೇಕೆ ವಿನಃ ಅನರ್ಹರಿಗೆ ಯಾವುದೇ ಕಾರಣಕ್ಕೂ ದಕ್ಕದಂತೆ ಪಿಡಿಒಗಳು ನೋಡಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತಂದುಕೊಡಬೇಕು. ಆಗಲೆ ಸರ್ಕಾರ ಹೊಸ ಯೋಜನೆಗಳು ಜಾರಿ ಮಾಡಿದ್ದಕ್ಕೆ ನಿಜವಾದ ಅರ್ಥ ಬರುವುದು ಎಂದು ಹೇಳಿದರು. ಇದುವರೆಗೂ ಪಂಚಾಯಿತಿಗಳಲ್ಲಿ ಎಷ್ಟು ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಎಷ್ಟರಲ್ಲಿ ನೀರು ಸಿಕ್ಕಿದೆ, ಎಷ್ಟುಮಂದಿ ಆಶ್ರಯ ಮನೆಗಳಿಲ್ಲದೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದಾರೆ, ಕಳೆದ ಐದು ವರ್ಷದಲ್ಲಿ ಕ್ಷೇತ್ರಕ್ಕೆ ಬಂದ ಆಶ್ರಯ ಮನೆಗಳು ಎಷ್ಟು ನಿರ್ಮಾಣವಾಗಿರುವುದು ಎಷ್ಟು ಕುಂಠಿತವಾಗಿದೆ, ಇದಕ್ಕೆ ಕಾರಣಗಳು ಏನು, ಪಂಚಾಯಿತಿಗಳ ಆಸ್ತಿ ಎಷ್ಟಿದೆ ಎಷ್ಟು ಒತ್ತುವರಿಯಾಗಿದೆ ಎಂಬ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕೇಳಿ ಮಾಹಿತಿ ನೀಡುವಂತೆ ಸೂಚಿಸಿದ್ದು, ಸಭೆಯಲ್ಲಿದ್ದ ಪಿಡಿಒಗಳಿಗೆ ಶಾಸಕರಿಗೆ ಸಮರ್ಪಕವಾದ ಉತ್ತರ ನೀಡಲಾಗದೆ ಕೆಲ ಕಾಲ ತಬ್ಬಿಬ್ಬಾದರು. ಅಲ್ಲದೆ, ಕೆಲ ಪಿಡಿಒಗಳು ಪಂಚಾಯಿತಿ ಕಚೇರಿಗಳಿಗೆ ಪ್ರತಿದಿನ ಭೇಟಿ ನೀಡದೆ ಗ್ರಾಮಸ್ಥರ ಕೆಲಸ- ಕಾರ್ಯಗಳಿಗೆ ತೊಂದರೆ ಉಂಟು ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಇಂತಹ ಮೈಗಳ್ಳರು ತಮ್ಮ ಧೋರಣೆ ತಿದ್ದಿಕೊಳ್ಳಬೇಕು. ಇದು ನೂತನ ಶಾಸಕರು ಆಯ್ಕೆಯಾಗಿ ಬಂದರೆ ಇದೆಲ್ಲಾ ಮಾಮೂಲಿ ಎಂದು ನಿರ್ಲಕ್ಷ್ಯ ಮಾಡಿದರೆ ಪರಿಣಾಮ ನೆಟ್ಟಿಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಿಮಗೆ ತೊಂದರೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ. ಅದು ಬಿಟ್ಟು ಗ್ರಾಮಸ್ಥರಿಗೆ ತೊಂದರೆ ಉಂಟು ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿ ಪಡಿತರ ಕಾರ್ಡ್ಗಳ ನವೀಕರಣ ವೇಳೆ ವಿನಾಕಾರಣ ವಿಳಂಬ ಮಾಡುತ್ತಿರುವುದನ್ನು ಸರಿಪಡಿಸಿಕೊಂಡು ತ್ವರಿತವಾಗಿ ಪೂರೈಸುವಂತೆ ಹೇಳಿದರು. ಪ್ರತಿ ತಿಂಗಳು ಪಂಚಾಯಿತಿಗಳ ಪ್ರಗತಿ ಮಾಹಿತಿ ನೀಡುವಂತೆ ಆದೇಶ ನೀಡಿದರು. ಸಭೆಯಲ್ಲಿ ತಾಪಂ ಇಒ ಡಾ. ಜಗದೀಶ್ ಇದ್ದರು.
ಆದರ್ಶ ವಿದ್ಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ
ಗೌರಿಬಿದನೂರು: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಎನ್.ಎಚ್. ಶಿವಶಂಕರ ರೆಡ್ಡಿ ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಅವರು ಪಟ್ಟಣದ ಹೊರವಲಯದ ಮೊರಾರ್ಜಿ ವಸತಿಶಾಲೆ ಸಮೀಪದಲ್ಲಿ ಸುಮಾರು 4.12 ಕೋಟಿ ವೆಚ್ಚದಲ್ಲಿ ಆದರ್ಶ ವಿದ್ಯಾಲಯ ಶಾಲೆ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಆಂಗ್ಲ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಆದರ್ಶ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು. ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್ ಪ್ರಸಾದ್ ಮಾತನಾಡಿ ಗೌರಿಬಿದನೂರು ಶೈಕ್ಷಣಿಕ ಇತಿಹಾಸದಲ್ಲಿಯೇ ಇಂದು ಸುದಿನ ಎಂದರಲ್ಲದೆ ಶಾಸಕರ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಸದರಿ ಆದರ್ಶ ವಿದ್ಯಾಲಯದ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಪಿ.ವಿ. ರಾಘವೇಂದ್ರ ಹನುಮಾನ್, ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಜಲಜಾಕ್ಷಿ, ಜಿ.ಪಂ. ಸದಸ್ಯ ಸಿ.ಆರ್. ನರಸಿಂಹಮೂರ್ತಿ, ಪುರಸಭಾ ಸದಸ್ಯರಾದ ಕಲ್ಪನಾ ರಮೇಶ್, ಮುನಿರಾಜು, ಎಂ. ನರಸಿಂಹಮೂರ್ತಿ, ಕಲ್ಲೀಂವುಲ್ಲಾ, ಚಿದಾನಂದಗುಪ್ತ, ತಾ.ಪಂ ಸದಸ್ಯೆ ಚೇತನ್, ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧರಾಮಯ್ಯ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯಸ್ಥ ಫರೂಕ್ ವಂದಿಸಿದರು.
'ಜಾತಿ ಆಧಾರದ ಮೇಲೆ ಸಾಲ ಮನ್ನಾ ಖಂಡನೀಯ'
ತಿಪಟೂರು: ಅಲ್ಪಸಂಖ್ಯಾತ, ಹಿಂದುಳಿದ, ಹರಿಜನ ಎಂಬ ಜಾತಿ ಆಧಾರದ ಮೇಲೆ ವಿವಿಧ ಇಲಾಖೆಗಳ ಸಾಲ ಮನ್ನಾ ಮಾಡಿರುವ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಜೆಡಿಎಸ್ ರಾಜ್ಯ ಮಹಿಳಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯೆ ರೇಖಾ ಅನೂಪ್ ಕಿಡಿಕಾರಿದ್ದಾರೆ. ಬರಗಾಲದಿಂದ ಕಂಗಾಲಾಗಿರುವ ರೈತರ ಯಾವುದೇ ಸಾಲಮನ್ನಾ ಮಾಡದಿರುವುದು ಹಾಗೂ ಮಧ್ಯಮ ವರ್ಗದ ಜನತೆಗೆ ಸರ್ಕಾರದ ಸವಲತ್ತುಗಳನ್ನು ನೀಡದಿರುವುದು ಶೋಚನೀಯ ಸಂಗತಿ. ಬಸ್ ದರಗಳನ್ನು ಹೆಚ್ಚಿಸುವ ಮೂಲಕ ವಿದ್ಯುತ್ ಬಿಲ್ಲನ್ನೂ ಹೆಚ್ಚಿಸ ಹೊರಟಿರುವುದು ಸರ್ಕಾರದ ಯಾವ ದಿಕ್ಕಿನಲ್ಲಿ ಹೊರಟಿದೆ ಎಂಬುದನ್ನು ತೋರಿಸುತ್ತದೆ. ಒಂದು ರು. ನಂತೆ ಅಕ್ಕಿಯನ್ನು ವಿತರಿಸಲು ಹೊರಟಿರುವ ಇವರು ಮಧ್ಯಮ ವರ್ಗದವರಿಗೆ (ಎಪಿಎಲ್) ಸಿಗುತ್ತಿದ್ದ ಅಕ್ಕಿ ಮತ್ತಿತರೆ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ರೇಖಾ ತಿಳಿಸಿದ್ದಾರೆ.
ಸಂತೃಸ್ತರಿಗಾಗಿ ಶಾಸಕಿ ನೇತೃತ್ವದಲ್ಲಿ ದೇಣಿಗೆ ಸಂಗ್ರಹ
ಕೆಜಿಎಫ್: ಉತ್ತರಾಖಂಡದಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ನೊಂದ ಜನರಿಗೆ ಪರಿಹಾರ ಕಲ್ಪಿಸಲು ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಅವರು ಮುಖಂಡರೊಂದಿಗೆ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕಿ ವೈ.ರಾಮಕ್ಕ, ಉತ್ತರಾಖಂಡದ ಕೇದಾರನಾಥದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಪ್ರವಾಹಕ್ಕೆ ಸಿಲುಕಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಅಸಹಾಯಕರಾಗಿರುವ ಕನ್ನಡಿಗರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಸಂತ್ರಸ್ತರಿಗೆ ಹಣ, ಆಹಾರ, ವಸ್ತ್ರ ಹಾಗೂ ಸಾಮಗ್ರಿಗಳು ಪೂರೈಸುವುದಾಗಿ ತಿಳಿಸಿದರು. ಈ ವೇಳೆ ನಗರದ ಗೀತಾ ರಸ್ತೆ, ಪ್ರಿಚರ್ಡ್ ರಸ್ತೆ, ಬಸ್ ನಿಲ್ದಾಣ, ಹೋಟೆಲ್ ಮತ್ತಿತರ ಅಂಗಡಿಗಳಿಂದ ಮತ್ತು ಸಾರ್ವಜನಿಕರಿಂದ ಶಾಸಕಿ ವೈ.ರಾಮಕ್ಕ ಮತ್ತು ಮಾಜಿ ಶಾಸಕ ವೈ.ಸಂಪಂಗಿ ಅವರ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿದರು. ನಗರದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸುರೇಶ್ನಾರಾಯಣ, ಮುಖಂಡರಾದ ಬಾಟಾಗೋಪಾಲ್, ಯಶ್ವಂತ್ರಾಜ್, ಜೈಯ್ಕುಮಾರ್, ನಗರಸಭಾ ಸದಸ್ಯರಾದ ಅಶೋಕ್, ವಿಜಯಕುಮಾರ್, ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ನಕಲಿ ದಾಖಲೆ ಜಮೀನು ಮಾರಾಟ ದೂರು
ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಲಾಗಿದೆ ಎಂದು ತಾಲೂಕಿನ ಹೊಸಮಟ್ನಹಳ್ಳಿಯ ಗೋಪಾಲಗೌಡ ಎಂಬುವರು ನಗರ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಕೋಲಾರ ತಾಲೂಕು ಸುಗಟೂರು ಹೋಬಳಿಗೆ ಸೇರಿದ ಮಟ್ನಹಳ್ಳಿ ಗ್ರಾಮದ ಸರ್ವೆ ನಂ.47ರಲ್ಲಿ ಸೇರಿದ 2 ಎಕರೆ 32 ಗುಂಟೆ ವಿಸ್ತೀರ್ಣದ ಜಮೀನನ್ನು ಹೊಸಮಟ್ನಹಳ್ಳಿ ಗ್ರಾಮದ ವಿ. ನಾರಾಯಣಗೌಡ, ಎನ್. ನಂಜುಂಡಗೌಡ, ಎನ್. ರಮೆಶ್, ಪ್ಪೋಜಿಗೌಡ, ಗಜೇಂದ್ರಗೌಡ, ಪುಷ್ಪ ಮತ್ತು ಲಾವಣ್ಯ ಎಂಬುವರು ಸೇರಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಪೂಜೇನ ಅಗ್ರಹಾರ ಗ್ರಾಮದ ರಾಜೇಂದ್ರ ಕುಮಾರ್, ಗಜೇಂದ್ರ ಕುಮಾರ್ ಪುರುಷೋತ್ತಮ್ಕುಮಾರ್ ಇವರಿಗೆ ಸರ್ವೆ ನಂ.47 ಜಮೀನಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಸೃಷ್ಟಿಸಿರುವ ನಕಲಿ ದಾಖಲೆಗಳ ಬಗ್ಗೆ ತಾಲೂಕು ತಹಸೀಲ್ದಾರ್ ಇದು ನಕಲಿ ದಾಖಲೆ ಎಂದು ಹಿಂಬರಹಗಳನ್ನು ನೀಡಿರುತ್ತಾರೆ, ಈ ನಕಲಿ ದಾಖಲೆಗಳ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಸಿದಂತೆ ಆರೋಪಿಗಳು ತಮಗೆ ಕೊಲೆ ಬೆದರಿಕೆ ಹಾಕಿರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೋರಿದ್ದಾರೆ.
ಜಿಲ್ಲೆಯ ಕೆಲವೆಡೆ ವಿದ್ಯುತ್ ವ್ಯತ್ಯಯ
ಕೋಲಾರ: ಕೋಲಾರದ 2206 ಕೆ.ವಿ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲು 220 ಕೆ.ವಿ ಸ್ವೀಕರಣ ಕೇಂದ್ರದಿಂದ ಸರಬರಾಜು ಆಗುವ ಉಪ-ವಿದ್ಯುತ್ ವಿತರಣಾ ಕೇಂದ್ರಗಳಿಗೆ ಜೂನ್ 28 ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋಲಾರದ ಟಮಕ, ವಕ್ಕಲೇರಿ, ವೇಮಗಲ್, ಶೆಟ್ಟಿಮಾದಮಂಗಲ, ಕ್ಯಾಲನೂರು, ಸುಗಟೂರು, ನರಸಾಪುರ, ಕೆಂಬೋಡಿ, ತೊರದೇವಂಡಹಳ್ಳಿ, ಎಂ.ಗೊಲ್ಲಹಳ್ಳಿ, ಶ್ರೀನಿವಾಸಪುರ ತಾಲೂಕಿನ ಯಲ್ದೂರು, ದಳಸನೂರು, ಆರಿಕುಂಟೆ, ಆಲವಟ್ಟ, ನಾರಮಾಕನಹಳ್ಳಿ, ಹೊಗಳಗೆರೆ, ಮುಳಬಾಗಿಲು ಪಟ್ಟಣ, ಕಸಬ, ಆವಣಿ, ದುಗ್ಗಸಂದ್ರ, ಬೈರಕೂರು, ತಾಯಲೂರು, ಬಂಗಾರಪೇಟೆಯ ಈ. ಎಂ.ಯು.ಎಸ್.ಎಸ್. ನಲ್ಲಿ ವಿದ್ಯುತ್ ನಿಲುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

