ರಜೆ ಮೇಲೆ ಡಿಸಿ, ಆಡಳಿತಕ್ಕೆ ಗ್ರಹಣ ಹಿಡಿಯದಿರಲಿ
ಕೋಲಾರ: ಸಾಮಾನ್ಯವಾಗಿ ಅಧಿಕಾರಿಗಳು ಸರ್ಕಾರ ನೀಡಿರುವ ಸೌಲಭ್ಯಗಳ ಆಧಾರದ ಮೇಲೆ ತಮಗೆ ಬೇಕಾದಾಗ ರಜೆ ಪಡೆಯುವುದಕ್ಕೆ ಅವಕಾಶಗಳಿವೆ.
ಕೋಲಾರ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರು ಸಹ ತಮಗಿರುವ ಅವಕಾಶ ಬಳಸಿಕೊಂಡು ಜಿಲ್ಲೆಗೆ ಬಂದ ಮೇಲೆ ಇದೇ ಮೊದಲ ಬಾರಿ ಎರಡು ವಾರಗಳ ರಜೆ ಪಡೆದಿದ್ದಾರೆ.
ಹೀಗೆ ರಜೆ ಹೋಗುವ ಜಿಲ್ಲಾಧಿಕಾರಿಗಳು ಸರ್ಕಾರದ ಸೂಚನೆ ಮೇರೆಗೆ ಅಪರ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಇಲ್ಲವೇ ಉಪವಿಭಾಗಾಧಿಕಾರಿಗೆ ಕೆಲಸದ ಜವಾಬ್ದಾರಿ ವಹಿಸುವುದು ಸಂಪ್ರದಾಯ.
ಆದರೆ, ಪ್ರಭಾರ ಜಿಲ್ಲಾಧಿಕಾರಿಯಾಗುವವರಿಗೆ ಸ್ವಂತ ನಿರ್ಧಾರ, ಪ್ರಮುಖ ನಿರ್ಣಯ ಕೈಗೊಳ್ಳುವುದಕ್ಕೆ ಅವಕಾಶವಿರುವುದಿಲ್ಲ, ಹಾಗಾಗಿ ಜಿಲ್ಲಾಧಿಕಾರಿಗಳ ರಜೆ ಅವಧಿಯಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಅತ್ಯಂತ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ.
ಪ್ರಮುಖವಾಗಿ ಆಡಳಿತಕ್ಕೆ ಗ್ರಹಣ ಹಿಡಿಯದ ರೀತಿಯಲ್ಲಿ ಕೆಲಸ ನಿರ್ವಹಿಸುವುದರ ಜತೆಗೆ, ಸಮಸ್ಯೆ, ಸವಾಲು ಎದುರಾದಾಗ ರಜೆಯ ಮೇಲೆ ತೆರೆಳಿರುವ ಜಿಲ್ಲಾಧಿಕಾರಿಗಳನ್ನು ಅಂತರ್ಜಾಲ ಇಲ್ಲವೇ ಮೊಬೈಲ್ ಮೂಲಕ ಸಂಪರ್ಕಿಸಿ ಅಗತ್ಯ ಸಲಹೆಗಳನ್ನು ಪಡೆಯುವುದು ಸೂಕ್ತ.
ಒಂದು ವೇಳೆ ಜಿಲ್ಲಾಧಿಕಾರಿಗಳು ಲಭ್ಯವಾಗದಿದ್ದ ಪಕ್ಷದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿ ಪರಿಹಾರಕೊಂಡುಕೊಳ್ಳದಿದ್ದರೆ ಆಡಳಿತ ನಡೆಸುವುದು ಕಷ್ಟವಾಗುತ್ತದೆ.
ಕುಡಿಯುವ ನೀರು, ರೈತರಿಗೆ ಬೇಕಾದ ಸವಲತ್ತು, ವಿದ್ಯಾರ್ಥಿಗಳ ಅಗತ್ಯ, ಕಾನೂನು ಸುವ್ಯವಸ್ಥೆ, ವಿವಿಧ ಇಲಾಖೆಗಳಲ್ಲಿ ಸಕಾಲಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಜಾಗ್ರತೆ ವಹಿಸುವ ಮೂಲಕ ಪ್ರಭಾರಿ ಜಿಲ್ಲಾಧಿಕಾರಿಗಳು ಸಹ ಪರಿಣಾಮಕಾರಿಯಾಗಿ ಜವಾಬ್ದಾರಿ ನಿರ್ವಹಿಸಬಹುದೆಂಬ ನಂಬಿಕೆ, ವಿಶ್ವಾಸವನ್ನು ಮೂಡಿಸಿದಲ್ಲಿ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚುತ್ತದೆ.
ಸಾಮಾನ್ಯವಾಗಿ ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದು ಕಷ್ಟ-ಸಾಧ್ಯ. ಜನಪ್ರತಿನಿಧಿಗಳು, ಹೋರಾಟಗಾರರು, ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಒತ್ತಡ ತರುವುದು, ದಮಕಿ ಹಾಕುವುದು ಸರ್ವೆಸಾಮಾನ್ಯ, ಇದಕ್ಕೆ ಮಣಿದು ಕಡತಗಳಿಗೆ ಸಹಿ ಹಾಕುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ್ರಭಾರ ಜಿಲ್ಲಾಧಿಕಾರಿಗಳು ಜನತೆಗೆ ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು, ಭೂ ಪರಿವರ್ತನೆ, ಹೊಸ ಯೋಜನೆಗಳ ಅನುಷ್ಠಾನ ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸದಿದ್ದರೆ ಆಡಳಿತ ಯಂತ್ರ ತುಕ್ಕು ಹಿಡಿಯುವಂತಾಗುತ್ತದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

