ಕೋಲಾರ

ಉದ್ಯಾನ ಸಮಸ್ಯೆ ನಿವಾರಣೆಗೆ ಮುಂದಾದ ಪುರಸಭೆ ಅಧ್ಯಕ್ಷೆ

Published On :

ಬಂಗಾರಪೇಟೆ: ಪಟ್ಟಣದಲ್ಲಿರುವ ಏಕೈಕ ಉದ್ಯಾನ ವನದಲ್ಲಿ ರಾತ್ರಿ ವೇಳೆ ಪುಂಡರು ಬಾರ್ ಆಗಿ ಪರಿವರ್ತಿಸಿಕೊಂಡು ಉದ್ಯಾನವನ ಚಿತ್ರಣವನ್ನೇ ಬದಲಾಯಿಸಿದ್ದ ಬಗ್ಗೆ ಶನಿವಾರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ಪಟ್ಟಾಭಿಷೇಕೋದ್ಯಾನ ಅನೈತಿಕ ಚಟುವಟಿಕೆಗಳ ತಾಣ' ಸಿಚಿತ್ರ ಲೇಖನಕ್ಕೆ ಸ್ಪಂದಿಸಿರುವ ಪುರಸಭೆ ಅಧ್ಯಕ್ಷೆ ಗಂಗಮ್ಮ ಅನೈತಿಕ ಚಟುವಟಿಕೆಗಳಿಗೆ ಲಗಾಮು ಹಾಕುವುದಾಗಿ ಭರವಸೆ ನೀಡಿದ್ದಾರೆ.ದಿನೇ ದಿನೆ ಪಟ್ಟಣ ಬೆಳೆಯುತ್ತಿದ್ದರೂ ಮಕ್ಕಳಿಗೆ ವೃದ್ದರಿಗೆ ಸಂಜೆ ವೇಳೆ ಕಾಲ ಕಳೆಯಲು ಉದ್ಯಾನವರನದ ಕೊರತೆ ಇದೆ. ಏಕೈಕ ಉದ್ಯಾನವನ ಇತರೇ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ .ಇಲ್ಲಿ ಯಾವುದೇ ಸೌಕರ್ಯಗಳಿಲ್ಲ ಕೂರಲು ಆಸನಗಳಿಲ್ಲ. ಪುಂಡ-ಪೋಕರಿಗಳ ತಾಣವಾಗಿ ಮಲೀನವಾಗಿತ್ತು. ಈ ಬಗ್ಗೆ ಅನೇಕ ಸಲ ಪುರಸಭೆ ಗಮನಕ್ಕೆ ನಾಗರಿಕರು ತಂದಿದ್ದರೂ ಪ್ರಯೋಜನವಾಗಿರಲಿಲ್ಲ.

ಮಹಿಳೆಯ ಸರ ಅಪಹರಣ
ಕೆಜಿಎಫ್: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಅಪಹರಿಸಿಕೊಂಡು ಹೋಗಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂಪಿಯನ್‌ರೀಫ್ ನ್ಯೂ ಮಾಡಲ್ ಹೌಸ್ ನಿವಾಸಿ ಸೆಲ್ವಕುಮಾರ್ ಎಂಬುವರ ಪತ್ನಿ ಶಿಬಾನ್ಯಾನಿ ಎಂಬಾಕೆ ಗುಡ್‌ಫ್ರೈಡೇ ಪ್ರಯುಕ್ತ ನಗರದ ಸೆಂತ್‌ಥಾಮಸ್ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಗೌತಮನಗರದ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಾಬರ್ಟ್‌ಸನ್‌ಪೇಟೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಿಬಾನ್ಯಾನಿ ಕತ್ತಿನಲ್ಲಿದ್ದ ಸುಮಾರು 28 ಗ್ರಾಂನ ರು. 50,400 ಬೆಲೆ ಬಾಳುವ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಶಿಬಾನ್ಯಾನಿ ರಾಬರ್ಟ್‌ಸನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೂಜಾಟ: ಮೂವರ ಸೆರೆ
ಕೆಜಿಎಫ್: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೇತಮಂಗಲ ಠಾಣಾ ಪೊಲೀಸರು ಮೂವರನ್ನು ಬಂಧಿಸಿ ಒಂದಷ್ಟು ನಗದು ವಶಪಡಿಸಿಕೊಂಡಿದ್ದಾರೆ. ಹಂಗಳ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯ ಬಳಿ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ವೆಂಕಟೇಶ್ ಸೇರಿದಂತೆ ಇತರೆ ಐದು ಮಂದಿ ಜೂಜಾಟ ಆಡುತ್ತಿದ್ದು ಅವರುಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಇವರಿಂದ ರು. 1610 ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡ ಬೇತಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಾರಿ ಮತ ಪ್ರಮಾಣ ಇಳಿಕೆ
ಚಿಂತಾಮಣಿ: ಈ ಬಾರಿಯ ಲೋಕಸಭಾ ಚುನಾವಣೆಯ್ಲಿ ಶೇಖಡವಾರು ಮತದಾನ ಇಳಿಮುಖಗೊಂಡಿದೆ. ಚಿಂತಾಮಣಿ ವಿಧಾನಸಭಾ ವ್ಯಾಪ್ತಿಯಲ್ಲಿ ಹಲವು ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಆಸೆ-ಆಮಿಷ ತೋರಿದರೂ ಮತದಾರ ಮಾತ್ರ ಮತಗಟ್ಟೆ ತೆರಳಿ ಮತದಾನ ಮಾಡದ ಪರಿಣಾಮ, ಇಳಿಮುಖಗೊಂಡಿದೆ.ಹಲವು ರಾಜಕೀಯ ಮುಖಂಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಮಾತಿನ ವಾಗ್ದಾಳಿ ನಡೆಸಿ ವಿರೋಧವಾಗಿದ್ದು, ಸ್ವಪ್ರತಿಷ್ಠೆಗಾಗಿ ಕ್ಷೇತ್ರದಲ್ಲಿ ಜನರಿಗೆ ಬಣ್ಣ ಬಣ್ಣದ ಮಾತುಗಳನ್ನು ಹಾಡಿದ ಮುಖಂಡರು ಈ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಹಾಲಿ ಶಾಸಕರು ಒಂದೇ ಅಭ್ಯರ್ಥಿಗೆ ಮತ ಕೇಳಿದ್ದು ಕೂಡ ಈಗ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.