ಕೋಲಾರ

ಪ್ರೀತಿಸಿ ಮೋಸ ಮಾಡಿದ ಯುವಕ

Published On :

ಚಿಂತಾಮಣಿ: ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳನ್ನು ಅಲ್ಪ ಸಂಖ್ಯಾತರಿಗೆ ಸೇರಿದ ಯುವಕನೊಬ್ಬ ಪ್ರೀತಿಸಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಹುಡುಗಿ ಹಾಗೂ ಹುಡುಗನ ಕಡೆಯವರ ಮಧ್ಯೆ ಘರ್ಷಣೆ ನಡೆದ ಘಟನೆ ನಿಮ್ಮಕಾಯಲಹಳ್ಳಿಯಲ್ಲಿ ಬುಧವಾರ ನಡೆದಿದೆ. ಈ ಘರ್ಷಣೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅರುಣಾ(ಹೆಸರ ಬದಲಾಯಿಸಲಾಗಿದೆ) ಎಂಬಾಕೆಯನ್ನು, ಇದೇ ಗ್ರಾಮದ ಮಸ್ತಾಫ ಎಂಬಾತ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಖುಷಿಯಾಗಿದ್ದರು. ಆದರೆ, ಇತ್ತೀಚಿನ ಕೆಲವು ದಿನಗಳಿಂದ ಆಕೆಯನ್ನು ನಿರ್ಲಕ್ಷಿಸಿದ್ದಾನೆ. ಇದನ್ನರಿತು ಯುವತಿ ಹಾಗೂ ಆಕೆಯ ಪೋಷಕರು ಬುಧವಾರ ಬೆಳಗ್ಗೆ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಳು ಮುಂದಾಗಿದ್ದಾರೆ. ಆದರೆ, ಸಂಧಾನ ವಿಫಲವಾಗಿದ್ದರಿಂದ ಪರಸ್ಪರ ಬೈದಾಡಿಕೊಂಡಿದ್ದಾರೆ. ಅಲ್ಲದೆ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ, ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಬಟ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲವರನ್ನು ಚಿಂತಾಮಣಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಿಧಿ ಆಸೆಗೆ ಬಂಡೆ ಸ್ಫೋಟ
ಚಿಂತಾಮಣಿ: ನಿಧಿ ಆಸೆಗಾಗಿ ಕಿಡಿಗೇಡಿಗಳು ಕಲ್ಲುಬಂಡೆ ಸ್ಫೋಟಿಸಿದ ಪರಿಣಾಮ ಕಾವಡಿಗಾನಹಳ್ಳಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ನಗರ ಹೊರವಲಯದ ಕನಂಪಲ್ಲಿ ಕೆರೆ ರಸ್ತೆ ಮಾರ್ಗದ ಕಾವಡಿಗಾನಹಳ್ಳಿ ಸಮೀಪ ಹಲವು ಕಿಡಿಗೇಡಿಗಳು ನಿಧಿ ಆಸೆಗಾಗಿ ಕಳೆದ ರಾತ್ರಿ ಕರಿಮದ್ದು ಹಾಗೂ ಜಿಲೆಟ್ ಕಡ್ಡಿಗಳನ್ನು ಬಳಸಿ ಬಂಡೆ ಕೆಳಗೆ ಬಂಡೆ ಸ್ಫೋಟಿಸಿದ ಪರಿಣಾಮ ಗ್ರಾಮಸ್ಥರ ನೆಮ್ಮದಿಗೆ ಭಂಗವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮೂಲಗಳ ಪ್ರಕಾರ ಶಿಡ್ಲಘಟ್ಟ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುವ ಹರೀಶ್ ಮತ್ತು ನಂದಕುಮಾರ್ ಇಬ್ಬರು ಪೊಲೀಸ್ ಪೇದೆಗಳ ಬೆಂಗಾವಲಿನಲ್ಲಿ ಈ ಕೃತ್ಯ ನಡೆದಿರುವುದಾಗಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ಶಂಕೆ ವ್ಯಕ್ತಪಡಿಸಿದ್ದಾರೆ. ಕಾವಡಿಗಾನಹಳ್ಳಿ ಬೆಟ್ಟಗುಡ್ಡಗಳ ಸುತ್ತಲೂ ಇರುವ ಕಾರಣ ಇಲ್ಲಿ ನಿಧಿ ಇದೆಯೆಂಬ ದುರಾಸೆಯಿಂದ ಗುಂಪು ಈ ಕೃತ್ಯಕ್ಕೆ ಕೈಹಾಕಿ ವಿಫಲ ಯತ್ನಗೊಂಡಿರುವುದರಿಂದ ಜನರು ಅಂತೆ ಕಂತೆಗಳಲ್ಲಿ ಮಾತನಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಕನ್ನಡಪ್ರಭ ಜೊತೆ ಮಾತನಾಡುತ್ತಾ, ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರ ಮೇಲೆ, ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
38 ಕುರಿಗಳು, 1 ಎತ್ತು ಭಸ್ಮ
ಶಿಡ್ಲಘಟ್ಟ: ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ಬಿದ್ದು 38 ಕುರಿಗಳು, ಒಂದು ಎತ್ತು ಸ್ಥಳದಲ್ಲೇ ದಹನವಾಗಿ ಮತ್ತೊಂದು ಎತ್ತು ಮತ್ತು ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಎಸ್. ದೇವಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಎರನಾಗೇನಹಳ್ಳಿ ಗ್ರಾಮದಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆ ಸಮಯದಲ್ಲಿ ಗುಡಿಸಲೊಂದರಲ್ಲಿ ಕಾಣಿಸಿಕೊಂಡ ಬೆಂಕಿ, ನಾಲ್ಕು ಗುಡಿಸಲುಗಳಿಗೆ ವ್ಯಾಪಿಸಿತು.  ಪರಿಣಾಮ ಗುಡಿಸಲುಗಳಲ್ಲಿದ್ದ ಮೂವತ್ತೆಂಟು ಕುರಿಗಳು, ಒಂದು ಎತ್ತು ಬೆಂಕಿಗಾಹುತಿಯಾಯಿತು. ಮತ್ತೊಂದು ಎತ್ತಿಗೆ ಸುಟ್ಟ ಗಾಯಗಳಾಗಿವೆ. ಗುಡಿಸಿಲಿನಲ್ಲಿ ಮಲಗಿದ್ದ ವೆಂಕಟರಮಣಪ್ಪ ಮತ್ತು ಅವರ ರಕ್ಷಣೆಗೆ ಬಂದ ಆತನ ಮಗ ಗಣೇಶ್ ಸುಟ್ಟಗಾಯಗಳಿಂದ ಆಸ್ಪತ್ರೆಗೆ ಸೇರಿದ್ದಾರೆ. ಸುತ್ತಮುತ್ತಲಿನಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳಕ್ಕೆ ಪೋನಾಯಿಸಿದರಾದರೂ, ಸ್ಥಳಕ್ಕೆ ಅಗ್ನಿಶಾಮಕದಳ ಬರುವಷ್ಟರಲ್ಲೇ ಎತ್ತು, ಕುರಿಗಳು ಮತ್ತು ಗುಡಿಸಲುಗಳು ಸುಟ್ಟು ಬೂದಿಯಾಗಿವೆ. ಸುಮಾರು 2 ಲಕ್ಷ ರುಪಾಯಿಗಳಷ್ಟು ನಷ್ಟವುಂಟಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಪರಿಚಿತ ಶವ ಪತ್ತೆ, ಕೊಲೆ ಶಂಕೆ
ಕೋಲಾರ/ಶಿಡ್ಲಘಟ್ಟ: ಶಿಡ್ಲಘಟ್ಟ ತಾಲೂಕಿನ ದಿಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಯಲಚೇನಹಳ್ಳಿಯ ಚೌಡೇಶ್ವರಿ ದೇವಾಲಯದ ಹಿಂಭಾಗ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು ಎಲ್ಲೂ ಕೊಲೆ ಮಾಡಿ ಶವ ತಂದು ಹಾಕಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.  ಸುಮಾರು 35 ವರ್ಷ ವಯಸ್ಸಿನ ದೃಢಕಾಯ ಯುವಕನ ಕುತ್ತಿಗೆಯನ್ನು ಚಾಕುನಿಂದ ಇರಿದಿರುವುದಲ್ಲದೆ, ಆತನ ಗುಪ್ತಾಂಗವನ್ನು ಸಹ ಕತ್ತರಿಸಲಾಗಿದೆ. ಶವ ಭಾಗಶ ಕೊಳೆತಿದ್ದು ಮೃತ ದೇಹವನ್ನು ಪೊಲೀಸರು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾರೆ.  ಮೃತನ ಮೇಲೆ ಕಪ್ಪು ಬಣ್ಣದ ಪ್ಯಾಂಟ್, ಬಿಳಿಬಣ್ಣದ ಅಂಗಿ ಧರಿಸಿದ್ದು ವಾರಸುದಾರರು ಯಾರಾದರೂ ಇದ್ದರೆ ಆಸ್ಪತ್ರೆಯಲ್ಲಿ ವಿವರ ಪಡೆಯುವಂತೆ ಶಿಡ್ಯಘಟ್ಟ ಸಿಪಿಐ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಎಸ್ಪಿ ದಿವ್ಯಗೋಪಿನಾಥ್, ಡಿವೈಎಸ್ಪಿ ಸಣ್ಣತಿಮ್ಮಪ್ಪ ಭೇಟಿ ನೀಡಿ ಪರಿಶೀಲಿಸಿದರು. ಮೃತ ವ್ಯಕ್ತಿ ಆಂಧ್ರ ಪ್ರದೇಶದವನಿರಬೇಕೆಂದು ಪೊಲೀಸರು ಶಂಕಿಸಿ ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.
ಮನೆಗೆ ನುಗ್ಗಿ ಮೊಬೈಲ್ ಕಳವು
ಕೆಜಿಎಫ್: ಮನೆಯೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಟೇಬಲ್ ಮೇಲೆ ಇಟ್ಟಿದ್ದ ಮೊಬೈಲ್ ಫೊನ್ ಕಳವು ಮಾಡಿಕೊಂಡು ಹೋಗಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಪ್ರಿಚರ್ಡ್‌ರಸ್ತೆಯ ಮೂರನೇ ಅಡ್ಡ ರಸ್ತೆಯ ನಿವಾಸಿ ಸಂತೋಷ್ ಎಂಬುವರು ತಮ್ಮ ಮನೆಯ ಬಾಗಿಲನ್ನು ತೆರೆದಿಟ್ಟು ಕೊಠಡಿಯಲ್ಲಿದ್ದಾಗ ಕಳ್ಳನೊಬ್ಬ ಮನೆಯೊಳಗೆ ಪ್ರವೇಶಿಸಿ ಸುಮಾರು 15 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಕಳ್ಳತಮ ಮಾಡಿದ್ದಾನೆ. ಕಳ್ಳ ಮೊಬೈಲ್ ಕಳ್ಳತನ ಮಾಡುತ್ತಿರುವುದನ್ನು ನೊಡಿದ ಸಂತೋಷ್ ಆತನನ್ನು ಹಿಡಿಯಲು ಮುಂದಾದಾಗ ಕಳ್ಳ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಸಂತೋಷ್ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕ್ಯಾಂಟರ್ ಡಿಕ್ಕಿ: ಚಾಲಕ ಸಾವು
ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಶಿಡ್ಲಘಟ್ಟ ರಸ್ತೆಯ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್  ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕ್ಯಾಂಟರ್ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಗಿಡ್ಡಯ್ಯ (42) ಎಂದು ಗುರುತಿಸಲಾಗಿದೆ. ಆಂಧ್ರದಿಂದ ಬೆಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯ ಹಿಂಬದಿಗೆ ಅತಿ ವೇಗವಾಗಿ ಬಂದು ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಚಾಲಕ ಗಿಡ್ಡಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಯಾಂಟರ್ ವಾಹನ ಲಾರಿಗೆ ಅಂಟಿಕೊಂಡಿದ್ದು ಪರಸ್ಪರ ವಾಹನಗಳನ್ನು ಕ್ರೇನ್ ಮೂಲಕ ಬೇರ್ಪಡಿಸಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಸಂಚಾರಿ ಠಾಣೆ ಸಬ್ ಇನ್ಸ್  ಪೆಕ್ಟರ್ ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅಪಘಾತದ ವಾಹನಗಳ ಅಡ್ಡಿಯಿಂದ ಉಂಟಾಗಿದ್ದ ರಸ್ತೆ ಸಂಚಾರ ತಡೆ ತೆರವುಗೊಳಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.