ಕೋಲಾರ

ಬಂಗಾರಪೇಟೆ ತಾಪಂ ಕೈ ವಶ

Published On :

ಬಂಗಾರಪೇಟೆ: ಇಲ್ಲಿನ ತಾಪಂನ ಮೂರನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ.
ಅಧ್ಯಕ್ಷರಾಗಿ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ವೆಂಕಟರತ್ನಮ್ಮ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ವರಲಕ್ಷ್ಮೀ, ವಿಜಯಲಕ್ಷ್ಮೀ ಹಾಗೂ ಶಾಂತಕುಮಾರಿ ನಾಮಪತ್ರ ಸಲ್ಲಿಸಿದ್ದರು. ವಿಜಯಲಕ್ಷ್ಮೀ ನಾಮಪತ್ರ ವಾಪಸ್ ಪಡೆದರೆ ಇಬ್ಬರು ಕಣದಲ್ಲಿದ್ದಿದ್ದರಿಂದ ಚುನಾವಣೆ ನಡೆಯಿತು. ಕಾಂಗ್ರೆಸ್‌ನ ಶಾಂತಕುಮಾರಿ 13 ಮತಗಳನ್ನು ಪಡೆದು ಆಯ್ಕೆಯಾದರೆ, ಬಿಜೆಪಿಯ ವರಲಕ್ಷ್ಮೀ 12ಮತಗಳನ್ನು ಪಡೆದು ಪರಾಭವಗೊಂಡರು.
ತಾಪಂನಲ್ಲಿ ಕಾಂಗ್ರೆಸ್‌ಗೆ ಆಡಳಿತ ನಡೆಸಲು ಸದಸ್ಯರ ಸಂಖ್ಯೆ ಇಲ್ಲದಿದ್ದರೂ ಅಧ್ಯಕ್ಷಗಿರಿಗೆ ಎಸ್ಟಿ ಮೀಸಲಾತಿಯಿಂದ ಯಾವುದೇ ಶ್ರಮವಿಲ್ಲದೆ ಹಾಗೂ ಈ ಅಭ್ಯರ್ಥಿ ಕಾಂಗ್ರೆಸ್‌ನಲ್ಲಿ ಮಾತ್ರ ಇದ್ದಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನವನ್ನು ಬಿಜೆಪಿ ದಕ್ಕಿಸಿಕೊಳ್ಳಲು ಮೀಸಲಾತಿ ಸರಿಯಿಲ್ಲ ಎಂದು ತಕರಾರು ತೆಗೆದು ಹೈಕೋರ್ಟ್ ಮೆಟ್ಟಿಲೇರಿದ್ದರೂ ಫಲಕಾರಿಯಾಗಿಲ್ಲ.
ಬಿಜೆಪಿಗೆ ಆಡಳಿತ ನಡೆಸುವಷ್ಟು ಬಹುಮತವಿರುವುದರಿಂದ ಕೊನೆ ಪಕ್ಷ ಉಪಾಧ್ಯಕ್ಷ ಸ್ಥಾನವನ್ನಾದರೂ ಧಕ್ಕಿಸಿಕೊಳ್ಳಲು ಯತ್ನಿಸಿದರೂ ಆ ಸ್ಥಾನವೂ ದಕ್ಕದೆ ಪಕ್ಷದ ಮುಖಂಡರಿಗೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿಯ ಕೆಲವು ಮುಖಂಡರ ಏಕಪಕ್ಷೀಯ ನೀತಿಯಿಂದ ಬೇಸತ್ತಿರುವ ಐವರು ಸದಸ್ಯರು ಕೊನೆ ಘಳಿಗೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಂಬಲಕ್ಕೆ ನಿಂತಿದ್ದರಿಂದ ತಾಪಂ ಆಡಳಿತ ಮತ್ತೆ ಕೈ ವಶವಾಗುವಂತಾಯಿತು.
ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದ ನಂತರ ಅವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ನಾರಾಯಣಸ್ವಾಮಿ, ಕಳೆದ 40 ತಿಂಗಳಿಂದ ತಾಪಂ ಆಡಳಿತ ಮಂಡಳಿ ನಿಷ್ಕ್ರಿಯವಾಗಿತ್ತು. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸದೆ ಅಧಿಕಾರ ಅಮಲಿನಲ್ಲಿ ಮೈಮರೆತಿದ್ದರಿಂದ ಕೊನೆ ಅವಧಿಯಲ್ಲಿ ಬಿಜೆಪಿಗೆ ಪಾಠ ಕಲಿಸಲು ಸದಸ್ಯರು ಕಾಂಗ್ರೆಸ್ ಪರ ನಿಂತರು. ಈ ಗೆಲವು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಂದಿಯಾಗಿದೆ ಎಂದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರು 20 ತಿಂಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸುವತ್ತ ಗಮನಹರಿಸಿ ಜನ ಮಣ್ಣನೆ ಪಡೆಯಬೇಕೆಂದು ಸಲಹೆ ನೀಡಿದರು. ಇದೇ ವೇಳೆ ಕಾರ್ಯಕರ್ತರು ಭರ್ಜರಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು,ಅಧ್ಯಕ್ಷೆ ಗಂಗಮ್ಮ, ಹೊಸರಾಯಪ್ಪ ಮತ್ತಿತತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.