ಅದ್ಧೂರಿ ದೀಪೋತ್ಸವ
ಗೌರಿಬಿದನೂರು: ಆಷಾಢ ಮಾಸದ ಪ್ರಯುಕ್ತ ಪಟ್ಟಣದ ಗ್ರಾಮದೇವತೆಗಳಾದ ಶ್ರೀ ಮರಿಗಮ್ಮ, ಸಲ್ಲಾಪುರಮ್ಮ, ಮಾರಮ್ಮ ದೇವತೆಗಳಿಗೆ ದೀಪೋತ್ಸವವನ್ನು ಭಕ್ತಿಯಿಂದ ಪಟ್ಟಣದ ಮಹಿಳೆಯರು ಆಚರಣೆ ಮಾಡಿದರು.
ದೀಪೋತ್ಸವ ವಿಶೇಷ: ಪಟ್ಟಣದ ಶ್ರೀ ಮರಿಗಮ್ಮ ಸಲ್ಲಾಪುರಮ್ಮ ದೇವಾಲಯ ಸಮಿತಿ, ಕರಗ ಸಮಿತಿ ಹಾಗೂ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗ್ರಾಮದೇವತೆಗಳಿಗೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಷಾಢ ಮಾಸದಲ್ಲಿ ದೀಪೋತ್ಸವ ಎಲ್ಲಾ ಜನಾಂಗದವರೂ ಸಾಮೂಹಿಕವಾಗಿ ಮಂಗಳವಾರ ದೀಪೋತ್ಸವ ಆಚರಣೆ ಮಾಡುವುದು ವಾಡಿಕೆ.
ಡಿಸಿ, ಎಸಿ ವರ್ಗಕ್ಕೆ ಆಗ್ರಹ
ಚಿಕ್ಕಬಳ್ಳಾಪುರ: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ, ದಲಿತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಬಿ.ವಿ.ಆನಂದ್ ಒತ್ತಾಯಿಸಿದರು. ನಗರದಲ್ಲಿರುವ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಜಿಲ್ಲೆಯಲ್ಲಿ ದಲಿತರ ಪ್ರಬಲ ಸಂಘಟನೆಗೆ ಮತ್ತು ಪ್ರಬಲ ಹೋರಾಟ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ದಲಿತ ಪರ ಸಂಘಟನೆಗಳು ಸೇರಿಸಿ ದಲಿತ ಸಮನ್ವಯ ಸಮಿತಿ ರಚಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಜು.11 ರಂದು ಹೋರಾಟ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಉಪಾಧ್ಯಕ್ಷ ಅಂದಾರ್ಲ ಹಳ್ಳಿ ರಾಮಕೃಷ್ಣ, ನಾರಾಯಣಸ್ವಾಮಿ, ಚಿನ್ನಪ್ಪ, ಸಿ.ಜಿ.ಗಂಗಪ್ಪ, ಮುರಳಿ, ಮಂಜುನಾಥ್ , ಖಜಾಂಚಿ ಜಿ.ಎ.ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಬಿತ್ತನೆ ಬೀಜ ವಿತರಣೆಅಕ್ರಮ: ಪ್ರತಿಭಟನೆ
ಬಾಗೇಪಲ್ಲಿ: ತಾಲೂಕಿನ ಕೃಷಿ ಇಲಾಖೆಗೆ ಸರ್ಕಾರದಿಂದ ನೀಡಿರುವ ಉಚಿತ ಪ್ರಾಯೋಗಿಕ ನೆಲಗಡಲೆ ಬಿತ್ತನೆ ಬೀಜ ವಿತರಣೆ ಮಾಡುವಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆಯ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರ ನೀಡಿರುವ 120 ಚೀಲಗಳಲ್ಲಿ ಸುಮಾರು 80 ಚೀಲಗಳನ್ನು ರೈತರಿಗೆ ಮಾಹಿತಿ ನೀಡದೇ ತರಾತುರಿಯಲ್ಲಿ ಬುಧವಾರ ಕೃಷಿ ಇಲಾಖೆಯ ಕಚೇರಿಯಲ್ಲಿ ಬೆಳಗ್ಗೆ 7.30ರ ಸಮಯದಲ್ಲಿ ಕೆಲವು ರಾಜಕೀಯ ಮತ್ತು ಸಂಘ ಸಂಸ್ಥೆಗಳ ಹಿಂಬಾಲಕರಿಗೆ ವಿತರಣೆ ಮಾಡಲಾಗಿದೆ ಎಂದು ರೈತರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರತಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಪಡೆಯಲು ಆಗಮಿಸಿದ್ದ ರೈತರು ತಕ್ಷಣ ಕೃಷಿ ಇಲಾಖೆಯ ಕಚೇರಿ ಬಾಗಿಲುನ್ನು ಮುಚ್ಚಿ, ಅಧಿಕಾರಿಗಳನ್ನು ತಡೆದರು. ನಿಜವಾದ ರೈತರನ್ನು ಕಡೆಗಣಿಸಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆರೋಪಿಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.
ಕುಡಿಯುವ ನೀರಿಗೆ ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ
ಚಿಂತಾಮಣಿ: ಕುಡಿಯುವ ನೀರು ಪೂರೈಸಲು ವಿಫಲವಾಗಿರುವ ಮುರುಗಮಲ್ಲ ಗ್ರಾಪಂ ಕಾರ್ಯಾಲಯಕ್ಕೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಳೆದ 3 ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಕಲ್ಪಿಸುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಚೇರಿಗೆ ಬೀಗ ಜಡಿದು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಪ್ರತಿಭಟನೆ ನಡೆಸುತ್ತಿದ್ದರೂ ಕಚೇರಿಯತ್ತ ಸುಳಿಯದ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸುದ್ಧಿ ತಿಳಿದ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಹಾಗೂ ಕೆಂಚಾರ್ಲಹಳ್ಳಿ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜಣ್ಣ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಒಂದು ವಾರದೊಳಗೆ ಮುರುಗಮಲ್ಲ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಹೋದರೆ ತಾಪಂ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ದಾಸೋಹ ನೌಕರರ ಧರಣಿ
ಶ್ರೀನಿವಾಸಪುರ: ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿರುವ ಅಕ್ಷರ ದಾಸೋಹ ಸಿಬ್ಬಂದಿಯನ್ನು ಹಾಜರಾತಿ ನೆಪ ಮಾಡಿ ಕೆಲಸದಿಂದ ಕೈ ಬಿಡುತ್ತಿರುವುದನ್ನು ಖಂಡಿಸಿ ಹಾಗೂ ಕನಿಷ್ಟ ಕೂಲಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘದಿಂದ ಶ್ರೀನಿವಾಸಪುರದ ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ತಾಲೂಕು ಪಂಚಾಯಿತಿ ಕಚೇರಿವರೆಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಿಸಿಯೂಟ ಸಿಬ್ಬಂದಿ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಈಶ್ವರಮ್ಮ ಮಾತನಾಡಿ, ದೇಶದ ಶೈಕ್ಷಣಿಕ ಪ್ರಗತಿಗೆ ಒತ್ತು ಕೊಟ್ಟಿರುವ ಈ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟ ಜಾರಿಗೆ ತರಲಾಗಿದೆ. ಅಡುಗೆ ಮಾಡಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಯಾವುದೆ ರೀತಿಯ ಭದ್ರತೆ ನೀಡದೆ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

