ಕೋಲಾರ

ಕಸ ಹೊರ ಹಾಕಿದರೆ 500 ದಂಡ

Published On :

ಪಾ.ಶ್ರೀ.ಅನಂತರಾಮ್
ಕೋಲಾರ: ಕಸದಿಂದ ಕಂಗೆಟ್ಟಿರುವ ಕೋಲಾರ ನಗರವನ್ನು ಸುಂದರವಾಗಿಸಲು ಪಣತೊಟ್ಟಿರುವ ನಗರಸಭೆ ಕಸ ಮುಕ್ತ ಕೋಲಾರಕ್ಕೆ ಸಹಕರಿಸದವರಿಗೆ ದಂಡದ ಜೊತೆಗೆ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ಕೊಡುವವರಿಗೆ ಬಹುಮಾನ ಯೋಜನೆ ಪ್ರಕಟಿಸಿದೆ. ಈ ರಾತಿಯ ಯೋಜನೆ ರಾಜ್ಯದ ಉಡುಪಿ, ತಮಿಳುನಾಡಿನ ಕೊಯಮತ್ತೂರು ಸೇರಿದಂತೆ ದೇಶದ ಕೆಲವೇ ಪ್ರದೇಶದಲ್ಲಿ ಮಾತ್ರ ಜಾರಿಯಲ್ಲಿದ್ದು ಕಸದ ಸಮಸ್ಯೆ ಎದುರಿಸುತ್ತಿರುವ ಕೋಲಾರದಲ್ಲೂ ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ. ನಗರದಲ್ಲಿ ಕ್ಲೀನ್ ಸಿಟಿ ಅಭಿಯಾನ ಕಳೆದ ಜೂ.30ರಂದು ಜಾರಿಗೆ ತರಲಾಗಿದೆ. ಜು.1 ರಿಂದ ಪ್ಲಾಸ್ಟಿಕ್ ನಿಷೇಧ ಕಡ್ಡಾಯಗೊಳಿಸಲಾಗಿದೆ. ಕ್ಲೀನ್ ಸಿಟಿ ಕಾರ್ಯಕ್ರಮ ಕೆಲವು ಗೊಂದಲ, ತಾಂತ್ರಿಕ ಸಮಸ್ಯೆಗಳ ನಡುವೆಯೂ ನಗರದಾಧ್ಯಂತ ಮುಂದುವರೆದಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಪ್ಯಾಪಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿದಲ್ಲಿ ನಗರಸಭೆಯ ಉದ್ದೇಶ ಸಾರ್ಥಕವಾಗುವುದರಲ್ಲಿ ಅನುಮಾನವಿಲ್ಲ.


ಕಸ ವಿಂಗಡಿಸದಿದ್ದರೆ ದಂಡ
ಕೋಲಾರ ನಗರವನ್ನು ಕಸ ಮುಕ್ತವಾಗಿಸಿ ಸುಂದರವಾಗಿಡುವ ಉದ್ದೇಶದಿಂದ ನಗರಸಭೆಯು ಪ್ರತಿನಿತ್ಯ ಮನೆಗಳಲ್ಲಿ ಸಂಗ್ರಹಣೆ ಆಗುವ ಕಸವನ್ನು ಆಯಾ ಮನೆಯವರೇ ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ಕಸ ವಿಲೇವಾರಿಗೆ ಬರುವ ಪೌರ ಕಾರ್ಮಿಕರಿಗೆ ನೀಡದಿದ್ದರೆ ದಿನಕ್ಕೆ 2 ರು.ದಂಡ ಹಾಗೂ ಕಸವನ್ನು ಪೌರ ಕಾರ್ಮಿಕರ ವಶಕ್ಕೆ ನೀಡದೆ ಮನೆಯಿಂದ ಹೊರಗೆ ಕಸವನ್ನು ಎಸೆದರೆ ಪ್ರತಿ ಸಾರಿ 500 ರು.ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಜು.10ರಿಂದ ಜಾರಿಗೆ ತರುವ ರೀತಿಯಲ್ಲಿ ಆಕರ್ಷಕ ಬಹುಮಾನ ಯೋಜನೆಯನ್ನು ಸಹ ನಗರಸಭೆಯಿಂದ ಘೋಷಣೆ ಮಾಡಲಾಗಿದೆ. ಪ್ರತ್ಯೇಕಿಸಲ್ಪಟ್ಟ ಕಸವನ್ನು ನೀಡುವವರಿಗೆ ಸುಮಾರು 1 ಲಕ್ಷ ರು. ಮೌಲ್ಯದ ಆಕರ್ಷಕ ಬಹುಮಾನ ನೀಡುವುದಾಗಿ ತಿಳಿಸಲಾಗಿದೆ.


ಕಸ ವಿಂಗಡಣೆ ಹೇಗೆ?



ಹಸಿ ಕಸ ಎಂದರೆ ಮನೆಯಲ್ಲಿ ಉತ್ಪತ್ತಿಯಾಗುವ ಕೊಳೆಯುವ ಸ್ವಭಾವವುಳ್ಳ ತರಕಾರಿ, ಹಣ್ಣು, ಸಿಪ್ಪೆ, ಅನ್ನ, ಸಾಂಬಾರು ಇತ್ಯಾದಿ. ಒಣ ಕಸವೆಂದರೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗ್ಳು, ಕಾಗದ, ಪೌಡರ್ ಡಬ್ಬ, ಖಾಲಿ ಬಾಟಲ್ಗಳು ಸೇರಿದಂತೆ ಕೊಳೆಯದಿರುವ ವಸ್ತುಗಳು. ಇವುಗಳಲ್ಲಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಎರಡು ಬುಟ್ಟಿ, ಡಬ್ಬ ಇಲ್ಲವೇ ಚೀಲದಲ್ಲಿ ಸಂಗ್ರಹಿಸಿ ಪೌರ ಕಾರ್ಮಿಕರಿಗೆ ಒಪ್ಪಿಸಿ ಅವರು ವಿಂಗಡಿಸಿದ ಕಸವನ್ನು ನಿಗದಿತ ಬುಟ್ಟಿಗಳಲ್ಲಿ ಹಾಕುವರೇ ಎಂಬುದನ್ನು ಖಾತ್ರಿಪಡಿಸಿಕೊಂಡು ಕಾರ್ಡಿನ ಹಿಂದೆ ಮೇಲ್ವಿಚಾರಕರ ಸಹಿ ಪಡೆಯದಿದ್ದರೆ ಬಹುಮಾನ ಸಿಗುವುದಿಲ್ಲ.


ಬಹುಮಾನ ಯೋಜನೆ

ಹಸಿ ಕಸ,ಒಣ ಕಸವನ್ನು ವಿಂಗಡಿಸಿ ಕೊಡುವ ವಿದ್ಯಾರ್ಥಿಗಳಿಗೆ ನಿಯಮಗಳಿಗೆ ಅನುಸಾರವಾಗಿ ಕ್ಯಾಮರ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ, ವಿದ್ಯಾ ಸಂಸ್ಥೆಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ, ಮನೆಯ ಮಾಲೀಕರು, ಬಾಡಿಗೆದಾರರಿಗೆ ಮಿಕ್ಸಿ ಮತ್ತು ಕುಕ್ಕರ್ ಅನ್ನು ಬಹುಮಾನವಾಗಿ ನೀಡಲು ನಿರ್ಧರಿಸಲಾಗಿದೆ. ನಗರಸಭೆಯಿಂದ ಈ ನೂತನ ಯೋಜನೆಗಾಗಿ ಕಾರ್ಡ್ ಸಿದ್ಧಪಡಿಸಿದ್ದು ಸ್ವಯಂ ಸೇವಕರ ಮೂಲಕ ಪ್ರತಿಯೊಂದು ಮನೆಗೆ ವಿತರಣೆ ಮಾಡಲಾಗುತ್ತಿದೆ. ಸದರಿ ಕಾರ್ಡಿನಲ್ಲಿ ಮೂರು ತಿಂಗಳಿಗೆ ಅನ್ವಯವಾಗುವ ರೀತಿಯಲ್ಲಿ ದಿನಗಳನ್ನು ಗೊತ್ತುಪಡಿಸಲಾಗಿದೆ. ಪ್ರತಿದಿನ ಕಸವನ್ನು ವಿಂಗಡಿಸಿಕೊಟ್ಟ ನಂತರ ಸಂಬಂಧಪಟ್ಟ ಪೌರ ಕಾರ್ಮಿಕರಿಂದ ಆಯಾ ದಿನವೇ ಕಾರ್ಡಿನ ಮೇಲೆ ಸಹಿ ಕಡ್ಡಾಯವಾಗಿ ಪಡೆಯಬೇಕು.

ಕಸದಿಂದ ಗೊಬ್ಬರ ತಯಾರಿಕೆ


ಪ್ರತ್ಯೇಕಿಸಲ್ಪಟ್ಟ ಕಸವನ್ನು ಏನು ಮಾಡಬಹುದೆಂಬ ಅನುಮಾನ ಆಚ್ಚರಿ ಉಂಟಾಗುವುದು ಸಹಜ. ಇದಕ್ಕಾಗಿಯೇ ನಗರಸಭೆ ವಿಶೇಷ ಯೋಜನೆ ರೂಪಿಸಿದೆ. ಕಸವನ್ನು ರಸ ಮಾಡುವ ಮೂಲಕ ನಗರಸಭೆಗೆ ಆದಾಯ ಬರುವಂತೆ ಮಾಡಲು ನಿರ್ಧರಿಸಿದೆ. ಹಸಿ ಕಸವನ್ನು ಬಯೋಗ್ಯಾಸ್, ವಿದ್ಯುತ್, ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲು ಉದ್ದೇಶಿಸಿದೆ. ಯೋಜನೆಗೆ ಜನತೆಯಿಂದ ಸಹಕಾರ ಪಡೆಯುವ ಜತೆಗೆ ನಗರಸಭೆಯವರು ಸಹ ಕನಿಷ್ಠ ಎರಡು ತಿಂಗಳು ಬದ್ಧತೆಯಿಂದ ಕೆಲಸ ಮಾಡಿ ಜನತೆಯಲ್ಲಿ ಅರಿವು ಮೂಡಿಸಿದರೆ ಕೋಲಾರ ಕಸ ಮುಕ್ತವಾಗುವುದರಲ್ಲಿ ಅನುಮಾನವಿಲ್ಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.