ಕೋಲಾರ

ಡಿಕ್ಕಿ: ಲಾರಿ ಚಾಲಕಗೆ ಥಳಿತ

Published On :

ಚಿಂತಾಮಣಿ: ದ್ವಿಚಕ್ರ ವಾಹನ ಸವಾರನಿಗೆ ಸರಕು ಸಾಗಣೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರನ ಕಾಲು ಮುರಿದಿದೆ. ಈ ಸಂದರ್ಭದಲ್ಲಿ  ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನಿಗೆ ನಾಗರಿಕರು ಧರ್ಮದೇಟು ನೀಡಿರುವ ಘಟನೆ ಕೋಲಾರ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.  ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಚಾಂದ್ ಪಾಷ ಎಂಬಾತನ ಕಾಲು ಮುರಿದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ಬಳಿಕ ಲಾರಿ ಸಮೇತ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಬೆನ್ನಟ್ಟಿದ ಸಾರ್ವಜನಿಕರು ಚೌಡರೆಡ್ಡಿ ಪಾಳ್ಯದಲ್ಲಿ ಲಾರಿ ತಡೆಗಟ್ಟಿ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.  ನಂತರ ಚಾಲಕ ಲಾರಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ನಗರ ಠಾಣೆಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುನನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಪರಾರಿಯಾಗಿರುವ ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಗಾಂಜಾ ಮಾರಾಟ: ಬಂಧನ
ಬಂಗಾರಪೇಟೆ: ಗಾಂಜಾ ಮಾರಾಟ ಮಾರುತ್ತಿದ್ದ ಇಬ್ಬರು ಮಹಿಳೆಯರನ್ನು ಕಾಮಸಮುದ್ರ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬಲಮಂದೆ ಗ್ರಾಮದ ವೆಂಕಟಮ್ಮ ಹಾಗೂ ಚಂದ್ರಮ್ಮ ಬಂಧಿತರು. ಶನಿವಾರ ಸಂಜೆ ತಮಿಳುನಾಡಿನಿಂದ ಸುಮಾರು 45 ಸಾವಿರ ಮೌಲ್ಯದ 7 ಕೆಜಿ ಗಾಂಜಾವನ್ನು ಬಸ್ನಲ್ಲಿ ತಂದು ಗ್ರಾಮದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಈ ದಂಧೆ ಹಲವು ವರ್ಷಗಳಿಂದ ನಿರಂತರವಾಗಿ ಸಾಗಿದ್ದು ಕೆಜಿಎಫ್ ಡಿವೈಎಸ್ಪಿ ವಿವೇಕಾನಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಮಾಲು ಸಮೇತ ಬಂಧಿಸಿದ್ದಾರೆ. ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಸಾವು: ಕೊಲೆ ಶಂಕೆ
ಕೋಲಾರ: ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಯುವಕನೊಬ್ಬ ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಮೃತನ ಕುಟುಂಬದವರು ಈ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತಪಡಿಸಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.ರಾಮದಾಸ (37)ಮೃತ ಯುವಕನಾಗಿದ್ದು, ಚಿಂತಾಮಣಿ ತಾಲೂಕಿನ ನಾರಾಯಣ ಹಳ್ಳಿಯ ಮೂಲದವನಾಗಿದ್ದಾನೆ. ಅಲೆಮಾರಿ ಜನಾಂಗದವರಾಗಿರುವ ಮೃತನು ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಅತಿಯಾಗಿ ಕುಡಿದು ಬಂದ ಈತ ಬಿದ್ದು ಗಾಯಗೊಂಡು ಮೃತಪಟ್ಟನೆಂದು ಮುನಿಯಮ್ಮ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರೆ. ಮೃತನ ಸಂಬಂಧಿಕರು ಇದು ಕೊಲೆಯಾಗಿದ್ದು ಸೂಕ್ತ ತನಿಖೆಗೆ ಕೋರಿದ್ದಾರೆ.
ಲಾರಿ ಡಿಕ್ಕಿ; ಅಪಾರ ಹಾನಿ
ಕೆಜಿಎಫ್: ಲಾರಿ ಚಾಲಕನ ಆಯಾತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಲಾರಿಯಲ್ಲಿ ತುಂಬಿದ್ದ ತೆಂಗಿನ ಕಾಯಿ ಹಾಗೂ ಲಾರಿ ಸಂಪೂರ್ಣ ಸುಟ್ಟು ಹೋಗಿದೆ.  ಸಂದಘಟ್ಟ ಕ್ರಾಸ್ ಬಳಿ ರಸ್ತೆಯ ಬಲಗಡೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿಗಳು ಕತ್ತರಿಸಿ ಲಾರಿ ಮೇಲೆ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಸುಮಾರು ರು. 2,11,910 ತೆಂಗಿನ ಕಾಯಿಗಳು ಮತ್ತು ರು. 3.50 ಲಕ್ಷ ಮೌಲ್ಯದ ಲಾರಿಯ ಬಿಡಿ ಭಾಗಗಳು ಹಾಗೂ ದಾಖಲಾತಿಗಳು, ಎಟಿಎಂ ಹಾಗೂ ಪಾನ್ ಕಾರ್ಡ್ ಮತ್ತಿತರೆ ವಸ್ತುಗಳು ಸುಟ್ಟು ಹೋಗಿದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.