ಕೋಲಾರ

ಕೋಚಿಮುಲ್‌ನಿಂದ ಅಗೌರವ

Published On :

ಕೋಲಾರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಕೋಚಿಮುಲ್ ಅಗೌರವದಿಂದ ನಡೆಸಿಕೊಳ್ಳುತ್ತಿದೆ. ಗುರುತಿನ ಚೀಟಿ ನೀಡಿಲ್ಲ. ಕೂರಲೂ ಜಾಗವೂ ಇಲ್ಲ ಎಂಬ ಆರೋಪಗಳು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ, ಅಧ್ಯಕ್ಷರ ಪ್ರಾದೇಶಿಕ ಸಭೆಯಲ್ಲಿ ಪ್ರತಿಧ್ವನಿಸಿತು.
ಬುಧವಾರ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿನಡೆದ ಎಂಪಿಸಿಎಸ್‌ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಈ ಆರೋಪ ಮಾಡಿದರು.
ಒಕ್ಕೂಟ ಮತ್ತು ಉತ್ಪಾದಕರ ನಡುವೆ ಸುಮಾರು 9 ವ್ಯತ್ಯಾಸವಿದೆ. ಮೂರು ಕಾಸಿಗೆ ದುಡಿಯುತ್ತಿರುವ ಕಾರ್ಯದರ್ಶಿಗಳು ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಕೈ ತುಂಬಾ ಸಂಬಳ ಪಡೆಯುವ ಅಧಿಕಾರಿಗಳು ರೈತರ ಮತ್ತು ಕಾರ್ಯದರ್ಶಿಗಳ ಸಮಸ್ಯೆಗಳನ್ನು ಮೊದಲು ತಿಳಿದುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿಗಳಿಗೆ ಊರು ಮತ್ತು ಹೆಸರುಗಳನ್ನು ಒಳಗೊಂಡ ಗುರುತಿನ ಚೀಟಿ ನೀಡುವಂತೆ 5 ವರ್ಷಗಳಿಂದ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ, ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲವೆಂದು ಆರೋಪಿಸಿದರು.
ಪ್ರತಿಭಟನೆಯ ಎಚ್ಚರಿಕೆ: ಕಾರ್ಯದರ್ಶಿಗಳಿಗೆ ಪಿಎಫ್, ಪ್ರೋತ್ಸಾಹ ಧನ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಸರಕಾರ ನೀಡುವಂತಹ ಮೂರು ಕಾಸಿಗೆ ಕಾರ್ಯದರ್ಶಿಗಳು ಸಾಕಷ್ಟು ಕೆಲಸಗಳನ್ನು ಮಾಡುತ್ತಿರುವಾಗ ಅವರ ಸಮಸ್ಯೆಗಳ ಬಗ್ಗೆಯೂ ಆಡಳಿತ ಮಂಡಳಿ ಗಮನ ಹರಿಸಬೇಕಾಗಿದೆ ಎಂದು ಆಗ್ರಹಿಸಿದರು.
ರಾಜಕಲ್ಲಹಳ್ಳಿ ಮಂಜುನಾಥ್ ಮಾತನಾಡಿ, ಒಕ್ಕೂಟಕ್ಕೆ ಹೋಗುವಂತಹ ಕಾರ್ಯದರ್ಶಿಗಳನ್ನು ಅತ್ಯಂತ ಅಗೌರವದಿಂದ ಅಧಿಕಾರಿಗಳು ನಡೆಸಿಕೊಳ್ಳುತ್ತಿದ್ದರೆ,  ಕನಿಷ್ಟ ತಮ್ಮ ಮಾತನ್ನು ಕೇಳುವಂತಹ ಸೌಜನ್ಯ ಇವರಿಗಿಲ್ಲವೆಂದು ಟೀಕಿಸಿದರು. ಕೋಚಿಮುಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್, ಒಕ್ಕೂಟ ಮತ್ತು ಉತ್ಪಾದಕರ ನಡುವೆ ವ್ಯತ್ಯಾಸ ಸಾಕಷ್ಟು ಇದೆ ಈ ಬಗ್ಗೆ ಮಹಾಮಂಡಳಿಯ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಧಾನ ವ್ಯವಸ್ಥಾಪಕ ಡಾ.ರವಿಶಂಕರ್ ಹೆಗ್ಗಡೆ ಮಾತನಾಡಿ, ಕೋಚಿಮುಲ್ ಹಾಲು ಶೇಖರಣೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ಆದರೆ ಗುಣಮಟ್ಟದಲ್ಲಿ ಕೊನೆ ಸ್ಥಾನದಲ್ಲಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಚಿಮುಲ್ ನಿರ್ದೇಶಕ, ಆರ್.ರಾಮಕೃಷ್ಣೇಗೌಡ ಮಾತನಾಡಿ, ರೈತರು ಮತ್ತು ಕಾರ್ಯದರ್ಶಿಗಳ ಸಮಸ್ಯೆಯನ್ನು ಬಗೆಹರಿಸಿದಾಗ ಮಾತ್ರ ಒಕ್ಕೂಟ ಸುಗಮವಾಗಿ ನಡೆಯಲು ಸಾಧ್ಯವೆಂದರು. ಇದೇ ವೇಳೆ, ಆರ್.ರಾಮಕೃಷ್ಣೇಗೌಡ, ಜಿ.ಕಾಂತರಾಜು, ಪಾರ್ವತಮ್ಮ, ಎನ್.ಜಿ.ಬ್ಯಾಟಪ್ಪ ಅವರನ್ನು ಸನ್ಮಾನಿಸಲಾಯಿತು. ಕೋಚಿಮುಲ್‌ನ ಮಾಜಿ ನಿರ್ದೇಶಕ ಮದ್ದೇರಿ ರಾಮೇಗೌಡ ಉಪಸ್ಥಿತರಿದ್ದರು. ಚಿನ್ಮಯ ವಿದ್ಯಾಲಯದ ಸಿ.ಎಸ್.ಶ್ರೀವಿದ್ಯಾ ಮತ್ತು ತಂಡ ಪ್ರಾರ್ಥಿಸಿ, ವಿಸ್ತರಣಾಧಿಕಾರಿ ಶ್ರೀನಿವಾಸ ನಿರೂಪಿಸಿ, ಉಪವ್ಯವಸ್ಥಾಪಕ ಶ್ರೀನಿವಾಸಗೌಡ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.