ಕಾಮರಾಜ್ಯವಾಗಲು ಬಿಡಲ್ಲ
ಕೋಲಾರ: ಜುಲೈನಲ್ಲಿ ಒಟ್ಟು 9 ಅತ್ಯಾಚಾರ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಕೆಲವ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ಅತ್ಯಾಚಾರ, ಲೈಗಿಂಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ನಿರಾಕರಿಸುವ ಇಲ್ಲವೇ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಈ ವಿಚಾರವಾಗಿ ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚಿಸಲಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ದೂರುಗಳನ್ನು ಸ್ವೀಕರಿಸದೆ ಇರಬಾರದು. ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಬೇಕೆ ಹೊರತು ಇಂತಹ ಘಟನೆಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಲು ಅಥವಾ ಒತ್ತಡಗಳಿಗೆ ಮಣಿದು ದೂರು ದಾಖಲಿಸದೆ ಹೋದರೆ ಸಂಬಂಧಪಟ್ಟ ಠಾಣೆಗಳ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಜಯ್ ಹಿಲೋರಿ ಹೇಳಿದರು.
ಇಂಥ ಪ್ರಕರಣಗಳಲ್ಲಿ ಬಂಧಿತರಾಗುವ ಆರೋಪಿಗಳು ಜೈಲಿನಿಂದ ಹೊರ ಬರದ ರೀತಿಯಲ್ಲಿ ಎಲ್ಲಾ ರೀತಿಯ ನಿಯಮ ಪಾಲಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವುದಕ್ಕೆ ಕಾಲಾವಕಾಶ ಬೇಕಾಗುವುದರಿಂದ ಜನತೆ ಸಮಾಧಾನದಿಂದ ಇರಬೇಕೆಂದು ಮನವಿ ಮಾಡಿದರು. ದೂರುಗಳ ಸ್ವೀಕಾರ ವಿಚಾರದಲ್ಲಿ ಯಾವುದೇ ಠಾಣೆಯಲ್ಲಿ ವಿಳಂಬ ಇಲ್ಲವೇ ರಾಜಿ ಸಂಧಾನ ಮಾಡುವುದು ಕಂಡು ಬಂದಲ್ಲಿ ಸದರಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ವತಿಯಿಂದ ಜು.20ರಿಂದ 21ರವರೆಗೆ 242 ಜಾಗೃತಿ ಸಭೆ ನಡೆಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಉಪ ಕಾರ್ಯದರ್ಶಿ ಆರೋಕ್ಯಸ್ವಾಮಿ, ಜಿಲ್ಲಾ ಎಎಸ್ಪಿ ಜಮೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶಕುಂತಲಾ, ಪಿಯು ಡಿಡಿ ದೊರೆಸ್ವಾಮಿ, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಜಯರಾಮರೆಡ್ಡಿ ಇದ್ದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೊಡುವ ಕಾಯ್ದೆ ಜಾರಿ ಮಾಡಿ
ಕೆಜಿಎಫ್: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಸರ್ಕಾರ ನೂತನ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಸಂಚಾಲಕ ಸುನಿಲ್ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ರಸ್ತೆತಡೆ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸುನಿಲ್ಕುಮಾರ್ ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣ ನೆನಪಿಸುವ ರೀತಿಯ ಕರಾಳ ಘಟನೆ ಸುಕ್ರವಾರ ಪುಲಕೇಶಿನಗರದಲ್ಲಿ ನಡೆದಿದೆ.
ಈ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಒಂದನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ, ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, 22 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ತನ್ನ ಗೆಳೆಯನ ಸಮ್ಮುಖದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ನಾಸೀರ್ ಹೈದರ್ನನ್ನು ಗಲ್ಲಿಗೇರಿಸಬೇಕು ಮತ್ತು ಇನ್ನಿತರ ಅತ್ಯಾಚಾರಿ ಆರೋಪಿಗಳನ್ನು ಜೀವಾವಧಿ ಶಿಕ್ಷೆಗೊಳಪಡಿಸಬೇಕು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ನಗರದ ಸುಭಾಷಿನಿ ಬಾಲಕೀಯರ ಕಾಲೇಜಿನಿಂದ ಮೆರವಣಿಗೆ ಹೋರಟ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಸ್ಪತ್ರೆ ರಸ್ತೆ, ಸೂರಜ್ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ ರಸ್ತೆ, ಗೀತಾ ರಸ್ತೆ ಮೂಲಕ ನಾಡ ಕಚೇರಿ ಮುಂಭಾಗ ಸರ್ಕಾರವ ವಿರುದ್ದ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಪ್ರತಿಭಟನಾಕಾರರು ಕರ್ನಾಟಕ ರಾಜ್ಯವೊಂದರಲ್ಲೇ 2009ರಿಂದ 2011ರ ವರೆಗೆ 14,989 ಮಹಿಳೆ, ಯುವತಿಯರು ಕಾಣೆಯಾಗಿದ್ದು ಕೇವಲ ಬೆಂಗಳೂರಿನಲ್ಲಿ ಈ ಸಾಲಿನಲ್ಲಿ ಪ್ರಸಕ್ತ 325 ಬಾಲಕಿಯರು ಹಾಗೂ 151 ಯುವತಿಯರ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿವೆ ರಾಜ್ಯದಲ್ಲಿ ಈ ರೀತಿ ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿದ್ದೆ ಮಾಡುತ್ತಿದೆ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಗದೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಕಾನೂನು ಜಾರಿಗೊಳಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನಾಡಕಚೇರಿ ಉಪತಹಸೀಲ್ದಾರ್ ಇನಾಯತ್ತುಲ್ಲಾಖಾನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಹರೀಶ್, ಬಸವರಾಜ್, ಸುಬ್ರಮಣಿ, ವರದರಾಜ್, ಮಹೇಶ್, ರಮೇಶ್, ಮಂಜುಳಾ, ಅಶ್ವಿನಿ, ಪ್ರಿಯಾ, ಶ್ರೀಧರ್ ಸೇರಿದಂತೆ ಸುಭಾಷಿಣಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂತ್ರಸ್ತರಿಗೆ 10 ಸಾವಿರ ಪರಿಹಾರ
ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂತ್ರಸ್ತರಿಗೆ ತಲಾ 10 ಸಾವಿರ ತಕ್ಷಣ ಪರಿಹಾರ,ಚಿಕಿತ್ಸಾ ಸೌಲಭ್ಯ ಹಾಗೂ ಬಾಲಕಿಯರಿಗೆ ಶಿಕ್ಷಣ ಮುಂದುವರೆಸಲು ಪರ್ಯಾಯ ವ್ಯವಸ್ಥೆ ಸೇರಿದಂತೆ ಅಗತ್ಯ ನೆರವು ಒದಗಿಸಲಾಗಿದೆ ಎಂದು ಡಿಸಿ ರವಿ ತಿಳಿಸಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರಿಗೆ ನೀಡಿರುವ ನೆರವಿನ ಬಗ್ಗೆ ಮಾಹಿತಿ ನೀಡಿದರು. ಮಾಲೂರು ತಾಲೂಕಿನ ಮಾಸ್ತಿ ಠಾಣೆಯ ವ್ಯಾಪ್ತಿಯ ಕುಪ್ಪೂರು, ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು, ಹೊದಲಿ ಗ್ರಾಮ, ಮಾಲೂರಿನ ಅಂಬೇಡ್ಕರ್ ಕಾಲೋನಿ, ಮುಳಬಾಗಲು ತಾಲೂಕಿನ ನಂಗಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಆರು ಅತ್ಯಾಚಾರ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಬಾಲಕಿಯರಿಗೆ ಶಿಕ್ಷಣ ಮುಂದುವರೆಸಲು ಪೋಷಕರ ಅನುಮತಿ ಮೇರೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಮತ್ತೊಬ್ಬರನ್ನು ಕೆಜಿಎಫ್ನಲ್ಲಿರುವ ಬಾಲ ಮಂದಿರಕ್ಕೆ ಸೇರಿಸಲಾಗಿದೆ ಎಂದರು.
ಮಿತಿಮೀರುತ್ತಿದ್ದರೂ ಕೈಕಟ್ಟಿ ಕುಳಿತ ಸರ್ಕಾರ
ಕೋಲಾರ/ಶ್ರೀನಿವಾಸಪುರ:ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯಗಳು ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಕಟ್ಟಿ ಕೂತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಿ.ಎಂ.ಚಂದ್ರು ಆರೋಪಿಸಿದ್ದಾರೆ. ಕರವೇ ನೇತೃತ್ವದಲ್ಲಿ ಯಲ್ದೂರು ಗ್ರಾಮದ ಶಾಲಾ ಮಕ್ಕಳೊಂದಿಗೆ ಹೆಣ್ಣು ಮಕ್ಕಳ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರತಿನಿತ್ಯ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಮ ಕ್ರಮಕ್ಕೆ ದೈರ್ಯ ಮಾಡುತ್ತಿಲ್ಲವೆಂದು ದೂರಿದ್ದಾರೆ. ಕರವೇ ಗೌರವಾ ಅಧ್ಯಕ್ಷ ಹರಿನಾಥ್, ಪ್ರಧಾನ ಕಾರ್ಯದರ್ಶಿ ಬಾಬು, ಯಲ್ದೂರು ಹೋಬಳಿ ರಾಮಮೂರ್ತಿ, ಉಪಾಧ್ಯಕ್ಷ ಮುರಳಿ, ಧನಂಜಯ ಇದ್ದರು.
ಮಹಿಳೆಯ ಮಾನಭಂಗಕ್ಕೆ ಯತ್ನ
ಕೋಲಾರ: ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದಲ್ಲಿ ಭಾನುವಾರ ರಾತ್ರಿ ಓಬಳೇಶ, ನಾಗರಾಜ್ ಮತ್ತು ರವಿ ಎಂಬುವರು ಗಂಡ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದು ಇದರಿಂದ ತನಗೆ ಮಾರಣಾಂತಿಕ ಪೆಟ್ಟಾಗಿದೆ ಎಂದು ಮಹಿಳೆ ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ
ಕೋಲಾರ: ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ದೊಡ್ನಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ ನಾರಾಯಣಸ್ವಾಮಿ ಎಂಬುವರು ಬಾಲಕಿ ಶಾಲೆಗೆ ಹೋಗುವಾಗ ಹಿಂಬಾಲಿಸುವುದು ಹಾಗೂ ಮನೆಯಲ್ಲಿ ಒಬ್ಬಳೆ ಇದ್ದಾಗ ಅಕ್ರಮವಾಗಿ ಪ್ರವೇಶ ಮಾಡಿ ಲೈಂಗಿಕ ಕಿರುಕುಳ ನೀಡಿದ್ದನೆಂದು ಬಾಲಕಿಯ ತಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಹಿಳಾ ಗ್ರಾಮ ಸಭೆ
ಜಿಲ್ಲೆಯಲ್ಲಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಇನ್ನು ಮುಂದೆ ಈ ರೀತಿ ಆಗದಂತೆ ಜನ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಅಲ್ಲಿ ಅತ್ಯಾಚಾರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅರಿವು ಮೂಡಿಸಲಾಗುತ್ತದೆ ಹಾಗೂ ವಿಕೃತ ಕಾಮುಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತದೆ ಎಂದು ವಿವರಿಸಿದರು. ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಪಂ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಎನ್.ಜಿ.ಒ ಹಾಗೂ ಸ್ತ್ರೀಶಕ್ತಿ ಸಂಘಗಳನ್ನು ಗ್ರಾಮ ಸಭೆಗೆ ಬಳಕಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಅಹಿತಕರ ಘಟನೆಗಳನ್ನು ತಪ್ಪಿಸಲು ಪ್ರಯತ್ನಿಸಲಾಗುವುದು. ಅದೇ ರೀತಿ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಕಾರ್ಯಕ್ರಮ ರೂಪಿಸಬೇಕೆಂದರು. ಜಿಲ್ಲೆಯ ಪ್ರಜ್ಞಾವಂತ ನಾಗರಿಕರು, ಸಂಘ ಸಂಸ್ಥೆಗಳು ಒಗ್ಗೂಡಿ ಜಿಲ್ಲೆಯಲ್ಲಿ ಇನ್ನು ಮುಂದೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಯಾವುದೇ ಕೃತ್ಯಗಳು ನಡೆಯದಂತೆ ಸಂಘಟಿತ ಪ್ರಯತ್ನ ಮಾಡಬೇಕಾಗಿದ್ದು, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಒಗ್ಗೂಡಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಎಷ್ಟು ಪ್ರಕರಣಗಳು?
2014ರ ಜೂನ್ನಿಂದ ಜುಲೈವರೆಗೆ ಒಟ್ಟು 28 ಪ್ರಕರಣಗಳು ದಾಖಲು ಆಗಿದ್ದು, ಈ ಪೈಕಿ ಆರು ಅತ್ಯಾಚಾರ ಹಾಗೂ 22 ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ. ಜುಲೈ ತಿಂಗಳಲ್ಲಿ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ 2, ರಾಯಲ್ಪಾಡು ಠಾಣೆಯಲ್ಲಿ 1, ಮಾಲೂರು ಠಾಣೆಯಲ್ಲಿ 1, ಮಾಸ್ತಿಯಲ್ಲಿ 1 ಹಾಗೂ ಮುಳಬಾಗಲು ತಾಲೂಕಿನ ನಂಗಲಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 6 ಅತ್ಯಾಚಾರ ಪ್ರಕರಣಗಳು ಹಾಗೂ ಲೈಂಗಿಕ ಕಿರಕುಳಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ 1, ಕೋಲಾರ ನಗರಠಾಣೆಯಲ್ಲಿ 1 ಹಾಗೂ ಮಾಲೂರು ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ಸೇರಿ 9 ವರದಿಗಳಾಗಿವೆ. ಈ ಎಲ್ಲಾ ಪ್ರಕರಣಗಳ ಆರೋಪಿಗಳ ವಿರುದ್ಧ ಪ್ರಕರಣ ದಾಖಲುಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

