ಕೋಲಾರ

ಯಶಸ್ವಿಯಾಗಿ ನಡೆದ ಸೀಮಂತ ಸಮಾರಂಭ

Published On :

ಗೌರಿಬಿದನೂರು: ನಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಕ್ಯೂ ಫಾರ್ಮಾಸಿಟಿಕಲ್ಸ್ ಇಂಡಿಯಾ ಲಿ., ದಾನಿಗಳಾದ ಖಾದರ್ ಸುಭಾನ್ ಖಾನ್ ಮತ್ತು ಕುಟುಂಬ, ಮಹತಿ ಟ್ರಸ್ಟ್ ಆಶ್ರಯದಲ್ಲಿ ಗರ್ಭಿಣಿಯರಿಗೆ 29ನೇ ಸಾಮೂಹಿಕ ಸೀಮಂತ ಕಾರ್ಯಕ್ರಮ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ.ಕಾಮೇಶ್ವರಿ, ಖಾದರ್ ಸುಭಾನ್ ಖಾನ್, ವೈದ್ಯಾಧಿಕಾರಿ ಡಾ.ರಘುನಾಥ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಹಿ ಊಟವಿತ್ತು. ರುಕ್ಷ್ಮಿಣ್ಣಮ್ಮ, ಅಶ್ವತ್ಥರೆಡ್ಡಿ, ಜಗದೀಶ್ ಸೇರಿ ಅನೇಕರು ಹಾಜರಿದ್ದರು.
ಅರ್ಜಿ ಆಹ್ವಾನ
ಮಾಲೂರು: ಇಲ್ಲಿನ ನಂದಾ ದೀಪ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಬುದ್ಧಿ ಮಾಂದ್ಯ ಮಕ್ಕಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪಟ್ಟಣದ ಹೂರವಲಯದ ವೈಟ್ ಗಾರ್ಡನ್ ನಲ್ಲಿರುವ ನಂದಾ ದೀಪ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರಿಂದ ತರಬೇತಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಕ್ಕಾಗಿ 9449404960 ರ ಮೂಲಕ ಸಂಪರ್ಕಿಸಲು ಶಾಲಾ ವ್ಯವಸ್ಥಾಪಕ ರಮೇಶ್ ತಿಳಿಸಿದ್ದಾರೆ.


ಮನಸೂರೆಗೊಂಡ ಸಾಂಸ್ಕೃತಿಕ ಸೌರಭ


ಗೌರಿಬಿದನೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿವರ್ತನಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಇಡಗೂರು ಗ್ರಾಮದ ರುದ್ರಕವಿ ರಂಗಮಂದಿರಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಪಿ.ಟಿ.ಕೃಷ್ಣಮೂರ್ತಿ ನೆರವೇರಿಸಿದರೆ, ಅಧ್ಯಕ್ಷತೆ ಜಿ.ಸೋಮಯ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೈ.ಎಲ್.ಹನಮಂತರಾವ್,  ಶಿಲ್ಪಾ ಶಿವಶಂಕರ್, ರಂಗಕಲಾವಿದ ಭೀಮಯ್ಯ, ಸಂಸ್ಥೆಯ ಅಧ್ಯಕ್ಷ ಸುನಂದ ವಿಶ್ವನಾಥ, ರಂಗ ಕಲಾವಿದ ಎಂ.ಸಿ ವಿಶ್ವನಾಥ ಹಾಗೂ ಅನೇಕ ಅತಿಥಿಗಳು ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಕಲಾವಿದ ಮುಖವೀಣೆ ಅಂಜಿನಪ್ಪ ಅವರ ಕಲಾವಾದನ ಗ್ರಾಮಸ್ಥರ ಮನಸೂರೆಗೊಂಡಿತು. ಹಾಸ್ಯ ಕಲಾವಿದ ಗಣೇಶ್ ತಂಡದಿಂದ ಅದ್ಭುತ ನಗೆಹಬ್ಬ ಮತ್ತು ತಿಪಟೂರು ಕಲಾವಿದ ಗುರುಸಿದ್ದಪ್ಪರಿಂದ ಭಜನೆ ಹಾಗೂ ಚಿಂತಾಮಣಿ ಮಂಜುನಾಥ ತಂಡದಿಂದ ಸುಗಮ ಸಂಗೀತ ನಡೆಯಿತು. ಮಹೇಶ್ ಅವರಿಂದ ಪರಿಸರ ಗೀತೆಗಳ ಗಾಯನ, ರಾಮಾಂಜಿನಪ್ಪವರಿಂದ ಜಾನಪದ ಝೇಂಕಾರ ಕಾರ್ಯಕ್ರಮ ಹಾಗೂ ದೇವನಹಳ್ಳಿ ದೇವರಾಜ್ ಅವರ ಪರಿವರ್ತನ ಕಲಾ ಸಂಸ್ಥೆಯ ವತಿಯಿಂದ ಅಪ್ಪ ಮಗ ಮತ್ತು ಪರಿವರ್ತನಾ ಪ್ರತಿಷ್ಠಾನ ವತಿಯಿಂದ ಕಂಬಳಿ ಸೇವೆ ನಾಟಕಗಳು ನಡೆದವು. ಇಡಗುಂಜಿ ಕಲಾಸಂಸ್ಥೆ ವತಿಯಿಂದ ಭರತನಾಟ್ಯ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ ಹಾಗೂ ಅಭಿನಯ ಚಕ್ರವರ್ತಿ ವಿಶ್ವನಾಥ್ ಅವರಿಂದ ಗೌಡಲಕ್ಕನ ರಂಗ ತುಣುಕ ಏರ್ಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.