ಕೋಲಾರ

ರಸ್ತೆಗಳ ಮಾಹಿತಿಗೆ ಆರ್‌ಐಎಸ್

Published On :

ಕೋಲಾರ: ಕರ್ನಾಟಕದಲ್ಲಿನ ಎಲ್ಲಾ ರಸ್ತೆಗಳ ಸಮಗ್ರ ಮಾಹಿತಿ ದಾಖಲಿಸಲು ಹೊಸದಾಗಿ ರೋಟ್ ಇನ್ಫಾರ್ಮೆಶನ್ ಸಿಸ್ಟಮ್(ಐ.ಆರ್.ಎಸ್) ಅನ್ನು ಲೋಕೋಪಯೋಗಿ ಇಲಾಖೆ ಜಾರಿಗೆ ತರುತ್ತಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಅವರು ಇಲಾಖೆಯ ಬೆಂಗಳೂರು ವೃತ್ತಕ್ಕೆ ಸೇರಿದ ಆರು ಜಿಲ್ಲೆಗಳಲ್ಲಿನ ರಸ್ತೆ ಮತ್ತು ಕಟ್ಟಡಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ರಸ್ತೆಗಳ ಸ್ಥಿತಿ-ಗತಿ ಮಾಹತಿಯನ್ನು ಸಾರ್ವಜನಿಕರು ತಿಳಿಯಲು ಸಹಾಯವಾಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಭಾರತದಲ್ಲೇ ಮೊದಲ ಬಾರಿಗೆ ಬಾರಿಗೆ ಈ ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಇನ್ನು15-20 ದಿನಗಳಲ್ಲಿ ಹೊಸ ಸಾಫ್ಟ್‌ವೇರ್ ಆರ್‌ಐಎಸ್ ಅನುಷ್‌ಠಾನಗೊಳ್ಳಲಿದೆ ಎಂದರು. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ವಿವರ, ಜಿಲ್ಲಾ, ತಾಲೂಕು, ಗ್ರಾಮಾಂತರ ವ್ಯಾಪ್ತಿಯ ರಸ್ತೆಗಳ ವಿವರ, ರಸ್ತೆಗಳ ವ್ಯಾಪ್ತಿ(ಕಿಮೀ), ಕಾಮಾಗಾರಿ ವಿವರ, ಗುಣಮಟ್ಟ, ರಸ್ತೆ ನಿರ್ಮಾಣ ಹಾಗೂ ದುರಸ್ತಿಗೆ ಆಗಿರುವ ವೆಚ್ಚ, ಗುತ್ತಿಗೆದಾರರ ಹೆಸರು, ಕಾಮಗಾರಿ ಉಸ್ತುವಾರಿ ನೋಡಿಕೊಂಡ ಎಂಜನಿಯರ್ ಇನ್ನಿತರ ಮಾಹಿತಿ ನೋಡಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಚಿಕ್ಕರಾಯಪ್ಪ, ಅಧಿಕಾರಿಗಳಾದ ಮೃತ್ಯುಂಜಯಸ್ವಾಮಿ, ಜಯಚಂದ್ರ, ರಮೇಶ್, ರಾಜೇಂದ್ರ ಇದ್ದರು.


ಕಳಪೆ ಕಾಮಗಾರಿ: ಕ್ರಮಕ್ಕೆ ಆಗ್ರಹ        
ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕಳೆಪಯಾಗಿವೆ ಎಂದು ಆರೋಪಿಸಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ನಗರಸಭ ಸದಸ್ಯ ಎಸ್.ಆರ್.ಮುರಳೀಗೌಡ ಮನವಿ ಸಲ್ಲಿಸಿದರು. ಮಂಗಳವಾರ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಗಳ ಕಾಮಗಾರಿ, ಶಾಲಾ ಕಾಜುಗಳು ನಿರ್ವಹಣೆ ತೀರಾ ಕಳಪೆಯಾಗಿದೆ. ಕೈಗೆತ್ತಿಕೊಂಡ ಕಾಮಕಾರಿಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸದೆತೊಂದರೆ ನೀಡಿದ್ದಾರೆ ಎಂದರು.


ನಾಮ್‌ಕೇವಾಸ್ತೆ
ತಾಪಂ ಸಭೆ


ಬಂಗಾರಪೇಟೆ: ಯಾವುದೇ ಮಹತ್ವವಾದ ನಿರ್ಣಯಗಳನ್ನು ತೆಗೆದುಕೊಳ್ಳದೆ ಬರೀ ನಾಮ್‌ಕೇವಾಸ್ತೆ ಎಂಬಂತೆ ಇಲ್ಲಿನ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನಡೆದು ಸದಸ್ಯರಿಂದಲೇ ಟೀಕೆಗೆ ಗುರಿಯಾಯಿತು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಬಾಲಚಂದ್ರ ಅಧ್ಯಕ್ಷತೆಯಲ್ಲಿ ತಾಪಂನ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ 2014-15ನೇ ಸಾಲಿನ 1ಕೋಟಿ ಅನಿರ್ಬಂದಿತ ಅನುದಾನದ ಕ್ರಿಯಾ ಯೋಜನೆ ಮಾಡುವ ಚರ್ಚೆ, 13ನೇ ಹಣಕಾಸಿನ ಯೋಜನೆಯಲ್ಲಿ ಬಂದಿರುವ 70 ಲಕ್ಷ ರು. ಗಳಿಗೆ ಕ್ರಿಯಾಯೋಜನೆ ಮಾಡುವ ಬಗ್ಗೆ ಮತ್ತು ಅಧಿಭಾರ ಶುಲ್ಕದಲ್ಲಿ 18 ಲಕ್ಷಗಳಿಗೆ ಕ್ರಿಯಾಯೋಜನೆ ರೂಪಿಸುವ ಕುರಿತು ಮತ್ತು ಕುಡಿಯುವ ನೀರಿನ ವಿಷಯ ಚರ್ಚೆಗೆ ಸಭೆ ಕರೆದಿದ್ದ ಮುಖ್ಯ ಉದ್ದೇಶವಾಗಿತ್ತು. ಆದರೆ ಕೇವಲ ಹತ್ತು ನಿಮಿಷದಲ್ಲಿ ತಾಪಂ ಇಒ ಕೆ.ಎಸ್. ಭಟ್ ಅವರು ವಾರದೊಳಗೆ ಒಂದುಕೋಟಿ ಎಂಬತ್ತು ಎಂಟು ಲಕ್ಷ ರು. ಗಳಿಗೆ ಸದಸ್ಯರು ಕ್ರಿಯಾ ಯೋಜನೆ ತಯಾರಿಸಬೇಕಿದ್ದು, ಈ ಪಟ್ಟಿಯನ್ನು ತ್ವರಿತವಾಗಿ ನೀಡಬೇಕು ಇಲ್ಲದಿದ್ದರೆ ಹಣ ವಾಪಸ್ ಹೋಗಲಿದೆ. ನೀವು ಪಟ್ಟಿ ನೀಡಿದ ಬಳಿಕ ಅದನ್ನು ಮತ್ತೊಂದು ಸಭೆ ಕರೆದು ಅನುಮೋದಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು. ಕೆಲವು ಸದಸ್ಯರು ಈ ವಿಷಯವನ್ನು ಹೇಳಲು ಸಭೆ ಕರೆಯುವ ಅವಶ್ಯಕತೆ ಇತ್ತೇ ಎಂದು ಟೀಕಿಸಿದರು.
ಹಾಲಿ ತಾಪಂ ಅಧ್ಯಕ್ಷೆ ರೇಣುಕಾಬಾಲಚಂದ್ರ ಅಧಿಕಾರದ ಅವಧಿ ಮುಗಿಯುತ್ತಿದ್ದು ಅದರಿಂದ ಇದು ಅವರ ಕೊನೆ ಸಭೆಯಾಗಿದ್ದು ಹತ್ತು ಹಲವು ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಬಹುದು ಎಂದು ಸದಸ್ಯರು ಸಿದ್ದವಾಗಿ ಬಂದಿದ್ದರೂ ಯಾವುದೇ ವಿಷಯಗಳ ಚರ್ಚೆಗೆ ಅವಕಾಶ ಸಿಗದೆ  ಸಭೆ ಬರೇ ಸಪ್ಪೆಯಾಗಿತ್ತು. ತಾಲೂಕು ಬರದಿಂದ ತತ್ತರಿಸಿ ಹೋಗಿ ಕುಡಿಯುವ ನೀರಿನ ಎಲ್ಲಿಲ್ಲದ ಹಾಹಾಕಾರ ಇದೆ. ಆದರೆ ಸಭೆಯಲ್ಲಿ ಅಭಾವ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಟ್ಯಾಂಕರ್‌ಗಳನ್ನು ಹೆಚ್ಚಿಸಲಾಗುವುದು ಎಂದು ಇಒ ಹೇಳಿದಕ್ಕೆ ಸದಸ್ಯರು ಮಾರುತ್ತರೆ ನೀಡದೆ ಒಪ್ಪಿ ನೀರಿನ ಚರ್ಚೆಗೆ ಅಷ್ಟೊಂದು ಮಹತ್ವ ನೀಡಿಲ್ಲ. ಕೆಲವು ಸದಸ್ಯರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸಭೆ ಗಮನಕ್ಕೆ ತರಲು ಯತ್ನಿಸಿದರೂ ಫಲ ನೀಡಲಿಲ್ಲ, ಸಭಾಂಗಣ ಹಾಲನ್ನು ಆಧುನೀಕತೆಗೆ ತಕ್ಕಂತೆ ನವೀಕರಿಸಿದ್ದರಿಂದ ಕೆಲವು ಸದಸ್ಯರು ಅದರ ಸುಖವನ್ನು ಅನುಭವಿಸುವುದರಲ್ಲೇ ಕಾಲ ಕಳೆದರು. ಸಭೆಯಲ್ಲಿ ಜಿಪಂ ಎಇಇ ವೆಂಕಟೇಶ್, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.