ಕೋಲಾರ

ಬಂಗಾರಪೇಟೆಗೆ ಕಸದ ಸಿಂಗಾರ

Published On :

ಪಾ.ಶ್ರೀ.ಅನಂತರಾಮ್
ಕನ್ನಡಪ್ರಭ ವಾರ್ತೆ ಟ ಕೋಲಾರ ಟ ಜೂ.21
ಅಕ್ಕಿ ಗಿರಣಿಗಳಿಂದಾಗಿ ರಾಜ್ಯದ ಗಮನ ಸೆಳೆದಿರುವ ಬಂಗಾರಪೇಟೆ ಕಸದ ಗಿರಣಿಯಾಗಿ ಮಾರ್ಪಡುತ್ತಿರುವುದರಿಂದ ಜನತೆ ಆತಂಕಗೊಂಡಿದ್ದಾರೆ. ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ 25 ವಾರ್ಡ್‌ಗಳಿವೆ. ಡಿವಿಜನ್‌ಗಳು ಇದ್ದಾಗ ಜನಸಂಖ್ಯೆ ಕಡಿಮೆ ಇತ್ತು. ಜನರು ತಮ್ಮ ಮನೆಗಳಲ್ಲಿನ ಕಸ-ಕಡ್ಡಿಯನ್ನು ಸಮೀಪದ ತಿಪ್ಪೆಗಳಿಗೆ ಸುರಿಯುತ್ತಿದ್ದರು. ಪ್ಲಾಸ್ಟಿಕ್ ಹಾವಳಿ ಎಂಬುದು ಇರಲಿಲ್ಲ. ತಿಪ್ಪೆಯಲ್ಲಿನ ಕಸವನ್ನು ಸುತ್ತಮುತ್ತಲಿನ ರೈತರು ತಮ್ಮ ತೋಟ-ಗದ್ದೆಗಳಿಗೆ ಕೊಂಡೊಯ್ದು ತರಕಾರಿ, ಸೊಪ್ಪು ಬೆಳೆಯುತ್ತಿದ್ದರು. ಜನರಿಗೆ ಪೌಷ್ಟಿಕವಾದ ಆಹಾರ ಸಿಗುತ್ತಿತ್ತು. ಪ್ರತಿನಿತ್ಯ ಕಸ ವಿಲೇವಾರಿ ಆಗುತ್ತಿದ್ದರಿಂದ ಪರಿಹಾರಕ್ಕೆ ಯಾವುದೇ ಬಾಧಕ ಇರಲಿಲ್ಲ. ಜನಸಂಖ್ಯೆ ಹೆಚ್ಚಾದಂತೆ ನಾಗರಿಕತೆ ಬೆಳೆದಂತೆ ಹೆಸರಿಗೆ ತಕ್ಕಂತೆ ಬಂಗಾರಪೇಟೆ ಫಳಫಳ ಹೊಳೆಯುವ ಬದಲು ಗಬ್ಬು ನಾರುವಂತಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಕೋಲಾರದ ಮಾದರಿಯಲ್ಲೇ ಬಂಗಾರಪೇಟೆ ಕಸದ ತೊಟ್ಟಿ ಆಗುವುದರಲ್ಲಿ ಅನುಮಾನವಿಲ್ಲ. ಬಂಗಾರಪೇಟೆ ಪಟ್ಟಣದ ಜನಸಂಖ್ಯೆ ಈಗ 60 ಸಾವಿರ ದಾಟಿದೆ. 11 ಸಾವಿರಕ್ಕೂ ಅಧಿಕ ಮನೆಗಳಿಗೆ, ಒಂದು ಕಾಲದಲ್ಲಿ ಬೌರಿಂಗ್ ಮಹಾರಾಜ ನಿರ್ಮಿಸಿದ ಸುಂದರವಾದ ಬಂಗಾರಪೇಟೆ ಈಗ ಅಡ್ಡಾದಿಡ್ಡಿಯಾಗಿ ಬೆಳೆದಿದೆ. ಪಟ್ಟಣದ ಹೃದಯ ಭಾಗ ಅಸ್ತವ್ಯಸ್ಥವಾಗಿದೆ. ಪುರಸಭೆಗೆ ಕಸದ ವಿಂಗಡಣೆ, ವಿಲೇವಾರಿ ತಲೆ ನೋವಾಗಿ ಪರಿಣಮಿಸಿದೆ.
ಕಸ ಸುರಿಯಲು 5 ಎಕರೆ
ಪಟ್ಟಣದಲ್ಲಿ ಪ್ರತಿನಿತ್ಯ ಸರಾಸರಿ 18 ಟನ್ ಘನತ್ಯಾಜ್ಯ ಸಂಗ್ರಹಣೆ ಆಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತದೆ. ಪಟ್ಟಣದಲ್ಲಿ ತಿಪ್ಪೆಗಳು ಇದ್ದ ಜಾಗ ಈಗ ಜನವಸತಿ ಪ್ರದೇಶವಾಗಿ ಬದಲಾಗಿರುವುದರಿಂದ ಕಸ ವಿಲೇವಾರಿಗಾಗಿ ಇದ್ದ ಸಮಸ್ಯೆ ನಿವಾರಣೆಗಾಗಿ ಬಂಗಾರಪೇಟೆ ತಾಲೂಕಿನ ಸಮೀಪದ ಬ್ಯಾಡಬೆಲೆ ಗ್ರಾಮದಲ್ಲಿ 5 ಎಕರೆ ಸರ್ಕಾರಿ ಭೂಮಿಯನ್ನು ಸ್ಥಳೀಯ ಶಾಸಕರ ಪ್ರಯತ್ನ ಹಾಗೂ ಪುರಸಭೆಯ ಒತ್ತಾಸೆ ಮೇರೆಗೆ ಜಿಲ್ಲಾ ಆಡಳಿತ ಒದಗಿಸಿದೆ.
ಪೌರ ಕಾರ್ಮಿಕರೇ ಇಲ್ಲ!
ಕಸ ವಿಲೇವಾರಿಗಾಗಿ ನೀಡಿರುವ ಭೂಮಿಯ ಸುತ್ತಮುತ್ತಲು ಯಾವುದೇ ಜನವಸತಿ ಗ್ರಾಮಗಳು ಇಲ್ಲದಿರುವುದರಿಂದ ಹಾಗೂ ಅರಣ್ಯ ಪ್ರದೇಶವಿರುವುದರಿಂದ ಸದ್ಯಕ್ಕೆ ಕಸ ಹಾಕಲು ಯಾವುದೇ ಸಮಸ್ಯೆ ಇಲ್ಲದಿದ್ದರೂ ಪೌರ ಕಾರ್ಮಿಕರ ಕೊರತೆಯಿಂದಾಗಿ ಸಕಾಲಕ್ಕೆ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಕಷ್ಟವಾಗುತ್ತಿದೆ. ಪುರಸಭೆಯಲ್ಲಿ ಪ್ರಸ್ತುತ 26 ಮಂದಿ ಪೌರ ಕಾರ್ಮಿಕರಿದ್ದಾರೆ. ಈ ಪೈಕಿ ವಯಸ್ಸಾದವರು, ಅನಾರೋಗ್ಯಕ್ಕೆ ತುತ್ತಾಗಿರುವವರು ಇರುವುದರಿಂದ ಪ್ರತಿನಿತ್ಯ ಕಸ ಸಂಗ್ರಹಣೆ ಸಕ್ರಮವಾಗಿ ಆಗುತ್ತಿಲ್ಲ.
ಹೆಚ್ಚಿನ ಜಾಗಕ್ಕೆ ಶಾಸಕರ ಒತ್ತಾಯ
ಘನತ್ಯಾಜ್ಯ ಸಂಸ್ಕರಣೆಗಾಗಿ ಘಟಕ ಸ್ಥಾಪಿಸಲು 2.70 ಕೋಟಿ ವೆಚ್ಚದ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸರ್ಕಾರವನ್ನು ಕೋರಿದ್ದಾರೆ. ಈಗ ಇರುವ 5 ಎಕರೆ ಜಾಗದ ಜೊತೆಗೆ ಹೆಚ್ಚಿನ ಭೂಮಿ ಕಾದಿರಿಸಲು ಮಾರುಕಟ್ಟೆ ಬೆಲೆಗೆ ಅನುಸಾರವಾಗಿ ಅನುದಾನ ನೀಡುವಂತೆ ಆಗ್ರಹಿಸಿದ್ದಾರೆ.
ಕಸ ಸುರಿಯುವ ಜನ
ಪ್ರಸ್ತುತ ಪುರಸಭೆಯಿಂದ ಪಟ್ಟಣದ ವಿವಿಧ ಕಡೆ ಕಸ ಸುರಿಯಲು ಕಂಟೈನರ್‌ಗಳನ್ನು ಇಡಲಾಗಿದೆ. ಆದರೆ, ಸಾರ್ವಜನಿಕರು ಕಸವನ್ನು ಕಂಟೈನರ್‌ಗಳಲ್ಲಿ ಹಾಕದೆ ಬೀದಿಗೆ ಎಸೆಯುತ್ತಿರುವುದರಿಂದ ಹಾಗೂ ಕಸ ಸಂಗ್ರಹಣೆಗೆ ಸಿಬ್ಬಂದಿಯ ಕೊರತೆಯಿಂದಾಗಿ ಸಮಸ್ಯೆ ಎದುರಾಗಿದೆ. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಕಾರ್ಯ ಕಟ್ಟುನಿಟ್ಟಾಗಿ ಜಾರಿ ಆಗುತ್ತಿಲ್ಲ. ಅಧಿಕಾರಿಗಳು ದೂರು ಬಂದಾಗ ನಾಮಕೆವಾಸ್ತೆ ದಾಳಿ ಮಾಡುತ್ತಾರೆ. ಸಾಗಣೆ ಖರ್ಚು ಹೆಚ್ಚಳವೆಂಬ ನೆಪದಿಂದ ಕಸವನ್ನು ಬ್ಯಾಡಬೆಲೆಗೆ ಕೊಂಡೊಯ್ದು ಸುರಿಯುವ ಬದಲು ಪಟ್ಟಣದಲ್ಲೇ ಕಂಡ ಕಂಡ ಜಾಗದಲ್ಲಿ, ಕೆರೆಗಳಲ್ಲಿ ಸುರಿಯುತ್ತಿರಿದ್ದಾರೆ. ಪಟ್ಟಣದಲ್ಲಿನ ಮಾಂಸದಂಗಡಿಯವರು ತ್ಯಾಜ್ಯ ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ. ಪುರಸಭೆಯ ಆಡಳಿತ ಮಂಡಳಿಯವರು ಕಾನೂನು ಕ್ರಮಕ್ಕೆ ಮೀನಮೇಷ ಎಣಿಸುತ್ತಾರೆ. ಈವರೆಗೆ ಪುರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಮತ್ತು ಅರಿವು ಮೂಡಿಸಲು ಯಾವುದೇ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ.

ಆಗಬೇಕಿರುವುದೇನು?
-  ಅಗತ್ಯಕ್ಕೆ ತಕ್ಕಷ್ಟು ಪೌರ ಕಾರ್ಮಿಕರನ್ನು ನೇಮಿಸಬೇಕು.
-  ಕಡ್ಡಾಯವಾಗಿ ಕಸ ಬ್ಯಾಡಬೆಲೆ ಘಟಕದಲ್ಲಿ ಸುರಿದು ವಿಲೇವಾರಿ ಮಾಡಬೇಕು.
-  ಪ್ರತಿ ವಾರ್ಡಿನಲ್ಲಿ ಸಂಗ್ರಹಣೆ ಆಗುವ ಕಸವನ್ನು ಅಲ್ಲೇ ವಿಂಗಡಣೆ ಮಾಡಿ ನಂತರ ಘಟಕಕ್ಕೆ ತಂದು ಸುರಿಯಬೇಕು.
-  ತ್ಯಾಜ್ಯಗಳು ಗಾಳಿಗೆ ಹಾರದಂತೆ, ವಾಸನೆ ಬರದಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕು.
-  ಪ್ಲಾಸ್ಚಿಕ್ ಬಳಕೆ ಮಾಡುವವರಿಗೆ ಇದರಿಂದ ಆಗುತ್ತಿರುವ ತೊಂದರೆಗಳ ಕುರಿತು ಅರಿವು ಮೂಡಿಸಬೇಕು
-  ಕಸವನ್ನು ಬೀದಿಗೆ ಎಸೆದು ಪರಿಸರ ಹಾಳು ಮಾಡುವವರಿಗೆ ಸೂಕ್ತ ದಂಡ ವಿಧಿಸಿ ಇತರರನ್ನು ಜಾಗೃತಿಗೊಳಿಸಬೇಕು.
-  ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೇಕಾಗಿರುವ 2.70 ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಬಂಗಾರಪೇಟೆ ಕಸಗ ಗಿರಣಿಯಿಂದ ಮುಕ್ತಿಗೊಳ್ಳುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.