ಕೋಲಾರ

ಕಸಮಾಲೂರು

Published On :

ಕೋಲಾರ: ಮಾಲೂರು ಪುರಸಭೆ ವ್ಯಾಪ್ತಿಗೆ 23 ವಾರ್ಡುಗಳು ಒಳಪಟ್ಟಿದ್ದು ಪ್ರತಿನಿತ್ಯ 12 ರಿಂದ 14 ಟನ್ ಕಸ ಸಂಗ್ರಹಣೆ ಆಗುತ್ತಿದೆ. ಹಬ್ಬ ಹರಿ ದಿನಗಳಲ್ಲಿ ಇದರ ಪ್ರಮಾಣ ದುಪ್ಪಟ್ಟುಗೊಳ್ಳುತ್ತದೆ. ಪ್ರತಿನಿತ್ಯ ಸಂಗ್ರಹಣೆ ಆಗುವ ಘನತ್ಯಾಜ್ಯಕ್ಕೆ ಕನಿಷ್ಠ 10 ಎಕರೆ ಜಾಗದ ಅವಶ್ಯಕತೆ ಇದೆ. ಆದರೆ, ಮಾಲೂರು ಪುರಸಭೆಯವರಿಗೆ ಪ್ರಸ್ತುತ ಲಭ್ಯವಿರುವುದು ಕೇವಲ 1ಎಕರೆ 45 ಗುಂಟೆ ಜಾಗ ಮಾತ್ರ. ಇದರಿಂದಾಗಿ ಪ್ರತಿನಿತ್ಯ ಸಂಗ್ರಹಣೆ ಆಗುವ ದೊಡ್ಡ ಪ್ರಮಾಣದ ಕಸ ವಿಲೇವಾರಿಗೆ ಪುಟ್ಟ ಜಾಗ ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಿದೆ. ಮಾಲೂರು ಹೊರ ವಲಯದ ಹಾರೋಹಳ್ಳಿಯ ಸರ್ಕಾರಿ ಜಾಗವನ್ನು ಕಸ ವಿಲೇವಾರಿ ಘಟಕವನ್ನಾಗಿ ಮಾಡಿಕೊಳ್ಳಲಾಗಿದೆ. ಪಟ್ಟಣದ ಜನಸಂಖ್ಯೆ ಪ್ರಸ್ತುತ 40 ಸಾವಿರ ದಾಟಿದೆ, ಜೊತೆಗೆ ಇಲ್ಲಿ ರೈಲು ನಿಲ್ದಾಣ, ಕೈಗಾರಿಕಾ ಪ್ರದೇಶ ಇರುವುದರಿಂದ ಬೇರೆ ಕಡೆಯಿಂದ ಬರುವ ಜನ ಸಂದಣಿಯಿಂದಾಗಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ.

ಸಿಬ್ಬಂದಿ ಕೊರತೆ
ಪಟ್ಟಣದ 23 ವಾರ್ಡುಗಳಿಗೆ ತಲಾ 5 ಮಂದಿ ಪೌರ ಕಾರ್ಮಿಕರ ಅವಶ್ಯಕತೆ ಇದೆ. ಸರ್ಕಾರ 115 ಮಂದಿ ಪೌರ ಕಾರ್ಮಿಕರನ್ನು ಮಂಜೂರು ಮಾಡಬೇಕಾಗಿತ್ತು. ಆದರೆ, ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ 66 ಮಂದಿ ಪೌರ ಕಾರ್ಮಿಕರಲ್ಲಿ 16 ಮಂದಿ ಕಾಯಂ, 10 ಮಂದಿ ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರಿತ ಪೌರ ಕಾರ್ಮಿಕರು, 10 ಮಂದಿ ದಿನಗೂಲಿ ಹಾಗೂ 30 ಮಂದಿ ಹೊರ ಗುತ್ತಿಗೆ ಆಧಾರತ ಪೌರ ಕಾರ್ಮಿಕರಿದ್ದಾರೆ. ಹಾಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಲ್ಲಿ ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಅನೇಕ ಸಮಸ್ಯೆಯಿಂದ ಗೈರು ಹಾಜರಾಗುವುದರಿಂದ ಪಟ್ಟಣದಲ್ಲಿ ಕಸ ವಿಲೇವಾರಿಗೆ ದೊಡ್ಡ ಸಮಸ್ಯೆ ಆಗಿದೆ. ಪಟ್ಟಣದ ಸ್ವಚ್ಛತೆಗೆ ಬಳಕೆ ಮಾಡಿಕೊಳ್ಳಬೇಕಾದ ಪೌರ ಕಾರ್ಮಿಕರನ್ನು ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆ, ಕಚೇರಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸಮಸ್ಯೆಗೆ ಪರಿಹಾರ ಹುಡುಕುವುದು ಆಡಳಿತ ನಡೆಸುತ್ತಿರುವವರಿಗೆ ಸವಾಲಾಗಿ ಪರಿಣಮಿಸಿದೆ.

ಕಂಟೈನರ್ ಬಳಕೆ ಉದಾಸೀನ
ಕಸ ಸಂಗ್ರಹಣೆ, ವಿಲೇವಾರಿಗೆ ಪಟ್ಟಣದ 23 ವಾರ್ಡ್‌ಗಳಲ್ಲಿ ಕಂಟೈನರ್‌ಗಳನ್ನು ಇಡಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡುತ್ತಿಲ್ಲ. ಪಟ್ಟಣದಲ್ಲಿನ ಕೆಲ ಹೊಟೇಲ್ ಮಾಲೀಕರು, ಕಲ್ಯಾಣ ಮಂಟಪದ ಸಿಬ್ಬಂದಿ, ಮಾಂಸದಂಗಡಿ, ವ್ಯಾಪಾರಿಗಳು ತ್ಯಾಜ್ಯಗಳನ್ನು ಕಂಟೈನರ್‌ಗಳಲ್ಲಿ ಹಾಕದೆ ಪಕ್ಕದಲ್ಲಿ ಎಸೆಯುವುದರಿಂದ ಮನೆಗಳಲ್ಲಿ ಸಂಗ್ರಹಣೆ ಆಗುವ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಕೆಲವರು ಕಂಟೈನರ್‌ಗಳಿಗೆ ಬೆಂಕಿ ಹಾಕುವುದರಿಂದ ಸಾರ್ವಜನಿಕರು ಕಸ ಎಸೆಯಲು ಸಾಧ್ಯವಾಗದೆ, ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಸುರಿಯುವುದರಿಂದ ಪುರಸಭೆಯ ನೌಕರರಿಗೆ ಕಸವನ್ನು ಹಾರೋಹಳ್ಳಿಯಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯಲು ಕಷ್ಟವಾಗುತ್ತಿದೆ.

ಮಾಲೂರು ಬೆಳೆಯುತ್ತಿದೆ, ಜನಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಂಗ್ರಹಣೆ ಆಗುವ ಕಸವನ್ನು ವಿಂಗಡಣೆ ಮಾಡಿ ಗಟ್ಟಿ ಕಸ ಹಾಗೂ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಎಸೆದರೆ ವಿಲೇವಾರಿ ಸುಲಭವಾಗುತ್ತದೆ. ಸಿಬ್ಬಂದಿ ಕೊರತೆಯಿಂದ ಪ್ರತಿನಿತ್ಯ ಕಸ ಸಂಗ್ರಹಣೆ ಕಷ್ಟವಾಗುತ್ತಿದೆ. ಈ ಸಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಪಡೆದು ಸಿಬ್ಬಂದಿಯ ನೇಮಿಸಿಕೊಳ್ಳುವುದಕ್ಕೆ ಪ್ರಸ್ತಾವನೆ ಕಳುಹಿಸುತ್ತೇನೆ. ಕಸ ವಿಲೇವಾರಿ ಪುರಸಭೆಯ ಕರ್ತವ್ಯ ಮಾತ್ರವಲ್ಲ. ಸಾರ್ವಜನಿಕರ ಸಹಕಾರ ಅತ್ಯಗತ್ಯ.
- ಭಾರತಮ್ಮ, ಮಾಲೂರು ಪುರಸಭೆ ಅಧ್ಯಕ್ಷ

ಮಾಲೂರಿನಲ್ಲಿ ಸಂಗ್ರಹಣೆ ಆಗುವ ಕಸ ವಿಲೇವಾರಿಗೆ ಈಗ ಇರುವ ಜಾಗ ಕಡಿಮೆ, ಕನಿಷ್ಠ 10 ಎಕರೆ ಜಾಗ ಬೇಕು. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೌರ ಕಾರ್ಮಿಕರ ಕೊರತೆ ಇರುವುದರಿಂದ ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕಸವನ್ನು ಕಂಟೈನರ್‌ಗಳಲ್ಲಿ ಹಾಕಿದರೆ ಉತ್ತಮ. ಯಾರೂ ಸಹ ಕಂಟೈನರ್‌ಗಳಿಗೆ ಬೆಂಕಿ ಹಾಕಬೇಡಿ, ಪಟ್ಟಣದ ಪರಿಸರ ಕಾಪಾಡಲು ಸಹಕರಿಸಿ.
- ರೇಣುಕಾ, ಮಾಲೂರು ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.