ಕೋಲಾರ

ಜಿಲ್ಲೆಗೆ ಮತ್ತೊಬ್ಬ ಎಂಎಲ್ಸಿ

Published On :

ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ಚೌಡರೆಡ್ಡಿ ಜಯಭೇರಿ ಬಾರಿಸಿದ್ದಾರೆ.
ಹ್ಯಾಟ್ರಿಕ್ ಜಯದ ಕನಸು ಕಂಡಿದ್ದ ಬಿಜೆಪಿಯ ಡಾ.ಶಿವಯೋಗಿಸ್ವಾವು ಸೋತಿದ್ದಾರೆ. ಪ್ರಜ್ಞಾವಂತ ಮತದಾರರು ಪದವೀಧರರು, ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿದಂತೆ ವಿಧಾನ ಪರಿಷತ್ ಚುನಾವಣೆಯಲ್ಲೂ ಪಕ್ಷಕ್ಕೆ ಜಯ ತಂದುಕೊಡುತ್ತಾರೆಂಬ ಅತಿಯಾದ ಆತ್ಮವಿಶ್ವಾಸ ಅವರಿಗೇ ಮುಳುವಾದಂತಿದೆ. ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಚೌಡರೆಡ್ಡಿ ಕೋಲಾರ್, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚುನಾವಣಾ ಪ್ರಚಾರ ನಡೆಸಿ, ಒಕ್ಕಲಿಗ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಪರವಾಗಿ ರೇಲ್ವೆ ಸಚಿವ ಸದಾನಂದಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಪಕ್ಷೇತರರರಾಗಿ ಸ್ಪರ್ಧಿಸಿದ್ದ ನಾಗೇಂದ್ರ ಅವರನ್ನು ಕಣದಿಂದ ನಿವೃತ್ತಿಗೊಳಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದರು.  ದಾವಣಗೆರೆಯವರೇ ಆದ ಮುರಿಗೇಂದ್ರಪ್ಪ ಅವರು ಸಹ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಇದು ಸಹ ಶಿವಯೋಗಿಸ್ವಾವುಗೆ ಮುಳುವಾಯಿತು. ಬಿಜೆಪಿಯ ಯುವ ಮುಖಂಡರು ಹಾಗೂ ಕಾರ್ಯಕರ್ತರು ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿದ ಉತ್ಸಾಹವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ತೋರಿಲ್ಲ.
ಜೆಡಿಎಸ್‌ನ ಚೌಡರೆಡ್ಡಿ ಪರವಾಗಿ ಪಕ್ಷದ ಯಾವುದೇ ಒಬ್ಬ ರಾಜ್ಯ ಮಟ್ಟದ ಪ್ರಭಾವಿ ಮುಖಂಡರು ಪ್ರಚಾರ ನಡೆಸಿರಲಿಲ್ಲ. ಚೌಡರೆಡ್ಡಿ ಸಹೋದರ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಸಮಯ ತಮ್ಮನ ಗೆಲುವಿಗಾಗಿ ಮೀಸಲಿಟ್ಟಿದ್ದರು. ಕೋಲಾರ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲವೆಂಬುದು ಗೊತ್ತಿದ್ದರಿಂದ ಅಣ್ಣ ಮತ್ತು ತಮ್ಮ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ್ದರು. ಪದವೀಧರರ ಮತದಾರರನ್ನು ಖುದ್ದು ಭೇಟಿಯಾಗಲು ಆಗದಿದ್ದರೂ ತಮ್ಮದೇ ಆದ ನೆಟ್‌ವರ್ಕ್ ಮೂಲಕ ಮತಗಟ್ಟೆಗೆ ಬರುವಂತೆ ಮಾಡಿದರು. ಒಕ್ಕಲಿಗ ಸಮುದಾಯದ ಮುಖಂಡರು, ಸ್ವಾಮೀಜಿಗಳು ಸಹ ಚೌಡರೆಡ್ಡಿ ಪರವಾಗಿ ಕೆಲಸ ಮಾಡುವ ಮೂಲಕ ವಿಧಾನ ಪರಿಷತ್ತಿನಲ್ಲಿ ಒಕ್ಕಲಿಗರೊಬ್ಬರು ಕೋಲಾರ ಜಿಲ್ಲೆಯ ಪ್ರತಿನಿಧಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಿಜಯೋತ್ಸವ: ಚೌಡರೆಡ್ಡಿ ಗೆಲುವಿನ ಹಿನ್ನಲೆಯಲ್ಲಿ ಶ್ರೀನಿವಾಸಪುರದಲ್ಲಿ ಜೆಡಿಎಸ್ ಮುಂಖಂಡರು ವಿಜಯೋತ್ಸವ ಆಚರಿಸಿದರು. ಶ್ರೀನಿವಾಸಪುರ ಪುರಸಭೆಯ ಮಾಜಿ ಅಧ್ಯಕ್ಷ ಎಸ್.ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್,ಪುರಸಭೆ ಸದಸ್ಯ ವಿ.ಶಂಕರ್,ಮುಖಂಡರಾದ ಹಳೇಪೇಟೆಯ ಮಂಜು, ಆನಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
   ಪಟಾಕಿ ಸಿಡಿಸಿ ಸಂಭ್ರಮಿಸಿದ ಮುಖಂಡರು ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಸಹಿ ಹಂಚಿದರು. ಕೋಲಾರ ನಗರದಲ್ಲೂ ಜೆಡಿಎಸ್ ಮುಖಂಡರು ವಿಜಯೋತ್ಸವ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.