ಕೋಲಾರ

ಶ್ಶಿ... ಡ್ಲಘಟ್ಟ ಕಸದ ಬೆಟ್ಟ

Published On :

ಎನ್.ವೆಂಕಟೇಶ್/ರೂಪಸಿ ರಮೇಶ್
ಚಿಕ್ಕಬಳ್ಳಾಪುರ: ಗೊತ್ತು ಗುರಿಯಿಲ್ಲದೇ ಸಾಗಿರುವ ಕಸ ವಿಲೇವಾರಿಯು ಶಿಡ್ಲಘಟ್ಟ ಪಟ್ಟಣದ ಅನೇಕ ಬಡಾವಣೆಗಳನ್ನು 'ಕೊಳಗೇರಿ ಮಾದರಿ ಪ್ರದೇಶ'ವಾಗಿ ರೂಪಗೊಳ್ಳುತ್ತಿದ್ದು, ಇನ್ನೂ ನಿಜವಾದ ಕೊಳಗೇರಿ ಪ್ರದೇಶಗಳ ಸ್ಥಿತಿ ಇದಕ್ಕಿಂತಲೂ ಭಿನ್ನವಾಗೇನೂ ಇಲ್ಲ.
ಶಿಡ್ಲಘಟ್ಟ ಪುರಸಭೆ 27 ವಾರ್ಡುಗಳನ್ನು ಹೊಂದಿದೆ. ಒಂದೆರಡು ವಾರ್ಡುಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ವಾರ್ಡುಗಳಲ್ಲೂ ಕಸದ ಕಿರಿಕಿರಿ. ಪ್ರತಿನಿತ್ಯ 20 ಟನ್ ತ್ಯಾಜ್ಯ  ಉತ್ಪತ್ತಿಯಾಗುತ್ತಿದ್ದರೆ ವಿಲೇವಾರಿಯಾಗುತ್ತಿರುವುದು ಕೇವಲ 12 ಟನ್! 8 ಟನ್ ತ್ಯಾಜ್ಯ ಹಾಗೆಯೇ ಉಳಿದುಕೊಂಡು ಜನರನ್ನು ನಾನಾ ರೀತಿಯಲ್ಲಿ ಬಾಧಿಸುತ್ತಿದೆ. ಇಲ್ಲಿ ಪ್ರಮುಖವಾಗಿ ಹದಗೆಡುತ್ತಿರುವ ನೈರ್ಮಲ್ಯವನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಪುರಸಭಾ ಸದಸ್ಯರು ಮತ್ತು ಜನರು ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕೆಂದು ಬೊಬ್ಬೆ ಹಾಕುತ್ತಿದ್ದಾರೆ. ಪ್ರತಿನಿತ್ಯ ದೂರುಗಳ ಮೇಲೆ ದೂರುಗಳು ಪುರಸಭಾ ಕಚೇರಿಗೆ ಕೇಳಿ ಬರುತ್ತಲೇ ಇವೆ.
ಕಸ ವಿಲೇವಾರಿಗೆ 13 ಮಹಿಳೆಯರು ಮತ್ತು 22 ಪುರುಷರು ಸೇರಿದಂತೆ ಒಟ್ಟು 35 ಕಾರ್ಮಿಕರಿದ್ದಾರೆ. ಇನ್ನೂ 15 ಕಾರ್ಮಿಕರು ಬೇಕು. 3 ಮೂರು ಟ್ರ್ಯಾಕ್ಟರ್‌ಗಳಿದ್ದು ಹೊಸದಾಗಿ 2 ಟ್ರ್ಯಾಕ್ಟರ್ ಬೇಕಾಗಿವೆ. 12 ಕಂಟೈನರುಗಳಿದ್ದು, ಇದು ಸಹ ಸಾಕಾಗುತ್ತಿಲ್ಲ. 15 ಕ್ಕೂ ಹೆಚ್ಚು ಕಂಟೈನರುಗಳು ಬೇಕಾಗಿವೆ. ಈ ಹಿಂದೆ ಮನೆ ಮನೆಗಳಿಗೆ ತೆರಳಿ ಕಸವನ್ನು ಸಂಗ್ರಹಿಸಲಾಗುತ್ತಿತ್ತು. ಇದೀಗ ಇದು ಬಹುತೇಕ ಎಲ್ಲಾ ವಾರ್ಡುಗಳಲ್ಲಿ ಸ್ಥಗಿತಗೊಂಡಿವೆ. ಮನೆಗಳವರು ಕಸವನ್ನು ಕೊಡುವಾಗ ಹಣವನ್ನು ಪಾವತಿಸುತ್ತಿಲ್ಲ. ಇದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬ ಭಾವನೆಯಲ್ಲಿ ಅಧಿಕಾರಿಗಳು ಸುಮ್ಮನಾಗಿದ್ದಾರೆ.
ಎಲ್ಲೆಂದರಲ್ಲಿ ಕಸ ರಾರಾಜಿಸುವಂತಹುದು ಇಲ್ಲಿ ಹೆಚ್ಚು. ಸಿಬ್ಬಂದಿ ಕೊರತೆಯಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕಸಾಯಿಖಾನೆ, ರೇಷ್ಮೆ ನೂಲು ತಯಾರಿಕಾ ವ್ಯಾಪಾರಿಗಳು, ಕಸಾಯಿಖಾನೆ ಮಾಲೀಕರು, ತಳ್ಳುವ ಗಾಡಿಗಳ ವ್ಯಾಪಾರಸ್ಥರು ತ್ಯಾಜ್ಯವನ್ನು ತಂದು ರಸ್ತೆಗೆ ಹಾಕುತ್ತಿದ್ದಾರೆ. ಇದರಲ್ಲಿ ಹೊಟೇಲ್, ರೆಸ್ಟೋರೆಂಟ್ ಮಾಲೀಕರು ಸಹ ಹಿಂದೆ ಬಿದ್ದಿಲ್ಲ. ಕೆಲವು ಬಡಾವಣೆಗಳಲ್ಲಿಯೇ ಟನ್‌ಗಟ್ಟಲೇ ತ್ಯಾಜ್ಯ ತ್ಯಾಜ್ಯ ಉಳಿದು ಗಬ್ಬು ವಾಸನೆ ಹರಡಿಸುತ್ತಿದೆ. ಇದಲ್ಲದೇ ಚರಂಡಿಗಳಲ್ಲೂ ಸಹ ತುಂಬುತ್ತಿರುವ ತ್ಯಾಜ್ಯದಿಂದ ವಾತಾವರಣ ಹದಗೆಡುತ್ತಿದೆ.
ಚರಂಡಿಗಳಲ್ಲಿನ ಸ್ವಚ್ಛತೆಯನ್ನು ಕಾಪಾಡಲು, ಕಸ ವಿಲೇವಾರಿಗೆ ಚಿಂತಾಮಣಿ ಏಜೆನ್ಸಿಯೊಂದು 30 ಲಕ್ಷಕ್ಕೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಆದರೆ, ನಿರ್ವಹಣೆ ವೆಚ್ಚ ಸಾಕಾಗುತ್ತಿಲ್ಲ ಎಂದು ಆರೋಪಿಸಿ, ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಹೊಸದಾಗಿ ಟೆಂಡರ್ ಕರೆಯಲು ಮುಂದಾಗಿದ್ದು, ಇದನ್ನು ಹೇಳಿಕೊಂಡೇ ದೂರುಗಳನ್ನು ನಿಭಾಯಿಸಲಾಗುತ್ತಿದೆ. ಇತ್ತೀಚೆಗೆ ತಮ್ಮ ವಾರ್ಡ್‌ಗಳಲ್ಲಿನ ಜನರ ತೀವ್ರ ಒತ್ತಡದಿಂದ ಪುರಸಭಾ ಸದಸ್ಯರು ಗಲಾಟೆ ಮಾಡುತ್ತಿದ್ದರೆ, ಇತ್ತ ಸಿಬ್ಬಂದಿ ಕೊರತೆ, ವಾಹನಗಳು ಮತ್ತು ಯಂತ್ರೋಪಕರಣಗಳ ಕೊರತೆಯಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಇದು ಬಗೆಹರಿದರೆ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಶಿಡ್ಲಘಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. ಇದಕ್ಕೆ ಸಿಬ್ಬಂದಿ ಮತ್ತು ಅಗತ್ಯವಿರುವ ಉಪಕರಣಗಳ ಕೊರತೆ ಪ್ರಮುಖ ಕಾರಣವಾಗಿದೆ. ಇದರ ನಡುವೆಯೂ ಸಮಸ್ಯೆ ಗಂಭೀರವಾಗದಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ.
ಟಿ ದಿಲೀಪ್ ಕುಮಾರ್
ಪರಿಸರ ಅಭಿಯಂತರರು, ಪುರಸಭೆ, ಶಿಡ್ಲಘಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.