ಕೋಲಾರ

ತ್ಯಾಜ್ಯ ವಿಲೇವಾರಿ ಚಿಂತೆಮಣಿ!

Published On :

ಚಿಕ್ಕಬಳ್ಳಾಪುರ: ವಾಣಿಜ್ಯ ವ್ಯಾಪಾರ ವಹಿವಾಟಿಗೆ ಹೆಸರಾಗಿರುವ ಚಿಂತಾಮಣಿ ನಗರದಲ್ಲಿ ಅವೈಜ್ಞಾನಿಕ ಕಸ ವಿಲೇವಾರಿಯೇ ಹೆಚ್ಚು. ನಗರಸಭೆಯಲ್ಲಿರುವ ಒಣ ಪ್ರತಿಷ್ಠೆ ಆಡಳಿತದಿಂದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ನಗರ ಒಟ್ಟು 31 ವಾರ್ಡ್ ಹೊಂದಿದ್ದು, ಇದರಲ್ಲಿ ಪ್ರತಿಷ್ಠಿತ ಕೆಲ ಬಡಾವಣೆಗಳು ಮಾತ್ರ ಫಳಫಳವಾಗಿವೆ. ಉಳಿದಂತೆ ಬಹುತೇಕ ವಾರ್ಡ್‌ಗಳಲ್ಲಿ ತ್ಯಾಜ್ಯ ಬಿದ್ದಿರುವುದನ್ನು ಸರಿಯಾಗಿ ನೋಡುವುದಿಲ್ಲ. ಮನಸ್ಸಿಗೆ ಬಂದಂತೆ ವಿಲೇವಾರಿಯಾಗುತ್ತದೆ. ಜನರ ಆಕ್ರೋಶಕ್ಕೂ ಮನ್ನಣೆ ಇಲ್ಲ. ನಗರಸಭಾ ಕಚೇರಿಯ ಬಳಿ ಬಂದು ದೊಡ್ಡ ಗಲಾಟೆ ಇಲ್ಲವೇ ರಾದ್ಧಾಂತ ಮಾಡಬೇಕು. ಆಗ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಯೋಚಿಸುವುದು. ಕಸ ವಿಲೇವಾರಿಗಾಗಿ ಹೊರ ಗುತ್ತಿಗೆಯಲ್ಲಿ 48 ಮತ್ತು ಕಾಯಂ 58 ಕಾರ್ಮಿಕರಿದ್ದಾರೆ. ಇದರಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ವೇತನ ಸಿಗುವಲ್ಲಿ ಕಿರಿಕಿರಿಯಾಗುತ್ತಿರುವುದು ವಿಲೇವಾರಿ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಪ್ರತಿನಿತ್ಯ ತ್ಯಾಜ್ಯ ಸಂಗ್ರಹವಾಗುವುದು 30 ಟನ್.
ಈಗಾಗಲೇ ತಳ್ಳುವ ಗಾಡಿಗಳು 45, ಟ್ರ್ಯಾಕ್ಟರ್ 4(ಹೊರಗುತ್ತಿಗೆ 2 ಮತ್ತು ಸರ್ಕಾರಿ 2), ಡಂಪರ್ಸ್ 2 ಇದ್ದು 60 ಕಂಟೈನರ್‌ಗಳಿವೆ.
ಅವೈಜ್ಞಾನಿಕ ಪದ್ಧತಿ
ಹಲವೆಡೆ ಕಸವನ್ನು ವಿಲೇವಾರಿ ಮಾಡುವುದರ ಬದಲು ಸುಟ್ಟು ಹಾಕಲಾಗುತ್ತಿದೆ. ಕಂಟೈನರ್‌ಗಳಲ್ಲಿ ಕಸ ತುಂಬಿ ತುಳುಕಾಡುತ್ತಿದ್ದರೂ ಸಹ ತೆಗೆಯುವುದಿಲ್ಲ. ಕಾಲ ಕಾಲಕ್ಕೆ ಕಂಟೈನರ್‌ಗಳ ಕಸವನ್ನು ಬೇರೆಡೆಗೆ ಸಾಗಿಸಬೇಕು. ಆದರೆ, ಕೆಲವರು ಕಂಟೈನರ್‌ಗಳಲ್ಲಿ ಬೆಂಕಿ ಹಾಕಿ ಬೂದಿ ಮಾಡುತ್ತಿರುವುದರ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಅದೇ ರೀತಿ ತಾಲೂಕಿನ ಕಣಿಶೆಟ್ಟಿಹಳ್ಳಿ ಬಳಿ ಇರುವ ಸರ್ವೆ ನಂ 17/22, 17/24 ರ (6 ಎಕರೆ ಸರ್ಕಾರಿ ಜಾಗ ಮತ್ತು 4 ಎಕರೆ ಖಾಸಗೀ ಜಮೀನು) ಒಟ್ಟು 10 ಎಕರೆ ಜಾಗವನ್ನು ತ್ಯಾಜ್ಯದಲ್ಲಿ ಕೊಳೆಯುವ ಮತ್ತು ಕೊಳೆಯದ ವಸ್ತುಗಳನ್ನು ಪ್ರತ್ಯೇಕಗೊಳಿಸಿ ಗೊಬ್ಬರವನ್ನು ತಯಾರಿಸಲು ಖರೀದಿಸಲಾಗಿದೆ. ಇದಕ್ಕೂ ಗ್ರಾಮಸ್ಥರ ವಿರೋಧವಿದೆ. ಈ ಹಿಂದೆ ತಮಗೆ ತಿಳಿಸಿದಂತೆ ನಗರಸಭೆ ನಿಂಬಂಧನೆಗಳನ್ನು ಪಾಲಿಸುತ್ತಿಲ್ಲ. ಇನ್ನೂ ತ್ಯಾಜ್ಯ ತಂದು ಇಲ್ಲಿ ಹಾಕಲಾಗುತ್ತಿದೆಯಾದರೂ ಸಹ ಇಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ.
ಸಂಗ್ರಹದಲ್ಲೂ ಹಿನ್ನಡೆ
ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸುವಲ್ಲಿ ಕೈಗೊಂಡ ಪ್ರಚಾರದಲ್ಲಿ ಚಿಂತಾಮಣಿ ನಗರಸಭೆ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿತ್ತು. ಆದರೆ, ಇದು ಇತ್ತೀಚೆಗೆ ಹಿನ್ನಡೆ ಅನುಭವಿಸುತ್ತಿದೆ. ಮನೆ ಮನೆಗಳಿಗೂ ತೆರಳಿ ಕಸ ಸಂಗ್ರಹಿಸುವುದರಲ್ಲೂ ನಿರ್ಲಕ್ಷ್ಯ. ಇದರಿಂದ ಜನರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದಾರೆ. ಕೆಲ ಸ್ಲಮ್  ಬಡಾವಣೆಗಳು ತ್ಯಾಜ್ಯ ಯುಕ್ತ ಪ್ರದೇಶಗಳಾಗಿವೆ.


-ಎನ್.ವೆಂಕಟೇಶ್/ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.