ಬಂಗಾರದ ನೆಲದಲ್ಲಿ ಕಸದ ಕೃಷಿ
ಕೋಲಾರ: ಬಂಗಾರದ ನೆಲದಲ್ಲಿ ಕಸದ ಕೃಷಿ...
ಇದೇನಪ್ಪ ಎಂದು ಅಚ್ಚರಿ ಪಡಬೇಡಿ. ವಿಶ್ವಕ್ಕೆ ಚಿನ್ನ ಕೊಟ್ಟ ಕೆಜಿಎಫ್ ಒಂದು ಕಾಲದಲ್ಲಿ ಬಂಗಾರ ಭೂಮಿ ಎಂದು ಖ್ಯಾತಿ ಪಡೆದಿತ್ತು. ಈಗ ಕಸ ಉತ್ಪಾದನೆಯಲ್ಲಿ ದಾಖಲೆ ಮುರಿಯಲು ಪೈಪೋಟಿ ನಡೆಸುತ್ತಿರುವಂತಿದೆ. ಕೆಜಿಎಫ್ ಕೋಲಾರ ಜಿಲ್ಲೆಯ ಅತಿ ದೊಡ್ಡ ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. 1.62 ಲಕ್ಷ ಜನಸಂಖ್ಯೆ ದಾಟಿದೆ. ನಗರಸಭೆಯು ತನ್ನ 35 ವಾರ್ಡುಗಳಲ್ಲಿ ಸ್ವಚ್ಛತೆ ಕಾಪಾಡಲು ಪರದಾಡುತ್ತಿದೆ.
ಪ್ಲಾಸ್ಟಿಕ್ ಸಮಸ್ಯೆ: ಪ್ರತಿನಿತ್ಯ 42 ಟನ್, ಹಬ್ಬ ಹರಿ ದಿನಗಳಲ್ಲಿ ಸರಾಸರಿ 52 ಟನ್ ಕಸ ಸಂಗ್ರಹಣೆ ಆಗುತ್ತದೆ. ಗಟ್ಟಿಕಸದ ವಿಲೇವಾರಿ ಸಮಸ್ಯೆಗಿಂತ ಅತಿಯಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ನಗರಸಭೆಗೆ ಕಸ ಎಂಬುದು ತಲೆ ನೋವಾಗಿ ಕಾಡುತ್ತಿದೆ. ಕೆಜಿಎಫ್ನಲ್ಲಿ ಸಂಗ್ರಹಣೆ ಆಗುವ ಕಸವನ್ನು ವಿಲೇವಾರಿ ಮಾಡಲು ಪಾರಂಡಹಳ್ಳಿಯಲ್ಲಿ ಸುಮಾರು 16 ಎಕರೆ 36 ಗುಂಟೆ ಜಮೀನು ಇದೆ. ಇಲ್ಲಿ ರಸ್ತೆ, ಒಂದು ಕೊಳವೆ ಬಾವಿ, ಬೀದಿ ದೀಪ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಚರಂಡಿಯಲ್ಲಿ ಕಸ: ಆದರೆ, ಕಸ ಪ್ರಮಾಣಕ್ಕೆ ತಕ್ಕಷ್ಟು ಪೌರ ಕಾರ್ಮಿಕರು ಇಲ್ಲದಿರುವುದು, ಕಸ ಸಾಗಾಣೆ ಮಾಡಲು ಇರುವ 3 ಟ್ರ್ಯಾಕ್ಟರ್ಗಳು ಸಾಕಾಗದಿರುವುದು, ಕಂಟೈನರ್ಗಳು ಇದ್ದರೂ ಜನರು ಕಸವನ್ನು ಚರಂಡಿ, ಬೀದಿ, ಆಸ್ಪತ್ರೆ ಕಾಂಪೌಂಡ್ನಲ್ಲಿ ಎಸೆಯುತ್ತಿರುವುದರಿಂದ ಪೌರ ಕಾರ್ಮಿಕರು ಕಸವನ್ನು ಹುಡುಕಿಕೊಂಡು ಹೋಗುವುದಕ್ಕೆ ಕಷ್ಟವಾಗುತ್ತದೆ.
ಕೆಜಿಎಫ್ ನಗರಸಭೆಯಲ್ಲಿ ಈಗ 83 ಮಂದಿ ಖಾಯಂ ಪೌರ ಕಾರ್ಮಿಕರು, 42 ಮಂದಿ ಚಿನ್ನದ ಗಣಿ ಪ್ರದೇಶಕ್ಕೆ ಸೇರಿದ ಕಾಲೋನಿಗಳಲ್ಲಿ ಹಾಗೂ 25 ಮಂದಿ ಮಾರುಕಟ್ಟೆಯ ಸ್ವಚ್ಛತಾ ಕಾರ್ಯಕ್ಕೆ ಇದ್ದರೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಯುತ್ತಿಲ್ಲ.ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ನಗರಸಭೆಯವರು ಏನೇ ಪ್ರಯತ್ನ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.
ಪರಿಸರ ಎಂಜನಿಯರ್ ಹೇಳಿದ್ದು
ಕೆಜಿಎಫ್ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿದೆ. ನಗರಸಭೆಯೊಂದರಿಂದಲೇ ಈ ಕೆಲಸ ಸಾಧ್ಯವಿಲ್ಲ. ಪರಿಸರ ಇಲಾಖೆ, ಪೊಲೀಸ್, ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಪರಿಣಾಮಕಾರಿ ಕ್ರಮ ಅಗತ್ಯ. ನಗರದ ಹಿತದೃಷ್ಟಿಯಿಂದ ಸಾರ್ವಜನಿಕರು ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೋಡಿಸಬೇಕು ಎಂದು ರವೀಂದ್ರನಾಥ್, ಪರಿಸರ ಎಂಜಿನಿಯರ್.
ಕೆಜಿಎಫ್ ನಗರದಲ್ಲಿ ಸಂಗ್ರಹಣೆ ಆಗುವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ರೈತರಿಗೆ ಕಾಂಪೋಸ್ಟ್ ಗೊಬ್ಬರವನ್ನು ಮಾರಲು ಸಂಸ್ಕರಣಾ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಅದಷ್ಟು ಬೇಗನೆ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ.
- ಬಾಲಚಂದ್ರ, ಪೌರಾಯುಕ್ತರು, ನಗರಸಭೆ, ಕೆಜಿಎಫ್
ಪ್ಲಾಸ್ಟಿಕ್ ನಾಡು
ಪರಿಸರ ಇಲಾಖೆಯವರು ಪ್ಲಾಸ್ಟಿಕ್ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಜಾಣ ಕುರುಡರಾಗಿದ್ದಾರೆ. ಪೇಪರ್ ಇಲ್ಲವೇ ಬಟ್ಟೆ ಬ್ಯಾಗ್ ಉಪಯೋಗಿಸಲು ಕಡ್ಡಾಯ ಕಾನೂನು ಜಾರಿಗೆ ತರದಿದ್ದರೆ ಕೆಜಿಎಫ್ ಬಂಗಾರದ ನಾಡಿಗೆ ಬದಲಾಗಿದೆ ಪ್ಲಾಸ್ಟಿಕ್ ನಾಡಾಗಿ ಜನತೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಕೆಜಿಎಫ್ನ ಪ್ರಜ್ಞಾವಂತ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

