ಭೂ ಮಾಫಿಯಾ ಪೋಡಿ ಅದಾಲತ್ ಅಂಕುಶ
ಪಾ.ಶ್ರೀ.ಅನಂತರಾಮ್
ಕೋಲಾರ: ರೈತರ ಅನುಕೂಲಕ್ಕಾಗಿ ಕಂದಾಯ ಅದಾಲತ್ ನಡೆಸುವ ಮೂಲಕ ಸರ್ಕಾರದಿಂದ ಮೆಚ್ಚುಗೆ ಗಳಿಸಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಭೂ ಮಾಫಿಯಾ ನಿಯಂತ್ರಣಕ್ಕಾಗಿ ಪೋಡಿ ಅದಾಲತ್ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.
ಜಿಲ್ಲೆಯ 27 ಹೋಬಳಿಗಳ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ನಡೆಸುವ ಮೂಲಕ ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಅನಗತ್ಯ ವಿಳಂಬಕ್ಕೆ ಕಡಿವಾಣ ಹಾಕಿ ಗ್ರಾಮೀಣ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿರುವ ಜಿಲ್ಲಾಧಿಕಾರಿಗಳು, ಪೋಡಿ ಅದಾಲತ್ ಮೂಲಕ ಸರ್ಕಾರಿ ಹಾಗೂ ರೈತರ ಭೂಮಿಯನ್ನು ಸಂರಕ್ಷಣೆ ಮಾಡಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಕಂದಾಯ ಅದಾಲತ್ ರಾಜ್ಯದಲ್ಲೇ ಪ್ರಪ್ರಥಮವಾಗಿ ಕೋಲಾರ ಜಿಲ್ಲೆಯಲ್ಲಿ ನಡೆಸಿದ ಹೆಗ್ಗಳಿಕೆ ಜಿಲ್ಲಾಧಿಕಾರಿಗಳಿಗೆ ಸಲ್ಲುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಅವರುಗಳು ಜಿಲ್ಲೆಯಲ್ಲಿ ನಡೆದ ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿ ರಾಜ್ಯಾದ್ಯಂತ ಕಂದಾಯ ಅದಾಲತ್ ನಡೆಸುವುದಕ್ಕೆ ಪ್ರಯತ್ನಿಸುವುದಾಗಿ ಘೋಷಣೆ ಮಾಡಿದ್ದರು. ಕಂದಾಯ ಅದಾಲತ್ ರೈತರು ಹಾಗೂ ಗ್ರಾಮೀಣ ಬಡ ಜನರಿಗೆ ವರದಾನವಾದರೆ, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಗ್ರಾಮ ಲೆಕ್ಕಿಗರಿಗೆ, ಪಹಣಿ ವಿತರಣೆ ಮಾಡುವ ಕೇಂದ್ರದಲ್ಲಿನ ಸಿಬ್ಬಂದಿಗೆ ಮಾತ್ರ ಅಪತ್ಯವಾಗಿತ್ತು. ಏಕೆಂದರೆ ರೈತರು ಕಂದಾಯ ಇಲಾಖೆಗೆ ಬಂದಾಗ ನಾನಾ ರೀತಿಯ ನೆಪ ಹೇಳಿ ಕೆಲಸ ವಿಳಂಬದ ಜೊತೆಗೆ ಕೈ ಬೆಚ್ಚಗೆ ಮಾಡುವವರ ಕೆಲಸ ಬೇಗನೆ ಮಾಡಿಕೊಡಲಾಗುತ್ತಿತ್ತು.
ಪೋಡಿಗೆ ಕಂದಾಯ ಸ್ಫೂರ್ತಿ: ರೈತರ ಸಮಸ್ಯೆಯನ್ನು ಅರಿತ ಜಿಲ್ಲಾಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಇಡೀ ಜಿಲ್ಲೆಯ ಕಂದಾಯ ಇಲಾಖೆಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಕಳೆದ ವರ್ಷವೇ ಕಂದಾಯ ಅದಾಲತ್ಗೆ ಚಾಲನೆ ನೀಡಿ ರೈತರು ಲಂಚದ ಹಾವಳಿ, ಮಧ್ಯವರ್ತಿಗಳ ಕಾಟದಿಂದ ಮುಕ್ತಿ ಹೊಂದುವಂತೆ ಮಾಡಿದರು.
ಕಂದಾಯ ಅದಾಲತ್ ಮೂಲಕ ರೈತರಿಗೆ ಅನುಕೂಲವಾಗುತ್ತಿದ್ದರೂ ಕೆಲವರು ತಮ್ಮ ಹಳೇ ಚಾಳಿಯನ್ನು ಬಿಡದೆ ರೈತರ ಕೆಲಸ ವಿಳಂಬ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕಂದಾಯ ಅದಾಲತ್ ಮುಂದುರೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಸಯಮ ಸಿಕ್ಕಾಗ ತಾಲೂಕು ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ಸಿಬ್ಬಂದಿಗೆ ಶಾಕ್ ಟ್ರೀಟ್ಮೆಂಟ್ ನೀಡುತ್ತಿರುವುದರಿಂದ ತಾಲೂಕು ಕಚೇರಿಗಳ ಬಳಿ ಸದ್ಯಕ್ಕೆ ಜನಸಂದಣಿ ವಿರಳವಾಗಿದೆ. ಕಂದಾಯ ಅದಾಲತ್ ಮಾದರಿಯಲ್ಲೇ ಸರ್ಕಾರಿ ಮತ್ತು ರೈತರ ಭೂಮಿ ಸಂರಕ್ಷಣೆ ಮಾಡಲು ಪೋಡಿ ಅದಾಲತ್ಗೆ ಸಿದ್ಧತೆ ನಡೆಸಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಪೋಡಿ ಕಾರ್ಯಕ್ಕೆ ಬೇಕಾದ ಸರ್ವೆಯರ್ಗಳ ಕೊರತೆ ನಿವಾರಣೆಗೆ ಆದ್ಯತೆ ನೀಡಿದ್ದಾರೆ. ಪ್ರಸ್ತುತ 13 ಮಂದಿ ಸರ್ಕಾರಿ ಸರ್ವೆಯರ್ಗಳು ಹಾಗೂ 27 ಮಂದಿ ಖಾಸಗಿ ಸರ್ವೆಯರ್ಗಳು ಇದ್ದು, ಜಿಲ್ಲೆಯ 27 ಹೋಬಳಿಗಳಲ್ಲಿ ಪೋಡಿ ಅದಾಲತ್ ಯಶಸ್ವಿಗೆ ಬೇಕಾದ ಸರ್ವೆಯರ್ಗಳನ್ನು ಗುರುತಿಸಿ ಅವರಿಗೆ ಪೋಡಿ ಅದಾಲತ್ನಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದರ ಕುರಿತು ತರಬೇತಿ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ ಕನಿಷ್ಠ 30ರಿಂದ 40 ಸರ್ವೆಯರ್ಗಳು ಬೇಕಾಗಿದ್ದಾರೆ. ಪೋಡಿ ಅದಾಲತ್ಗೆ ಬೇಕಾಗುವ ಸರ್ವೆಯರ್ಗಳಿಗೆ ಪರವಾನಗಿ ನೀಡಲಾಗುತ್ತದೆ.
ಪೋಡಿಗೆ ಸಿದ್ಧತೆ: ಜು.7ರಿಂದ 11ರವರೆಗೆ ಪೋಡಿ ಅದಾಲತ್ಗೆ ಆಯಾ ತಾಲೂಕಿನ ತಹಸೀಲ್ದಾರ್ಗಳು ತಯಾರಿ ಮಾಡಿಕೊಳ್ಳಲಿದ್ದಾರೆ. ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರನ್ನು ಒಳಗೊಂಡ ತಂಡವನ್ನು ಇದಕ್ಕಾಗಿ ರಚನೆ ಮಾಡಲಾಗಿದೆ. ಪ್ರತಿ ಹಳ್ಳಿವಾರು ಸರ್ಕಾರಿ ಹಾಗೂ ಖಾಸಗಿ ಭೂಮಿಯ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಸೂಚಿಸಲಾಗಿದೆ. ಜು.21ರಂದು ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯಲ್ಲಿ ಜಿಲ್ಲಾಧಿಕಾರಿ, ಕೋಲಾರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಭೂ ದಾಖಲೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಅದಾಲತ್ ನಡೆಯಲಿದೆ.
ಜು.22ರಂದು ಶ್ರೀನಿವಾಸಪುರ ತಾಲೂಕಿನ ನೆಲವಂಕಿ, ಮುಳಬಾಗಿಲು ತಾಲೂಕಿನ ಬೈರಕೂರು, ಕೋಲಾರದ ನರಸಾಪುರ ಹಾಗೂ ಬಂಗಾರಪೇಟೆಯ ಬೂದಿಕೋಟೆ ಹೋಬಳಿಯಲ್ಲಿ ಪೋಡಿ ಅದಾಲತ್ ನಡೆಯಲಿದ್ದು, 15 ದಿನಗಳ ನಂತರ ಉಳಿದ ಹೋಬಳಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಲು ಸಿದ್ಧತೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

