ಬಾರದ ಮಳೆ: ರೈತರಲ್ಲಿ ಆತಂಕ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಕೃಷಿ ಚಟುವಟಿಕೆ ಬಿರುಸಾಗಿ ನಡೆಯಬೇಕಿದ್ದ ಜೂನ್ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಮುಂಗಾರು ಮಳೆ ಆರ್ಭಟಿಸಬೇಕಿತ್ತು. ಜೂನ್ ತಿಂಗಳ ಮೊದಲ ವಾರದಲ್ಲಿ ಚೆನ್ನಾಗಿ ಮಳೆ ಆಗುತ್ತದೆ ಎಂದು ಕೃಷಿ ಇಲಾಖೆ ಹೇಳುತ್ತಿದ್ದರಿಂದ ರೈತರಲ್ಲಿ ಆಶಾದಾಯಕ ಮನೋಭಾವನೆ ಇತ್ತು. ಈಗ ಜುಲೈ ತಿಂಗಳ ಮೊದಲ ವಾರದಲ್ಲಿ ಮಳೆ ಬರುತ್ತದೆ ಎನ್ನುತ್ತಿರುವುದರ ನಡುವೆಯೇ ಮುಂಗಾರು ಕ್ಷೀಣಿಸಿ ಕೃಷಿಗೆ ಹೊಡೆತ ನೀಡಲಿದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಜೊತೆಗೆ ಕೃಷಿ ಇಲಾಖೆ ಜಿಲ್ಲೆಯಲ್ಲಿಟ್ಟುಕೊಂಡಿರುವ ಒಟ್ಟಾರೆ 1,54,000 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇಳಿಕೆಯಾಗುವ ಗೋಚರವಾಗುತ್ತಿದೆ.
ನೀರಸ: ಮಳೆ ಬಿದ್ದ ತಕ್ಷಣ ಭೂಮಿ ಹದ ಮಾಡಿ ಬಿತ್ತನೆಗೆ ಸಿದ್ಧಪಡಿಸುವ ಕಾರ್ಯ ಇಷ್ಟೊತ್ತಿಗಾಗಲೇ ಮುಗಿಯಬೇಕಿತ್ತು. ಆದರೆ, ಪ್ರಸ್ತುತ ಮಳೆ ಅಭಾವದಿಂದ ಭೂಮಿ ಹದ ಕಾರ್ಯ ನಿಂತಿದೆ. ಈಗಾಗಲೇ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡು ಕಾಯುತ್ತಿದ್ದು ರೈತರೇ ಬರದ ಕಾರಣ ರೈತ ಸಂಪರ್ಕ ಕೇಂದ್ರಗಳು ಮತ್ತೆಗೊಬ್ಬರದ ಅಂಗಡಿಗಳಲ್ಲಿ ವ್ಯವಹಾರ ಸ್ಥಗಿತಗೊಂಡಿದೆ.
ಮಳೆ ಬರಬೇಕು: ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ 113.2 ಮಿ.ಮೀ ಮಳೆ ಬಿತ್ತಾದರೂ ತಿಂಗಳಾಂತ್ಯದಲ್ಲಿ ರಭಸದ ಗಾಳಿ ಸಮೇತ ಬಿದ್ದ ಆಲಿಕಲ್ಲು ಮಳೆಗೆ ಹಲವೆಡೆ ಬೆಳೆಗಳು ನಾಶವಾದವು. ಸಮೃದ್ಧಿಯಾಗಿ ಬೆಳೆದಿದ್ದ ದ್ರಾಕ್ಷಿ, ತರಕಾರಿ ಬೆಳೆಗಳಿಂದ ಒಳ್ಳೆಯ ಲಾಭ ಸಿಗಲಿದೆ ಎನ್ನುವಷ್ಟರಲ್ಲಿಯೇ ಕೋಟ್ಯಂತರ ರು. ನಷ್ಟ ಉಂಟಾಯಿತು. ಜೂನ್ ತಿಂಗಳಲ್ಲಿ 66.1 ಮಿ.ಮೀ ವಾಡಿಕೆ ಸರಾಸರಿ ಮಳೆಗೆ ಕೇವಲ 43.6 ಮಿ.ಮೀ ಮಳೆಯಾಗಿ ಕೊರತೆ ಕಂಡು ಬಂದಿದೆ. ಈಗಲಾದರೂ ಸಮರ್ಪಕವಾಗಿ ವರುಣರಾಯ ಆಗಮಿಸಿ ರೈತರ ಕೈ ಹಿಡಿಯಬೇಕಾಗಿದೆ. ಇಲ್ಲವಾದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಬರ ಎದುರಿಸಿ ತತ್ತರಿಸಿರುವ ರೈತರು ಮತ್ತಷ್ಟು ಸಾಲದ ಕೂಪಕ್ಕೆ ಬೀಳಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

