ಕೋಲಾರ

ಮಳೆರಾಯ ಮಾಯ: ಬಿತ್ತನೆ ಕುಂಠಿತ

Published On :

ಬಂಗಾರಪೇಟೆ: ಕಳೆದ ವಾರ ಕ್ಷೇತ್ರದಲ್ಲಿ ವರುಣ ದೇವರು ತೋರಿದ ಕೃಪೆಯಿಂದಾಗಿ ರೈತರು ಉತ್ತಮ ಬೆಳೆಯನ್ನು ಬೆಳೆಯುವ ಉತ್ಸಾಹ ತೋರಿದ್ದರು. ಈ ಕಾರ್ಯಕ್ಕಾಗಿ ರೈತರು ತಮ್ಮ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಮಾಡಿ ಮತ್ತೆ ಮಳೆಗಾಗಿ ಕಾಯುತ್ತಿದ್ದಾರೆ. ಆದರೆ ಮಳೆರಾಯ ಇತ್ತ ನೋಡದ ಕಾರಣ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಹಲವು ವರ್ಷಗಳಿಂದ ಮಳೆಯಿಲ್ಲದೆ ಮೂಲೆ ಗುಂಪು ಸೇರಿದ್ದ ಕೃಷಿ ಸಲಕರಣೆಗಳನ್ನು ಹೊರ ತೆಗೆಯುತ್ತಿರುವುದರಿಂದ ಕ್ಷೇತ್ರದಲ್ಲಿ ಮತ್ತೆ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದೆ. 8 ವರ್ಷಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರು ಸೇರಿದಂತೆ ಎಲ್ಲಾ ವರ್ಗದ ಜನರು, ಕುಡಿಯಲು ಹನಿ ನೀರಿಲ್ಲದೆ ಬದುಕು ಮೂರಾಬಟ್ಟೆ ಆಗಿತ್ತು. ಇನ್ನೇನು ರೈತರ ಬದುಕು ಮುಗಿದೇ ಹೋಯಿತು ಎಂದು ಭಾವಿಸಲಾಗಿತ್ತು. ರೈತರು ಕೃಷಿ ಚಟುವಟಿಕೆ ಬಿಟ್ಟು ಪರ್ಯಾಯ ಕಸುಬುಗಳನ್ನು ಹುಡುಕಲಾರಂಭಿಸಿದರು.ಮಳೆಗಾಗಿ ಎಲ್ಲಾ ವಿಧವಾದ ಪೂಜೆಗಳನ್ನು ಮಾಡಿದ್ದರೂ ಮಳೆರಾಯ ಮಾತ್ರ ಕ್ಷೇತ್ರದ ಕಡೆ ಮುಖ ತೋರಿರಲಿಲ್ಲ.
ಮನುಷ್ಯ ಹೇಗೋ ಬದುಕುವರು. ಆದರೆ ಜಾನುವಾರುಗಳ ಪರಿಸ್ಥಿತಿ ಹೇಳ ತೀರದಾಗಿದೆ. ಮೇವು ಮತ್ತು ನೀರಿನ ಕೊರತೆಯಿಂದಾಗಿ ವರ್ಷಾನುಗಟ್ಟೆ ಪ್ರೀತಿಯಿಂದ ಸಾಗಿದ್ದ ಜಾನುವಾರುಗಳನ್ನು ರೈತರು ಮಾರಾಟ ಮಾಡುವಂತ ಸ್ಥಿತಿ ಬಂದೊದಗಿದೆ. ಕ್ಷೇತ್ರವನ್ನು ಕಾಡುತ್ತಿರುವ ಬರವನ್ನು ನೋಡಿ ಸರ್ಕಾರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ.ಆದರೆ ಬರಪೀಡಿತ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಎಲ್ಲಿಯೂ ಕೈಗೊಂಡಿಲ್ಲ. ಹನಿ ನೀರಿಲ್ಲದ ರೈತರ ಕೃಷಿ ಭೂಮಿಷಗಳು ಆಟದ ಮೈದಾನಗಳಾಗಿವೆ. ಈ ನಡುವೆ ರಿಯಲ್ ಎಸ್ಟೇಟ್ ಏಜೆಂಟರು ಅಗ್ಗದ ಬೆಲೆಗೆ ರೈತರ ಜಮೀನುಗಳನ್ನು ಖರೀದಿ ಮಾಡಿ ಸೈಟುಗಳನ್ನಾಗಿ ಪರಿವರ್ತಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಕಳೆದ ವಾರ ಕ್ಷೇತ್ರದ ಜನತೆ ಮೇಲೆ ಮಳೆರಾಯ ಸ್ವಲ್ಪ ಕರಣೆ ತೋರಿದ್ದಾರೆ.ಇದರಿಂದ ಹಳ್ಳ ಕೊಳ್ಳಗಳಲ್ಲಿ ಅಲ್ಪಸ್ವಲ್ಪ ನೀರು ಸಂಗ್ರಹವಾಗಿದೆ. ಭೂಮಿ ತೇವವಾಗಿದೆ, ರೈತರು ಮತ್ತೆ ಕೃಷಿಯಲ್ಲಿ ತೊಡಗಲು ಮುಂದಾಗಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟಿತ್ತು. ಈ ಬಾರಿ ಮಳೆ ಆರಂಭ ಆಶಾದಾಯಕವಾಗಿರುವುದರಿಂದ ಉತ್ತಮ ಬೆಳೆ ಬೆಳೆಯಲು ಮುಂದಾಗಿದ್ದಾರೆ. ರೈತರು ತಮ್ಮ ಹೊಲಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಬಿತ್ತನೆ ಬೀಜಗಳನ್ನು ಖರೀದಿ ಮಾಡಲು ವಾರದ ಸಂತೆಗಳಿಗೆ ರೈತರು ಮುಗಿ ಬೀಳುತ್ತಿದ್ದಾರೆ. ಕ್ಷೇತ್ರದಲ್ಲಿ ಶೇಂಗಾ ಬೆಳೆ ಅಧಿಕವಾಗಿ ಬೆಳೆಯುತ್ತಾರೆ. ಕಳೆದ ಬಾರಿ ಮಳೆ ಕೈ ಕೊಟ್ಟಿತ್ತು. ಈ ಬಾರಿ ರೈತರಲ್ಲಿ ಕೊಂಚ ಉತ್ಸಾಹ ಇಮ್ಮಡಿಸಲು ಕಾರಣವಾಗಿದೆ.
ರಸಗೊಬ್ಬರಗಳು ಕಳೆದ ಬಾರಿ ಕೃತಕ ಅಭಾವ ಸೃಷ್ಟಿಯಾದಂತೆ ಈ ಬಾರಿ ಗೊಬ್ಬರಗಳಿಗಾಗಿ ರೈತರು ಅಳೆಯುವಂತಿಲ್ಲ. ಎಲ್ಲಾ ಗೊಬ್ಬರದ ಅಂಗಡಿಗಳಲ್ಲಿ ದಾಸ್ತಾನು ಇದೆ.ಆದರೆ ಮತ್ತೆ ವಾರದಿಂದ  ಮಳೆರಾಯ ಮುಖ ಮಾಡದೆ ಆಶಾಡ ಗಾಳಿ ಬೀಸುತ್ತಿರುವುದು ಮತ್ತೆ ರೈತರನ್ನು ಆತಂಕಗೊಳಿಸುವಂತೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.