ಕೋಲಾರ

ಪ್ಲಾಸ್ಟಿಕ್ ವಸ್ತುಗಳ ವಶ

Published On :

ಕನ್ನಡ ಪ್ರಭವಾರ್ತೆ, ಮಾಲೂರು.ಜೂ.27
ಪುರಸಭೆಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪಟ್ಟಣದ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಪ್ಲಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
 ಪಟ್ಟಣದ ಮಹಾರಾಜ ವೃತ್ತ, ಐಡಿ ಸಮಿತಿ ಸಂಕೀರ್ಣ, ಬಸ್ ನಿಲ್ದಾಣ ಸುತ್ತಮುತ್ತಲ ಪ್ರದೇಶ, ಡಾ.ರಾಜ್ ವೃತ್ತ, ಗಾಂಧಿ ವೃತ್ತಗಳಿಲ್ಲಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ವಸ್ತು-ಸಾಮಾಗ್ರಿಗಳನ್ನು ತುಂಬಿಸಿಕೊಡಲು ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ಲೋಟಗಳನ್ನು ವಶ ಪಡಿಸಿಕೊಳ್ಳಲಾಯಿತು.
05 ಕೆಜಿ ವಶ: ಈ ಸಂಧರ್ಭದಲ್ಲಿ ಮಾತನಾಡಿದ ಆರೋಗ್ಯ ನಿರೀಕ್ಷಕ ಉದಯ್, ಪ್ರತಿ ಅಂಗಡಿಗಳಿಗೆ ಭೇಟಿ ನೀಡಿ ಇದ್ದ 105 ಕೆಜಿ ಕವರ್ಸ್ ಹಾಗೂ ಪಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಬಾರಿ ಪ್ರತಿ ಅಂಗಡಿಯವರಿಗೆ 40 ಮೈಕ್ರಾನ್‌ಕ್ಕಿಂತ ಕಡಿಮೆ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಬಾರದು ಹಾಗೂ ಉಪಯೋಗಿಸಿಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
 ಈ ರೀತಿಯ ದಾಳಿ ವಾರಕ್ಕೆ ಎರಡು ಬಾರಿ ಮಾಡಲು ಮೇಲಿನಾಧಿಕಾರಿಗಳ ಆದೇಶವಾಗಿದ್ದು, ದಾಳಿ ಮಾಡಿದಾಗ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಂದರು.
 ಇನ್ನೂರ್ವ ಆರೋಗ್ಯ ನಿರೀಕ್ಷಿಕ ರಾಜಣ್ಣ,ಕಂದಾಯ ನಿರೀಕ್ಷಕ ರಮೇಶ್,ವ್ಯವಸ್ಥಾಪಕಿ ಸುಶೀಲಮ್ಮ, ವೆಂಕಟೇಶ್, ರವಿ, ವಿನೋದ್, ಜಯದೇವ್, ವೆಂಕಟರಾಂ, ಬಾಬು ಇದ್ದರು.
ಮಕ್ಕಳನ್ನು ದುಡಿಮೆಗೆ ಕಳುಹಿಸುವುದು
ಅಪರಾಧ: ನ್ಯಾ. ಡಿ.ಆರ್.ಮಂಜುನಾಥ್
ಕೋಲಾರ: ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಕಳುಹಿಸಿ ಅವರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಪೋಷಕರಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಆರ್.ಮಂಜುನಾಥ್ ಹೇಳಿದರು.
ಜಿಲ್ಲೆಯ ಶ್ರೀನಿವಾಸಪುರದ ರಂಗಾರಸ್ತೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಾಗೃತಿ ಸೇವಾ ಸಂಸ್ಥೆ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಬಾಲಕಾರ್ಮಿಕ ನೇಮಕಾತಿ ವಿರೋಧಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಸಿವಿಲ್ ನ್ಯಾ. ಬಿ.ಮೋಹನ್ ಬಾಬು, ಬಾಲಕಾರ್ಮಿಕ ಪದ್ದತಿ ಒಂದು ಅನಿಷ್ಟವಾಗಿದ್ದು, ಯಾರಾದರೂ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಕರೆ ನೀಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ, ಮಾತನಾಡಿದರು. ಕೆ.ಆರ್.ಧನರಾಜ್, ಸಿ.ಆರ್.ವೆಂಕಟರೆಡ್ಡಿ, ಸಿ.ಎಚ್.ಜಯಶಂಕರ್, ಎಂ.ಸಿ.ಲಕ್ಷ್ಮೀನಾರಾಯಣ ಬಾಲಕಾರ್ಮಿಕ ಪದ್ದತಿಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಕರ ವಸೂಲಿಗಾರ ನೇಮಕ: ಪರ-ವಿರೋಧ ಪ್ರತಿಭಟನೆ
ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾ.ಪಂ. ಕಚೇರಿಯಲ್ಲಿ ಕರ ವಸೂಲಿಗಾರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಗ್ರಾ.ಪಂ ಸದಸ್ಯರಲ್ಲಿ ಭಿನ್ನಾಭಿಪ್ರಾಯವಿರುವ ಕಾರಣ ಪರ-ವಿರೋಧ ಪ್ರತಿಭಟನೆಗಳು ನಡೆದವು.
ಉಲ್ಲೋಡು ಗ್ರಾ.ಪಂ. ವ್ಯಾಪ್ತಿಯ 22 ಗ್ರಾಮಗಳಿಗೆ ಕರ ವಸೂಲಿಗಾರ ಇಲ್ಲದ ಕಾರಣ ಕಚೇರಿಯ ಗುಮಾಸ್ಥ ಮಾರಪ್ಪ ಎಂಬುವವರು ತಾತ್ಕಾಲಿಕವಾಗಿ ಕರವಸೂಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಸ್ತುತ ಮಾರಪ್ಪನಿಗೆ ಮುಂಬಡ್ತಿ ದೊರೆತ ಕಾರಣ ವರ್ಗಾವಣೆಯಾಗುತ್ತಿದ್ದರಿಂದ ಈ ಹುದ್ದೆಯನ್ನು ಭರ್ತಿ ಮಾಡಲು ಗ್ರಾ.ಪಂ. ಅಧ್ಯಕ್ಷ ಸೇರಿ 8 ಸದಸ್ಯರು ಆರ್.ರಾಜಪ್ಪ ಎಂಬುವವರನ್ನು ನೇಮಕ ಮಾಡಿಕೊಳ್ಳುವಂತೆ ಪಿಡಿಒ ನಾರಾಯಣಸ್ವಾಮಿಗೆ ಪತ್ರ ಬರೆದಿರುತ್ತಾರೆ. ಆದರೆ ರಾಜಪ್ಪನ ನೇಮಕ ಬೇಡವೆಂದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಈ ಕುರಿತು ಗ್ರಾ.ಪಂ. ಸದಸ್ಯ ಸುರೇಂದ್ರರೆಡ್ಡಿ ಮಾತನಾಡಿ ಉಲ್ಲೋಡು ಗ್ರಾ.ಪಂ ನಲ್ಲಿ ಕರವಸೂಲಿಗಾರ ಹುದ್ದೆ ಖಾಲಿಯಿರುವುದು ಸರಿ. ಆದರೆ ಆ ಹುದ್ದೆ ಭರ್ತಿ ಮಾಡಲು ನಿಯಮ ಗಾಳಿಗೆ ತೂರಿ ಅಧ್ಯಕ್ಷ ಹಾಗೂ ಕೆಲವು ಸದಸ್ಯರು ನೇಮಕ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ಇದೇ ವೇಳೆ ಗ್ರಾ.ಪಂ. ಸದಸ್ಯರಾದ ಹಳೇಗುಡಿಬಂಡೆ ಬಾಬುರೆಡ್ಡಿ, ಉಪ್ಪಾರಹಳ್ಳಿ ಮಹಬೂಬಬ್ಪಾಷ, ಕಾಂಗ್ರೆಸ್ ಮುಖಂಡರಾದ ಹೆಚ್.ಪಿ. ರಾಮನಾಥ್, ಉಲ್ಲೋಡು ಮೂರ್ತಿ, ಕರಿಗಾನತಮ್ಮನಹಳ್ಳಿ ರಾಜಪ್ಪ, ಸೋಮಶೇಖರ, ನಿಚ್ಚನಬಂಡಹಳ್ಳಿ ಅಶ್ವತ್ಥಪ್ಪ ಹಾಗೂ ಕೆಲವರು ಆರ್. ರಾಜಪ್ಪ ಎಂಬುವವರನ್ನು ಕರವಸೂಲಿಗಾರನನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಗ್ರಾ.ಪಂ ಮುಂದೆ ಪ್ರತಿಭಟನೆ ಸಹ ನಡೆಸಿದರು.
ಕರ ವಸೂಲಿಗಾರ ಹುದ್ದೆ ನೇಮಕಾತಿಯ ಬಗ್ಗೆ ಮೇಲಾಧಿಕಾರಿಗಳಿಂದ ನಮಗೆ ಯಾವುದೇ ಆದೇಶವಾಗಲೀ ಪತ್ರವಾಗಲಿ ಬಂದಿಲ್ಲ. ಜೊತೆಗೆ ಗ್ರಾ.ಪಂ. ಸಭೆಯಲ್ಲೂ ಚರ್ಚೆ ನಡೆದಿಲ್ಲ. ಅಧ್ಯಕ್ಷ ಸೇರಿ 9 ಸದಸ್ಯರು ಸಹಿ ಹಾಕಿರುವ ಪತ್ರ ನನಗೆ ತಲುಪಿದ್ದು, ಇದನ್ನು ತಾ.ಪಂ. ಇಒ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅವಧಿ ಮೀರಿದ ವಾಹನ ಬಳಕೆಗೆ ವಿರೋಧ
ಕೋಲಾರ: ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅವಧಿ ಮೀರಿದ ವಾಹನಗಳನ್ನು ಬಳಸುತ್ತಿರುವ ಜಿಲ್ಲೆಯ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜನ ಸೇನೆ ಸಂಘಟನೆಯು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
 ಖಾಸಗಿ ಶಾಲೆಗಳು ಬಳಸುತ್ತಿರುವ ವಾಹನಗಳು ತುಂಬಾ ಹಳೆಯದಾಗಿದೆ, ಈ ವಾಹನಗಳು ಪಕ್ಕದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡುನಲ್ಲಿ ಬಳಸಿದ ವಾಹನಗಳಾಗಿದ್ದು, ಸಾರಿಗೆಗೆ ಯೋಗ್ಯವಲ್ಲದ ವಾಹನಗಳಾಗಿದ್ದರೂ ಆಡಳಿತ ಮಂಡಳಿಯವರು ಡಕೋಟಾ ವಾಹನಗಳನ್ನು ಬಳಸುವ ಮೂಲಕ ಮಕ್ಕಳ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ದೂರಿದ್ದಾರೆ.
ಅವಧಿ ಮೀರಿದ ವಾಹನ: ಪೋಷಕರಿಂದ ಸಾವಿರಾರು ರು.ಗಳನ್ನು ಸಾರಿಗೆ ಶುಲ್ಕ ನೆಪದಲ್ಲಿ ವಸೂಲಿ ಮಾಡುವ ಖಾಸಗಿ ಶಾಲೆಗಳು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸಾರಿಗೆ ಇಲಾಖೆಯವರೂ ಸಹ ಅವಧಿ ಮೀರಿದ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲವೆಂದು ಆರೋಪಿಸಿದರು.
 ಜನ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ವಕೀಲ ಜಿ. ವೆಂಕಟಾಚಲಪತಿ, ರಾಜ್ಯ ಕಾರ್ಯಾಧ್ಯಕ್ಷ ವಕೀಲ ಎನ್. ಎಲ್. ಶ್ರೀನಿವಾಸ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಸ್. ಪ್ರಾಣೇಶ್ ಸಿಂಗ್, ಖಜಾಂಚಿ  ಮಿಲಿಟರಿ ಆರ್. ಎಂ. ರಾಮಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.