ಕೋಲಾರ

ಕೋಳಿ ಜಗಳ ಮಾಡದಿರಿ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಜೂ.30
ತಳ ಸಮುದಾಯದವರು ಕ್ಷುಲ್ಲಕ ಕಾರಣಗಳಿಗೆ ಜಗಳ ಮಾಡಿಕೊಳ್ಳುವುದು ಬಿಟ್ಟು  ಅಭಿವೃದ್ಧಿ ಪಥದಲ್ಲಿ ಸಾಗಲು ಒಂದಾಗಬೇಕೆಂದು ಶಾಸಕ ಆರ್. ವರ್ತೂರು ಪ್ರಕಾಶ್ ತಿಳಿಸಿದರು.
ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಯುವಕರ ಸಂಘ ಆಯೋಜಿಸಿದ್ದ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಎರಡನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶತಮಾನಗಳಿಂದಲೂ ತುಳಿತಕ್ಕೊಳಗಾಗಿರುವ ಸಮುದಾಯದ ಜನರು ಒಳ ಪಂಗಡಗಳ ಕಚ್ಚಾಟ ಬಿಟ್ಟು ಸಂಘಟಿತರಾಗುವ ಮೂಲಕ ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮದಲ್ಲಿ ಬಾಕಿ ಉಳಿದಿರುವ ಶಾಲೆಗೆ ಅಡುಗೆ ಮನೆ, ಶಾಲಾ ಕಟ್ಟಡ, ಶೌಚಾಲಯ, ಉಳಿಕೆ ಇರುವ ರಸ್ತೆಗಳಲ್ಲಿ ಚರಂಡಿ, ಸಿಮೆಂಟ್  ರಸ್ತೆಗಳ ನಿರ್ಮಾಣ, ಯಲ್ಲಮ್ಮ ದೇವಾಲಯ ಗೋಪುರ ನಿರ್ಮಾಣ ಮಾಡುವುದಾಗಿ ಶಾಸಕರು ಪ್ರಕಟಿಸಿದರು.
ತಾವು ಶಾಸಕರಾದ ಮೇಲೆ ಗದ್ದೆಕಣ್ಣೂರು ಗ್ರಾಮಕ್ಕೆ ಅತಿ ಹೆಚ್ಚು ಕಾಮಗಾರಿಗಳನ್ನು ಮಂಜೂರು ಮಾಡಿದ್ದರೂ, ಕಳೆದ ಚುನಾವಣೆಯಲ್ಲಿ ಗ್ರಾಮಸ್ಥರು ತಮ್ಮ ಮೇಲೆ ಮುನಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಗ್ರಾಮದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ, ಮುಂದಿನ ಪಂಚಾಯಿತಿ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ತಮ್ಮ ಬಣಕ್ಕೆ ಗೆಲ್ಲಿಸಿಕೊಡಬೇಕೆಂದು ಗ್ರಾಮಸ್ಥರಿಂದ ವಾಗ್ದಾನ ಪಡೆದುಕೊಂಡರು.
ಬಡವರು ಮತ್ತು ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ತಮಗೆ ಕ್ಷೇತ್ರದ ಜನತೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ನೀಡಿದರೆ ಇನ್ನಷ್ಟು ಕೆಲಸ ಮಾಡಲು ಸಹಕಾರಿಯಾಗುತ್ತದೆಯೆಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ದಲಿತರು ಮತ್ತು ಬಡವರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ರಾಜಕೀಯ ಪರಂಪರೆಗೆ ಶಾಸಕ ವರ್ತೂರು ಪ್ರಕಾಶ್ ಕಡಿವಾಣ ಹಾಕಿದ್ದಾರೆ. ದಲಿತ ಕೇರಿಗಳಿಗೂ ಅಭಿವೃದ್ಧಿ ತಲುಪುವಂತೆ ಮಾಡಿದ್ದಾರೆ. ಆದರೆ, ದಲಿತ ಸಮುದಾಯ ಇನ್ನೂ ಜಾಗೃತರಾಗದ ಕಾರಣದಿಂದ ಶಾಸಕರ ಪ್ರಯತ್ನಗಳಿಗೆ ಸರಿಯಾದ ಬೆಂಬಲ ಸಿಗದಂತಾಗಿದೆ. ಈ ನಿಟ್ಟಿನಲ್ಲಿ ದಲಿತ ಸಮುದಾಯ ಜಾಗೃತಿಗೊಳ್ಳಬೇಕಿದೆ. ಇಲ್ಲವಾದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಎಷ್ಟೇ ಸಮಾರಂಭಗಳನ್ನು ನಡೆಸಿ ಕ್ರಾಂತಿ ಗೀತೆಗಳ ಹಾಡಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಯುವಕರ ಸಂಘದಿಂದ ಶಾಸಕ ವರ್ತೂರು ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ವರ್ತೂರು ಬಣದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸುಧಾಕರ್, ಮಾರ್ಜೇನಹಳ್ಳಿ ಬಾಬು, ನಿವೃತ್ತ ಶಿಕ್ಷಕ ಎಚ್.ಬಿ. ವೆಂಕಟೇಶ್, ಕೃಷ್ಣಮೂರ್ತಿ, ಪ್ರಸನ್ನಕುಮಾರ್,  ನಾರಾಯಣಪ್ಪ, ಚಂದ್ರಪ್ಪ, ನಾಗೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.