ಮೈಸೂರು

ಕಬಿನಿ ಆಸುಪಾಸಲ್ಲಿ ಕೃಷಿ ಚಟುವಟಿಕೆ ಬಲು ಜೋರು

Published On :

ಕ.ಪ್ರ.ವಾರ್ತೆ ನಂಜನಗೂಡು ಆ. 4
ಕಬಿನಿ ಜಲಾಶಯ ತುಂಬಿ ತುಳುಕುತ್ತಿದ್ದು, ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಇತ್ತ ನದಿ ಪಾತ್ರದ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಕಬಿನಿ ಜಲಾಶಯದಿಂದ ರಾಂಪುರ ನಾಲೆ, ಹುಲ್ಲಹಳ್ಳಿ ನಾಲೆಗೆ ನೀರು ಹರಿಸಲಾಗಿದೆ. ರೈತರು ಜಮೀನುಗಳಿಗೆ ನೀರು ಹಾಯಿಸಿ ಉಳುಮೆ ಮಾಡಿ ಹದ ಮಾಡಿಕೊಳ್ಳುತ್ತಿದ್ದಾರೆ. ಬತ್ತದ ಒಟ್ಲು ಹಾಕಿ ನಾಟಿ ಪೈರು ಬೆಳೆಸಲಾಗಿದೆ. ಉಳುಮೆ ನಂತರ ಬತ್ತದ ಗದ್ದೆಯನ್ನು ಸರಿಯಾಗಿ ಮಟ್ಟ ಮಾಡಿ ನೀರು ಒಂದೇ ಸಮವಾಗಿ ನಿಲ್ಲುವಂತೆ ರೈತರು ನೋಡಿಕೊಳ್ಳುತ್ತಿದ್ದಾರೆ. ಹುಲ್ಲಹಳ್ಳಿಯಿಂದ ಹಿಡಿದು ಟಿ. ನರಸೀಪುರವರೆಗಿನ ಗ್ರಾಮಗಳ ರೈತರೆಲ್ಲರೂ ಕೃಷಿಯಲ್ಲಿ ನಿರತರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ವರುಣ ಕೈಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ರೈತರು ಬರದಿಂದ ತತ್ತರಿಸಿದ್ದರು. ಹೊಲ- ಗದ್ದೆಗಳು ನೀರಿಲ್ಲದೆ ಬರಡಾಗಿದ್ದವು. ಜಾನುವಾರುಗಳು ಸರಿಯಾದ ಮೇವಿಲ್ಲದೆ, ನೀರಿನಲ್ಲದೆ ಸೊರಗಿದ್ದವು. ಆದರೆ, ಈ ವರ್ಷ ಮುಂಗಾರು ಸರಿಯಾದ ಸಮಯದಲ್ಲೇ ರಾಜ್ಯ ಪ್ರವೇಶಿಸಿ ಸಿಂಚನ ಎರೆದಿತ್ತು. ಇದರಿಂದ ಹಚ್ಚ ಹಸಿರು ಎಲ್ಲೆಡೆ ತೂಗಿತ್ತು. ರಾಜ್ಯದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹೀಗಾಗಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇದನ್ನು ಕಂಡ ರೈತರ ಮೊಗದಲ್ಲಿ ಮಂದಹಾಸ ತಂತಾನೆ ಮೂಡಿದೆ.
ರೈತರ ಉಲ್ಲಸಿತ ಮನಸ್ಥಿತಿ ಅರಿತ ಸರ್ಕಾರ ಆಯಾ ಭಾಗದ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ದುಡಿಮೆಗೆ ನೆರವಾಗುವಂತೆ ತಿಳಿಸಿದೆ. ಈ ಆಜ್ಞೆ ಪಾಲಿಸಲು ಮುಂದಾಗಿರುವ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಲು ಸಜ್ಜಾಗಿದ್ದಾರೆ. ಅದರಂತೆ ನಂಜನಗೂಡು ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ರೈತರ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ.
ನಾಟಿ ಪ್ರದೇಶವನ್ನು ಸಿದ್ಧಪಡಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ನಾಟಿ ಮಾಡಲು ಮೂರು ವಾರಗಳ ಮೊದಲೇ ಹೆಕ್ಟೇರ್‌ಗೆ 5 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ಅನ್ನು ಮಣ್ಣಿನಲ್ಲಿ ಬೆರೆಸಬೇಕು. ಸಸ್ಟೇನಿಯಾ ಅಥವಾ ಡಯಂಡ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಮೇ, ಜೂನ್‌ನಲ್ಲಿ ಗದ್ದೆಯಲ್ಲಿ ಬಿತ್ತಿ ಬತ್ತವನ್ನು ನಾಟಿ ಮಾಡುವ 3 ವಾರಗಳ ಮುಂಚೆ ಕಟಾವು ಮಾಡಿ ಮಣ್ಣಿನಲ್ಲಿ ಸೇರಿಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಹಸಿರು ಎಲೆ ಗೊಬ್ಬರವನ್ನು ಒದಗಿಸುವುದಾದಲ್ಲಿ ಹೆಕ್ಟೇರ್‌ಗೆ 10 ಟನ್ ಎಲೆ ಮತ್ತು ಎಲೆಯ ಕಾಂಡಗಳನ್ನು ಮಾತ್ರ ಮಣ್ಣಿನಲ್ಲಿ ಬೆರೆಸಿ ಹೆಚ್ಚಾಗಿ ಬಲಿತಿರುವ ಕಡ್ಡಿಗಳನ್ನು ಬೇರ್ಪಡಿಸಿ ನಾಟಿಗೆ ಮೂರು ವಾರಗಳ ಮೊದಲೇ ಮಣ್ಣಿನಲ್ಲಿ ಬೆರೆಸುವುದು ಅಗತ್ಯ. ಗೊಬ್ಬರವನ್ನು ಕೊಟ್ಟ ಮೇಲೆ ನೀರು ಮಡಿಯಿಂದ ಮತ್ತೊಂದು ಮಡಿಗೆ ಹರಿದು ಹೋಗದಂತೆ ಎಚ್ಚರ ವಹಿಸಿ ಎಂದು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.