ಕೂಲಿಗಾಗಿ ಜಗಳ; ವ್ಯಕ್ತಿ ಕೊಲೆ
ಕ.ಪ್ರ.ವಾರ್ತೆ ಮೈಸೂರು ಆ. 5
ಕೂಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಡಿ ವ್ಯಕ್ತಿಯೊಬ್ಬನನ್ನು ಸಹಪಾಠಿಯೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಂಧಿನಗರ ನಿವಾಸಿ ರಾಜ (45) ಕೊಲೆಯಾದ ವ್ಯಕ್ತಿ. ಈತನನ್ನು ಬಿಎಂಶ್ರೀ ನಗರ ನಿವಾಸಿ ವಿಜಯ (25) ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಂದೇ ಮಾತರಂನಗರದಲ್ಲಿರುವ ಸಿಮೆಂಟ್ ಗೋದಾಮಿನಲ್ಲಿ ರಾಜ ಮತ್ತು ವಿಜಯ ಲೋಡರ್ಗಳಾಗಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಸಿಮೆಂಟ್ ಲೋಡ್ ಮಾಡಿದ ಹಣ ಪಡೆದು ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಡಿದ್ದಾರೆ. ಸಂಜೆ ಕುಡಿದು ಬಂದ ವಿಜಯ ಮತ್ತೆ ಜಗಳ ತೆಗೆದಿದ್ದಾನೆ. ರಾಜನ ಮೇಲೆ ವಿಜಯ ಹಲ್ಲೆ ನಡೆಸುತ್ತಿದ್ದಾಗ, ರಾಜನ ಪತ್ನಿ ಮೇರಿ ರೆಜಿನಾ ಜಗಳ ಬಿಡಿಸಲು ಬಂದಿದ್ದು, ಆಕೆಯನ್ನು ವಿಜಯ ಪಕ್ಕಕ್ಕೆ ತಳ್ಳಿದ್ದಾನೆ. ಕೈಗೆ ಸಿಕ್ಕ ಕಲ್ಲಿನಿಂದ ರಾಜನ ಮುಖವನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಈ ಸಂಬಂಧ ರಾಜನ ಪತ್ನಿ ಮೇರಿ ರೆಜಿನಾ ನೀಡಿರುವ ದೂರಿನ್ವಯ ಮಂಡಿ ಠಾಣೆ ಇನ್ಸ್ಪೆಕ್ಟರ್ ಟಿ.ಬಿ. ರಾಜಣ್ಣ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅವ್ಯವಸ್ಥೆ; ಆರೋಪ: ಸಿಮೆಂಟ್ ಗೋದಾಮಿನಲ್ಲಿ ಕೆಲಸ ಮಾಡುವವರ ವಿವರವನ್ನು ಸಂಬಂಧಪಟ್ಟವರು ಸಂಗ್ರಹಿಸಿಟ್ಟಿಲ್ಲ. ಯಾರು ಕೆಲಸಕ್ಕೆ ಬರುತ್ತಾರೆ, ಯಾರಿಗೆ ಎಷ್ಟು ಹಣ ಪಾವತಿಸಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಲಿ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಸಹ ಒದಗಿಸಿಲ್ಲ. ಇದರಿಂದಾಗಿಯೇ ಕೂಲಿ ಹಣ ಹಂಚಿಕೆ ವಿಚಾರದಲ್ಲಿ ಕೂಲಿ ಕಾರ್ಮಿಕರ ನಡುವೆ ಆಗಾಗ ಜಗಳವಾಗುತ್ತಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೀಟರ್ ಬಡ್ಡಿ ದಂಧೆ: ಇಬ್ಬರ ವಿರುದ್ಧ ಪ್ರಕರಣ
ಮೈಸೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಇಬ್ಬರ ವಿರುದ್ಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೃಂದಾವನ ಬಡಾವಣೆಯ ವಿಶ್ವ ಮತ್ತು ತಿಲಕ್ನಗರದ ವೆಂಕಟೇಶ್ ಎಂಬವರ ವಿರುದ್ಧ ಬಿಎಂಶ್ರೀನಗರ ನಿವಾಸಿ ಗೋಪಾಲ್ ಎಂಬವರು ದೂರು ನೀಡಿದ್ದಾರೆ. ವಿಶ್ವ ಬಳಿ 27,000 ರು. ಹಾಗೂ ವೆಂಕಟೇಶ್ ಬಳಿ 19,000 ರು. ಬಡ್ಡಿಗಾಗಿ ಹಣ ಪಡೆದಿದ್ದು, ಸಾಕಷ್ಟು ಹಣ ಪಾವತಿಸಿದ್ದೇನೆ. ಆದರೂ ಹೆಚ್ಚಿನ ಹಣ ನೀಡುವಂತೆ ಕೇಳುತ್ತಿದ್ದಾರೆ ಎಂದು ಗೋಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ವಿವೇಕಾನಂದ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೀಟರ್ ಬಡ್ಡಿ: ದೂರು ನೀಡಿ
ಮೈಸೂರು: ನಗರದಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆಯು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿಯಂತ್ರಿಸಬೇಕಿದ್ದರೆ, ಮೀಟರ್ ಬಡ್ಡಿಯಿಂದ ನೊಂದವರು ಹಾಗೂ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸದೆ ಹೋದಲ್ಲಿ ಸಾರ್ವಜನಿಕರು ಪೊಲೀಸ್ ಆಯುಕ್ತರ ಕಚೇರಿಗೆ ನೇರವಾಗಿ ದೂರು ನೀಡಬಹುದು. ದೂ. 0821- 2418300, 2418301 ಸಂಪರ್ಕಿಸಿ ದೂರು ಸಲ್ಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

