ಮೈಸೂರು

ಮಳೆ ಬಂದರೂ ತಪ್ಪದ ರೈತರ ಸಂಕಷ್ಟ

Published On :

  ಕುಪ್ಪೆ ಮಹದೇವಸ್ವಾಮಿ
ಕ.ಪ್ರ.ವಾರ್ತೆ   ಕೆ.ಆರ್. ನಗರ   ಆ. 5
ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನದಿಗಳು ಉಕ್ಕಿ ಹರಿದು ಅಣೆಕಟ್ಟೆಗಳು ತುಂಬಿ ಬತ್ತದ ನಾಟಿ ಕಾರ್ಯ ಚುರುಕುಗೊಂಡಿದ್ದರೂ ಕಾವೇರಿ ನದಿ ಪಾತ್ರದ ಕೆ.ಆರ್. ನಗರ ತಾಲೂಕಿನ ನಾಲೆಗಳ ಕೊನೆಯ ಭಾಗದ ರೈತರಿಗೆ ಮಾತ್ರ ನೀರಿನ ಸಂಕಷ್ಟ ತಪ್ಪಿಲ್ಲ.
ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಚುನಾಯಿತ ಜನಪ್ರತಿನಿಧಿಗಳ ತಾತ್ಸಾರದಿಂದ ತಾಲೂಕಿನ ರಾಮಸಮುದ್ರ, ಚಾಮರಾಜ ಎಡ ಮತ್ತು ಬಲದಂಡ ನಾಲೆಗಳು ಹಾಗೂ ಮಿರ್ಲೆ ಶ್ರೇಣಿಯ ಅತ್ತಿಕಟ್ಟೆ ಹಿರಿನಾಲೆಗಳ ಕೊನೆಯ ಭಾಗಕ್ಕೆ  ನೀರು ಸರಬರಾಜಾಗದೆ ರೈತರು ನಿತ್ಯ ಪರಿತಪಿಸುತ್ತಿದ್ದಾರೆ.
ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇದ್ದುದರಿಂದ ಈಗ ರೈತರು ನೀರಿಲ್ಲದೆ ಪರದಾಡುತ್ತಿದ್ದು ಕಚೇರಿ ಮುಂದೆ ರಸ್ತೆಗಳಲ್ಲಿ ಧರಣಿ, ಪ್ರತಿಭಟನೆ ನಡೆಸುವ ಸ್ಥಿತಿಗೆ ತಲುಪಿದ್ದಾರೆ.
ಅಧಿಕಾರಿಗಳ ಹೊಣೆಗೇಡಿತನ: ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಒಂದು ತಿಂಗಳಿನಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಆದರೆ, ಅಧಿಕಾರಿಗಳ ಹೊಣೆಗೇಡಿತನ ಮತ್ತು ಗುತ್ತಿಗೆದಾರನ ಪರ ಲಾಬಿಯಿಂದ ಸಕಾಲದಲ್ಲಿ ನಾಲೆಗಳಿಗೆ ನೀರು ಹರಿಯದೆ ಕೊನೆಯ ಭಾಗದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಯಾರಿಗೂ ಸಮಸ್ಯೆ ಬಗ್ಗೆ ಕಾಳಜಿಯಾಗಲಿ ಸ್ಪಂದಿಸುವ ಮನೋಭಾವನೆಯಾಗಲಿ ಇಲ್ಲ.
ಶಾಸಕರು ಆದೇಶ ನೀಡಿದ್ದರು: ಜುಲೈ ಮೊದಲನೆ ವಾರದಲ್ಲಿ  ಶಾಸಕ ಸಾ.ರಾ.ಮಹೇಶ್ ಅವರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರಸಕ್ತ ಮುಂಗಾರು ಹಂಗಾಮಿಗೆ ನೀರು ಹರಿಸಬೇಕಾಗಿದೆ. ಈಗ ಕೈಗೊಂಡಿರುವ ಆಧುನೀಕರಣ ಕಾಮಗಾರಿಯನ್ನು ಹೊರತುಪಡಿಸಿ ಹೊಸದಾಗಿ ಆರಂಭಿಸಬೇಡಿ. ನೀರು ಹರಿಸಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ: ನಾಲಾ ಕಾಮಗಾರಿ ಮಾಡುವಾಗ ಸಿಮೆಂಟ್ ಕಾಂಕ್ರೀಟ್ ಕಾಮಗಾರಿ ಮಾಡುವ ಭಾಗದಲ್ಲಿ ಮಾತ್ರ ಏರಿ ದುರಸ್ತಿ ಮತ್ತು ಇತರ ಕಾಮಗಾರಿ ಮಾಡದೆ ಎಲ್ಲಾ ಕಡೆಯು ಜೆಸಿಬಿಯಿಂದ ಕೆಲಸ ನಿರ್ವಹಿಸಿದ್ದು, ನೀರು ಹರಿಸಿದ ನಂತರ ಏರಿ ಕೆಲವೆಡೆ ಕುಸಿಯಲಾರಂಭಿಸಿದೆ.
ಇದರಿಂದ ಹೆಚ್ಚು ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ರೈತರ ಆಕ್ರೋಶ ಬುಗಿಲೇಳುವ ಮುನ್ನ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ತುರ್ತು ಕ್ರಮಕೈಗೊಂಡು ತಾಲೂಕು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ಸಮರ್ಪಕವಾಗಿ ನೀರು ಹರಿಸಿ ಸಂಕಷ್ಟದಲ್ಲಿರುವ ನಾಲೆಯ ಕೊನೆಯ ಭಾಗದ ರೈತನ ನೆರವಿಗೆ ಬರಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.