ಮೈಸೂರು

ರಂಗಾಯಣ ರಾಜಕಾರಣಿಗಳ ಆಸ್ತಿಯಲ್ಲ

Published On :

ಕ.ಪ್ರ.ವಾರ್ತೆ   ಮೈಸೂರು   ಆ. 5
ರಂಗಾಯಣ ರಾಜಕಾರಣಿಗಳ ಅಥವಾ ಪಕ್ಷದ ಆಸ್ತಿಯಲ್ಲ ಎಂದು ರಂಗಕರ್ಮಿ, ಗಾಯಕ ಎಚ್. ಜನಾರ್ದನ್ (ಜನ್ನಿ) ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಂಗ ಸಂಗೀತ ಪರಿಷತ್ತು ಜಗನ್ಮೋಹನ ಅರಮನೆಯಲ್ಲಿನ ಚಾಮರಾಜ ಒಡೆಯರ್ ಮಹಾಮಂಟಪದಲ್ಲಿ  ಆಯೋಜಿಸಿದ್ದ ಆರನೇ ರಾಜ್ಯ ಮಟ್ಟದ ರಂಗಸಂಗೀತ ಸಮ್ಮೇಳನದ ವಿಚಾರ ಸಂಕಿರಣಲ್ಲಿ ಸೋಮವಾರ ಕನ್ನಡ ಹವ್ಯಾಸಿ ರಂಗಭೂಮಿ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ರಂಗಾಯಣ ಬೀದಿಗೆ ಬಿದ್ದಿದೆ: ರಾಜ್ಯದ ಪ್ರಖ್ಯಾತ ರೆಪರ್ಟರಿ ಸಂಸ್ಥೆಯಾಗಿರುವ ರಂಗಾಯಣ ಇಂದು ಬೀದಿಗೆ ಬಿದ್ದಿದೆ. ಈ ಸಂಸ್ಥೆಯಲ್ಲಿದ್ದ ಕಲಾವಿದರನ್ನು ಶಿವಮೊಗ್ಗ ಹಾಗೂ ಧಾರಾವಾಡಗಳಿಗೆ ಕಳುಹಿಸಿದರೆ ಇಲ್ಲಿ ನಾಟಕ ಮಾಡುವವರು ಯಾರು. ಇದರಿಂದ ನಾಟಕಗಳು ಸತ್ತು ಹೋಗಲಿವೆ. ಯಾರೇ ಆಗಲಿ ಇಂತಹ ಸತ್ಯ ಅರಿತು ಮಾತನಾಡಬೇಕು. ರಂಗಾಯಣವನ್ನು ಪಕ್ಷದ ಸ್ವತ್ತಾಗಿ ರಾಜಕಾರಣಿಗಳು ಬೆಳೆಸಕೊಳ್ಳಬಾರದು. ಇದು ನಾಡಿನ ಆಸ್ತಿ ಎಂದರು.
ಸಚಿವರ ಸ್ವತ್ತಲ್ಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಹಣ ಹಂಚುವ ಸಂಸ್ಥೆಯಾಗಬಾರದು. ಈ ಹಣ ಅಧಿಕಾರಕ್ಕೆ ಬರುವ ಸಚಿವರ ಮನೆಯ ಸ್ವತ್ತಲ್ಲ. ಅದುವೇ ಜನರಿಗೆ ಸೇರಿದ್ದು. ನಾಡಿನ ವಿವಿಧ ಭಾಗಗಳಲ್ಲಿರುವ ವೃತ್ತಿ ಕಂಪನಿ ಹಾಗೂ 30-40 ವರ್ಷಗಳಿಂದ ಕೆಲಸ ಮಾಡುತ್ತಿರುವ ಹವ್ಯಾಸಿ ಸಂಸ್ಥೆಗಳ ಗುರುತಿಸಿ ಸೌಲಭ್ಯ ನೀಡುವಲ್ಲಿ ಮುಂದಾಗಬೇಕು ಎಂದು ಅವರು ತಿಳಿಸಿದರು.    
ಗಂಭೀರ ಚಿಂತನೆ ನಡೆಸಲಿ: ರಂಗಾಯಣಕ್ಕಾಗಲಿ ಅಥವಾ ರಂಗ ಸಮಾಜಕ್ಕಾಗಲಿ ಯಾರನ್ನಾದರೂ ನಿರ್ದೇಶಕರಾಗಿ, ಅಧ್ಯಕ್ಷರಾಗಿ ನೇಮಕ ಮಾಡಲಿ ಅದು ಬೇರೆ ವಿಚಾರ. ಆದರೆ ಬಹು ಸೂಕ್ಷ್ಮತೆಯಿಂದ ರಂಗಾಯಣ ಸಮಸ್ಯೆಯನ್ನು ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದ ಅವರು ವೃತ್ತಿ ಹಾಗೂ ಹವ್ಯಾಸಿ ತಂಡಗಳು ಪರಸ್ಪರ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಅವರು ಆಶಿಸಿದರು.
ಪೌರಾಣಿಕ ನಾಟಕಗಳ ಪಾತ್ರ ನಿರ್ವಹಣೆ ಎಂಬ ವಿಷಯ ಕುರಿತು ರಂಗತಜ್ಞ ಕೆ.ಜೆ. ನಾರಾಯಣ ಕಿಕ್ಕೇರಿ, ಪೌರಾಣಿಕ ನಾಟಕಗಳ ಅಸ್ತಿತ್ವ ಎಂಬ ವಿಷಯ ಕುರಿತು ಕರ್ನಾಟಕ ನಾಟಕ ಅಕಾಡೆಮಿ ನಿವೃತ್ತ ರಿಜಿಸ್ಟಾರ್ ಎ.ಎಸ್. ನಾಗರಾಜ್ ಮಾತನಾಡಿದರು.
ಸಮ್ಮೇಳನಾಧ್ಯಕ್ಷ ರಾಜಪ್ಪ ಕಿರಗಸೂರು ಇದ್ದರು. ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಎಚ್.ಎಸ್. ಗೋವಿಂದೇಗೌಡ, ಕಾರ್ಯಾಧ್ಯಕ್ಷ ಸಂಗಾಪುರ ನಾಗರಾಜ್ ಇದ್ದರು. ಪ್ರಧಾನ ಕಾರ್ಯದರ್ಶಿ ಡಬ್ಲ್ಯೂ.ಎಚ್. ಶಾಂತಕುಮಾರ್ ಸ್ವಾಗತಿಸಿದರು. ಕಲಾವಿದೆ ನಾಗರತ್ನ ನಿರೂಪಿಸಿದರು.  
ರಂಗ ದೃಶ್ಯಾವಳಿ, ನಾಟಕ ಪ್ರದರ್ಶನ: ರಂಗ ದೃಶ್ಯಾವಳಿ ನಂತರ ಮಂಡ್ಯದ ರಂಗರತ್ನ ಕಲಾವಿದರ ಸಂಘದವರು ರುಕ್ಮಿಣಿ ಸ್ವಯಂವರ ಪೌರಾಣಿಕ ನಾಟಕ ಅಭಿನಯಿಸಿದರು. ನೆಲಮಂಗಲ ತಾಲೂಕು ರಂಗಭೂಮಿ ಕಲಾವಿದರ ಸಂಘ ಹಾಗೂ ಕುಣಿಗಲ್ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದವರು ರಂಗ ದೃಶ್ಯಾವಳಿ ಅಭಿನಯಿಸಿದರು. ಇದಕ್ಕೂ ಮುನ್ನ ವಿವಿಧ ಜಿಲ್ಲಾ ಹಾಗೂ ತಾಲೂಕುಗಳ ಕಲಾವಿದರು ರಂಗಗೀತೆಗಳನ್ನು ಹಾಡಿದರು.
ಅಪಸ್ವರ: ಸಮ್ಮೇಳನದಲ್ಲಿ ನಿನ್ನೆಯಿಂದಲೂ ಮಹಿಳಾ ಕಲಾವಿದರಿಗೆ ರಂಗಗೀತೆ ಹಾಡಲು ವೇದಿಕೆಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿ ಮೈಸೂರಿನ ಮಹಿಳಾ ಕಲಾವಿದೆಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸಂಘಟಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಹಿನ್ನೆಲೆಯಲ್ಲಿ ಮಹಿಳಾ ಕಲಾವಿದರಿಗೆ ಹಾಡಲು ಅವಕಾಶ ಮಾಡಿಕೊಟ್ಟ ಕಾರಣ ಪರಿಸ್ಥಿತಿ ತಿಳಿಯಾಯಿತು.


ಪೌರಾಣಿಕ ನಾಟಕಗಳ ಮೇಷ್ಟ್ರುಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಹಾಡುಗಾರಿಕೆಗೆ ಮಹತ್ವ ನೀಡುವಂತೆ ಪಾತ್ರಗಳ ಅಭಿನಯಕ್ಕೂ ಒತ್ತು ನೀಡಿ. ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ರಾಜಕುಮಾರ್, ನಾಗೇಂದ್ರರಾವ್, ಏಣಗಿ ಬಾಳಪ್ಪ ಮುಂತಾದ ಕಲಾವಿದರು ಸ್ತ್ರೀ ಪಾತ್ರದ ಮೂಲಕ ರಂಗ ಪ್ರವೇಶಿಸಿದರು. ಅವರಿಗೆ ಸಮರ್ಥ ಗುರುಗಳಿಂದ ತರಬೇತಿ ದೊರಕಿದ್ದರಿಂದ ಪ್ರಖ್ಯಾತ ಕಲಾವಿದರಾದರ.
  ನಾರಾಯಣ್ ಕಿಕ್ಕೇರಿ, ರಂಗತಜ್ಞ 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.