ಮಲಿನವಾಗಿದೆ ನಾಲೆಯ ನೀರು
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 10
ಇಲ್ಲಿನ ಕೆಲವು ಬಡಾವಣೆಗಳ ಕಲುಷಿತ ನೀರು ಸಮೀಪ ಇರುವ ಚಾಮರಾಜ ಬಲದಂಡೆ ನಾಲೆಗೆ ಹರಿಯುತ್ತಿದ್ದು, ಇದರಿಂದ ನಾಲೆಯ ನೀರು ಮಲಿನವಾಗಿ ಈ ನೀರನ್ನು ಬಳಸುವ ಜನ ಮತ್ತು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಪಟ್ಟಣವು ವರ್ಷದಿಂದ ವರ್ಷಕ್ಕೆ ಶರವೇಗದಲ್ಲಿ ಬೆಳೆಯುತ್ತಿದ್ದು, ಕುವೆಂಪು ಬಡಾವಣೆ, ವಿನಾಯಕ ಬಡಾವಣೆ, ವಿಜಯನಗರ ಬಡಾವಣೆ ಮತ್ತು ಬನ್ನಿಮಂಟಪ ಬಡಾವಣೆಗಳಲ್ಲಿ ಒಳಚರಂಡಿ ಇಲ್ಲದ ಕಾರಣ, ನೀರು ನಾಲೆಗೆ ಹರಿಯುತ್ತದೆಯಲ್ಲದೆ ಬಡಾವಣೆಯ ರಸ್ತೆಗಳಲ್ಲಿಯೂ ಹರಿಯುತ್ತಿರುವುದರಿಂದ ವಾತಾವರಣವು ಕಲುಷಿತವಾಗುತ್ತಿದೆ.
ಬಸವೇಶ್ವರ ಬಡಾವಣೆ, ಆಂಜನೇಯ ಬ್ಲಾಕ್, ಸಾರಿಗೆ ನಗರದ ಕಲುಷಿತ ನೀರು ಕಂಠೇನಹಳ್ಳಿಯ ಸಾರ್ವಜನಿಕ ಸ್ಮಶಾನದ ಬಳಿ ನಾಲೆಗೆ ಬಂದು ಸೇರುತ್ತಿದ್ದು, ಈ ನೀರನ್ನು ಲಾಲನಹಳ್ಳಿ, ಲಾಲಂದೇವನಹಳ್ಳಿ, ಹೊಸಹಳ್ಳಿ, ಬಸವರಾಜಪುರ, ಮೂಲೆಪೆಟ್ಲು, ಕಗ್ಗೆರೆ, ನಾರಾಯಣಪುರ ಕ್ರಿಶ್ಚಿಯನ್ಕೊಪ್ಪಲು ಗ್ರಾಮಗಳ ಸಾರ್ವಜನಿಕರು ಬಳಸಬೇಕಿದ್ದು, ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸಮಸ್ಯೆಯ ಬಗ್ಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಗಮನ ಹರಿಸದೆ ಅಸಡ್ಡೆ ತೋರುತ್ತಿದ್ದು, ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ ಎಂಬುವುದು ನಾಗರಿಕರ ಆರೋಪವಾಗಿದ್ದು, ಸಾಂಕ್ರಾಮಿಕ ರೋಗಗಳು ಎದುರಾದ ನಂತರ ಪರಿತಪಿಸುವ ಬದಲು ಈಗಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಕ್ಷೇತ್ರದ ಶಾಸಕರು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕಲುಷಿತ ನೀರು ನಾಲೆಗೆ ಹರಿದು ಹೋಗದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

