ಮೈಸೂರು

ರೈತರಿಗೆ ಪರಿಹಾರ ನೀಡಲು ಆಗ್ರಹ

Published On :

ಕ.ಪ್ರ.ವಾರ್ತೆ    ಟಿ.ನರಸೀಪುರ    ಆ. 10
ಮಾಧವಮಂತ್ರಿ ಅಣೆಕಟ್ಟೆ ಒಡೆದಿರುವುದರಿಂದ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನಾಲೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎನ್. ಮಹೇಶ್ ಒತ್ತಾಯಿಸಿದರು.
ತಾಲೂಕಿನ ತಲಕಾಡು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಮಾಧವಮಂತ್ರಿ ಅಣೆಕಟ್ಟೆ ಒಡೆದಿರುವುದನ್ನು ಶನಿವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ಕಟ್ಟಲಾದ ಅಣೆಕಟ್ಟೆ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಡೆದ ಪರಿಣಾಮ, ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಕೃಷಿಯನ್ನು ಅವಲಂಭಿಸಿದ ರೈತ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಪ್ರತಿ ವರ್ಷವೂ ಅಣೆಕಟ್ಟೆಯ ಪರಿಸ್ಥಿತಿ ಪರಿಶೀಲಿಸದ ಪರಿಣಾಮ ಕಟ್ಟೆ ಒಡೆದು ಹೋಗಿದೆ. ಉತ್ತಮ ಮಳೆಯಾಗಿದ್ದರೂ ಲಭ್ಯವಿರುವ ನೀರನ್ನು ನೀರಾವರಿಗೆ ಬಳಸಿಕೊಳ್ಳದ ಹೀನಾಯ ಸ್ಥಿತಿ ಇಲ್ಲಿನ ರೈತರಿಗೆ ಬಂದೋದಗಿದೆ. ಆದ್ದರಿಂದ ಸರ್ಕಾರ ಒಂದು ಎಕರೆ ಭೂಮಿಯಲ್ಲಿ ರೈತರು ಯಾವ್ಯಾವ ಬೆಳೆಯನ್ನು ಬೆಳೆಯುತ್ತಿದ್ದರೋ ಅದರ ಮೌಲ್ಯವನ್ನಾಧರಿಸಿ, ಅಣೆಕಟ್ಟೆ ದುರಸ್ತಿ ಅಥವಾ ಮರು ನಿರ್ಮಾಣವಾಗುವ ಅವಧಿಯನ್ನು ಪರಿಗಣಿಸಿ, ಪರಿಹಾರ ಹಣ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ರೈತರು ಮತ್ತು ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ, ಅಗತ್ಯ ಹೋರಾಟಕ್ಕೆ ರೂಪುರೇಷೆಯನ್ನು ರೂಪಿಸಿದರೆ ಬಹುಜನ ಸಮಾಜ ಪಕ್ಷದ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಜಿಲ್ಲೆಯವರಾದ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದವರಾದ ಲೋಕೋಪಯೋಗಿ ಸಚಿವರು ಮಾಧವಮಂತ್ರಿ ಅಣೆಕಟ್ಟೆ ಒಡೆದು ಹೋಗಲು ಕಾರಣಕರ್ತರಾದವರು ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಮಹೇಶ್ ಆಗ್ರಹಿಸಿದರು. ಮರಳು ದಂಧೆಕೋರರು ನದಿ ಪಾತ್ರವನ್ನು ಬರಡು ಮಾಡಿದ್ದರಿಂದ ಹೆಚ್ಚುವರಿ ನೀರು ಹರಿದು ಹೋಗಲು ನಿರ್ಮಾಣ ಮಾಡಿದ್ದಂತಹ ಅಣೆಕಟ್ಟೆ ಹಾಳಾಗಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದಂತಹ ಪುರಾತನ ಪ್ರಸಿದ್ಧ ಮಾಧವಮಂತ್ರಿ ಅಣೆಕಟ್ಟೆ ಒಡೆಯಲು ಕಾರಣಕರ್ತರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಅಣೆಕಟ್ಟೆಗಳು ಒಡೆದು ಹಾಳಾಗದಂತೆ ನಾಲೆಗಳು ಮತ್ತು ಕೆರೆಗಳಿಗೆ ನೀರನ್ನು ತುಂಬಿಸುವ ನೆರೆಯ ತಮಿಳುನಾಡು ರಾಜ್ಯದ ಆಡಳಿತವನ್ನು ನೋಡಿ ನಮ್ಮ ರಾಜ್ಯ ಸರ್ಕಾರ ಕಲಿಯಬೇಕಿದೆ. ಮೆಟ್ಟೂರು ಅಣೆಕಟ್ಟೆ ಅಪಾಯ ಅರಿತು ಅಲ್ಲಿನ ಮುಖ್ಯಮಂತ್ರಿ ಇನ್ನೂರು ಕೆರೆಗಳಿಗೆ ನೀರನ್ನು ಭರ್ತಿ ಮಾಡಿಸಿದ್ದಾರೆ. ಅದನ್ನು ನಾವು ಅನುಸರಿಸುವುದು ಯಾವ್ಯಾಗ ಎಂದು ಪ್ರಶ್ನಿಸಿದರು.
ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ಹಿರಿಯ ಮುಖಂಡ ಬಿ.ಆರ್. ಪುಟ್ಟಸ್ವಾಮಿ, ಬಿಎಸ್ಪಿ ಕ್ಷೇತ್ರಾಧ್ಯಕ್ಷ ಮರಿಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಮಾಜಿ ಜಿಲ್ಲಾ ಉಪಾಧ್ಯಕ್ಷ ಜಿ. ದೇವರಾಜು, ವಕೀಲ ಮೂರ್ತಿ, ಮುಖಂಡರಾದ ಎನ್. ಲಿಂಗಪ್ಪಾಜಿ, ಪಿ. ನಾಗರಾಜು, ಕುಮಾರ್, ಶಿವಕುಮಾರ್, ನಟರಾಜು, ಮಹದೇವಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.