ಮಕ್ಕಳ ಬೆನ್ನ 'ಹೊರೆ' ಇಳಿಸಿ
ಕ.ಪ್ರ. ವಾರ್ತೆ ಮೈಸೂರು ಆ.11
ಪಠ್ಯಕ್ರಮ ರಚನೆಯ ಮೂಲಭೂತ ಸಂಗತಿಯಲ್ಲೇ ಸಮಸ್ಯೆ ಇದೆ ಎಂದು ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಅಭಿಪ್ರಾಯಪಟ್ಟರು.
ಪೀಪಲ್ಸ್ ಲೀಗಲ್ ಫೋರಂ ಭಾನುವಾರ ರಂಗಾಯಣದ ವನರಂಗದಲ್ಲಿ ನಮ್ಮ ಮಕ್ಕಳು ನಕ್ಕು ನಲಿದಾಡಿ ಕಲಿಯಲಿ ಬೆನ್ನ ಪುಸ್ತಕ ಭಾರ- ಬೇಡಪ್ಪ, ತೊಲಗಲಿ ಶಾಲಾ ಮಕ್ಕಳ ಪುಸ್ತಕದ ಹೊರೆಯ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
ಜ್ಞಾನದ ಬದಲು ಕೇವಲ ಮಾಹಿತಿ: ಶಿಕ್ಷಣ ಜ್ಞಾನ ನೀಡುತ್ತಿಲ್ಲ. ಬರೀ ಮಾಹಿತಿ ನೀಡುತ್ತಿದೆ. ಶಾಲಾ ಮುಖ್ಯ ಶಿಕ್ಷಕರು, ಪಠ್ಯ ಪುಸ್ತಕ ರಚನೆ ಮಾಡುವವರು ಮೂಲಭೂತ ಸಂಗತಿಗೆ ಕಟ್ಟು ಬಿದ್ದಿದ್ದಾರೆ. ಅದರ ಬದಲು ಪಠ್ಯಪುಸ್ತಕಗಳನ್ನು ಶಾಲೆಯಲ್ಲಿ ಇಡಲು ಅವಕಾಶ ಮಾಡಿಕೊಡಬೇಕು. ಆ ಪುಸ್ತಕಗಳು ಶಾಲೆಯ ಸ್ವತ್ತಾಗಬೇಕು. ಹೋಂ ವರ್ಕ್ ವೇಳಾಪಟ್ಟಿಯಲ್ಲಿ ನಮೂದಾಗಬೇಕು ಈ ನಿಟ್ಟಿನಲ್ಲಿ ಶಿಕ್ಷಣ ಪಡೆಯುವ ಭರದಲ್ಲಿ ಮಗುವಿಗೆ ಪುಸ್ತಕದ ಹೊರೆ ಜಾಸ್ತಿಯಾಗಬಾರದು ಎಂದರು.
ನಿಯಮ ಪಾಲಿಸುತ್ತಿಲ್ಲ: ನಾವು ಓದುವ ಸಂದರ್ಭದಲ್ಲಿ ಇಷ್ಟು ಹೊರೆ ಇರಲಿಲ್ಲ. 1993ರಲ್ಲಿ ಕೇಂದ್ರ ಸರ್ಕಾರ ರಚಿಸಿದ ಯಶಪಾಲ್ ಸಮಿತಿಯು ಅಧ್ಯಯನ ನಡೆಸಿ ಕೆಲವು ಸಲಹೆ ನೀಡಿತು. ಮಕ್ಕಳಿಗೆ ಪುಸ್ತಕದ ಹೊರೆ ತಪ್ಪಿಸಿ ಗುಣಾತ್ಮಕ ಶಿಕ್ಷಣ ನೀಡಲು ಚಿಂತಿಸಬೇಕು ಎಂದಿತು. ಆದರೆ, ಪೋಷಕರು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಹೆಚ್ಚಿನ ವಿಷಯ ತಿಳಿಸಬೇಕೆಂದು ಹೊರೆ ಹೆಚ್ಚಿಸಿದ್ದೇವೆ. ಇದು ಪುನರ್ ಪರಿಶೀಲನೆಯಾಗಬೇಕಿದೆ ಎಂದು ಅವರು ತಿಳಿಸಿದರು.
ಯಾವ ಪುರುಷಾರ್ಥಕ್ಕಾಗಿ: ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಮನಃಶಾಸ್ತ್ರಜ್ಞ ಡಾ.ಬಿ.ಎನ್. ರವೀಶ್ ಮಾತನಾಡಿ, ಯಾವ ಪುರುಷಾರ್ಥಕ್ಕಾಗಿ ನಾವೆಲ್ಲ ಇಷ್ಟೊಂದು ಓದುತ್ತಿದ್ದೇವೆ ಎಂಬುದು ತಿಳಿಯುತ್ತಿಲ್ಲ. ನಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗ ಮರೆತಿದ್ದೇವೆ. ಎಲ್ಲೆಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಮಕ್ಕಳಿಗೆ ಪುಸ್ತಕದ ಹೊರೆ ಹೆಚ್ಚಾಗಲು ಇಂತಹ ಸಂಗತಿಗಳೇ ಕಾರಣ ಎಂದರು.
ಪ್ರಕೃತಿಯೊಂದಿಗೆ ಬೆರೆಯಬೇಕು: ಪ್ರಕೃತಿಯೊಂದಿಗೆ ಬೆರತು ಕಲಿಯುವುದರಲ್ಲಿ ಅರ್ಥವಿದೆ. ಮಕ್ಕಳ ದೈಹಿಕ ಆರೋಗ್ಯಕ್ಕಿಂತ ಮನಸ್ಸಿನ ಆರೋಗ್ಯದ ಕಡೆ ಲಕ್ಷ್ಯ ಕೊಡಬೇಕಿದೆ. 8 ಅಥವಾ 9ನೇ ತರಗತಿ ಓದುವ ಮಗು ತನಗೆ ರುಚಿಯಾದ ತಿನಿಸು ಮಾಡಿಕೊಡಲಿಲ್ಲ ಎಂಬ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದರೆ ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು.
ಬುದ್ಧಿ ವಿಕಾಸಕ್ಕೆ ದಾರಿ ಮಾಡಿ: ಒಬ್ಬ ಮನುಷ್ಯನಿಗೆ ನಿರ್ದಿಷ್ಟ ಅವಧಿಗಿಂತ ಹೆಚ್ಚು ಕೆಲಸ ಕೊಟ್ಟರೆ ಆತ ದೈಹಿಕವಾಗಿ ಕ್ಷೀಣನಾಗುತ್ತಾನೆ. ಅದೇ ರೀತಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಭಾರ ಹೊರಿಸಿದರೆ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ವಿಕಾಸ ನಾಶವಾಗುತ್ತದೆ. ಮಕ್ಕಳು ಸೂಕ್ಷ್ಮಮತಿಗಳಾಗಿ ಭಾವೋದ್ವೇಗಕ್ಕೆ ಒಳಗಾಗುವ ಸಂಭವವಿರುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚು ಓದುವಂತೆ ಹೇಳಿ ಅವರನ್ನು ಹುಚ್ಚರನ್ನಾಗಿ ಮಾಡಬೇಡಿ. ಅವರಿಗೂ ಸ್ವಾತಂತ್ರ್ಯ ನೀಡಿ ಅವರ ಬುದ್ಧಿ ವಿಕಾಸಕ್ಕೆ ದಾರಿ ಮಾಡಿಕೊಡುವಂತೆ ಸಲಹೆ ನೀಡಿದರು.
ಹೊರೆ ರಹಿತ ವಿದ್ಯಾದಾನ ಮಾಹಿತಿ: ಇದೇ ವೇಳೆ ಹರಿಯ ವಿದ್ಯಾಲಯದ ಪ್ರಾಂಶುಪಾಲರು ತಮ್ಮ ಶಾಲೆಯಲ್ಲಿ ಜಾರಿಗೆ ತಂದಿರುವ ಹೊರೆ ರಹಿತ ವಿದ್ಯಾದಾನದ ಬಗ್ಗೆ ಮಾಹಿತಿ ನೀಡಿದರು. ಎಸ್ಜೆಸಿಇ-ಸ್ಟೆಪ್ನ ರವೀಂದ್ರ ಶೆಣೈ ಹೊಸದಾಗಿ ಸಿದ್ಧಪಡಿಸಿರುವ ಹೊರೆ ರಹಿತ ಶಿಕ್ಷಣ ಮಾದರಿಯನ್ನು ತಿಳಿಸಿಕೊಟ್ಟರು. ಹಲವು ಮಂದಿ ಪೋಷಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೆಲವು ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ತಾವು ಅನುಭವಿಸುತ್ತಿರುವ ಸಮಸ್ಯೆ ಪ್ರಸ್ತಾಪಿಸಿದರು.
ತೂಕ ಮಿತಿ ಮಸೂದೆ ಜಾರಿಯಾಗಲಿ: ಅಂತಿಮವಾಗಿ 2006 ರಲ್ಲಿ ಸಂಸತ್ತಿನ ಮಂಡಿಸಲಾದ ಶಾಲಾ ಬ್ಯಾಗ್ (ತೂಕ ಮಿತಿ) ಮಸೂದೆಯು ಯಾವುದೇ ಚರ್ಚೆ ಆಗದೆ ಹಾಗೆಯೇ ಉಳಿದಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಲು ಮೈಸೂರಿನಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಈ ಸಂಬಂಧ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಸಂಸದ ಎಚ್. ವಿಶ್ವನಾಥ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಪೀಪಲ್ಸ್ ಲೀಗಲ್ ಫೋರಂ ನಿರ್ದೇಶಕ ಪಿ.ಪಿ. ಬಾಬುರಾಜ್, ರಂಗಕರ್ಮಿ ಎಚ್.ಎಸ್. ಉಮೇಶ್, ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಗಾನಂದ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

