ಮಕ್ಕಳ ಅಸಾಧಾರಣ ಪ್ರತಿಭೆ ಅನಾವರಣ
ಕ.ಪ್ರ.ವಾರ್ತೆ , ಮೈಸೂರು , ಆ. 19
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ಸೋಮವಾರ ನಗರದಲ್ಲಿ ಆರಂಭವಾಯಿತು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಗನ್ಮೋಹನ ಅರಮನೆ ಸಮೀಪವಿರುವ ಅವಿಲಾ ಕಾನ್ವೆಂಟ್‌ನಲ್ಲಿ ಹಾಗೂ ವಿ.ವಿ. ಮೊಹಲ್ಲಾದ ಮಾತೃ ಮಂಡಳಿಯಲ್ಲಿ ಎರಡು ದಿನಗಳ ಈ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ ಹಾಗೂ ಅನುದಾನ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಈಗಾಗಲೇ ತಾಲೂಕು ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ 2012- 13ನೇ ಸಾಲಿನ 5 ಸಾವಿರ ಇನ್ಸ್‌ಪೇರ್ ಅವಾರ್ಡ್ ಪಡೆದಿರುವ ಮಕ್ಕಳು ತಾವು ತಯಾರಿಸಿದ ಮಾದರಿ ಹಾಗೂ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರರ್ದಶಿಸಿದ್ದರು. ಜಾಗತಿಕ ತಾಪಮಾನ, ಸೌರಶಕ್ತಿ ಬಳಕೆ, ಜೈವಿಕ ಇಂಧನ ತಯಾರಿಕೆ, ಜಲಚಕ್ರ, ಗಾಳಿಯಿಂದ ವಿದ್ಯುತ್ ತಯಾರಿಕೆ, ಸೌರವ್ಯೂಹ, ಮಳೆ ಅಳೆಯುವ ಮಾಪನ, ಮಳೆ ಕೂಯ್ಲು, ಎಫ್‌ಎಂ ರೇಡಿಯೋ ಸಾಧನ, ಯಂತ್ರ ಮಾನವನ ಕಾರ್ಯವೈಖರಿ, ಉಪಗ್ರಹ, ಸೂರ್ಯಗ್ರಹಣ, ಮಾನವನ ಅಂಗಾಂಗ ರಚನೆ, ಹೃದಯದ ಚಲನೆ ಹಾಗೂ ಪರಿಸರ ಸಂರಕ್ಷಣೆಯ ವಿಧಾನ ಮತ್ತಿತರ ಮಾದರಿ ಹಾಗೂ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.
800ಕ್ಕೂ ಹೆಚ್ಚು ವಿದ್ಯಾರ್ಥಿಗಳು: ಅವಿಲಾ ಕಾನ್ವೆಂಟ್‌ನಲ್ಲಿ ಟಿ.ನರಸೀಪುರ, ನಂಜನಗೂಡು ಹಾಗೂ ಮೈಸೂರು ನಗರ ದಕ್ಷಿಣ ವಿಭಾಗದ ವಿವಿಧ ಶಾಲೆಗಳು ಹಾಗೂ ಮಾತೃ ಮಂಡಳಿಯಲ್ಲಿ ಪಿರಿಯಾಪಟ್ಟಣ, ಹುಣಸೂರು ಹಾಗೂ ಮೈಸೂರು ನಗರ ಉತ್ತರ ವಿಭಾಗದ ವಿವಿಧ ಶಾಲೆಗಳ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ತಾಲೂಕುಗಳಿಂದ 1037 ವಿದ್ಯಾರ್ಥಿಗಳು ಇನ್ಸ್‌ಪೇರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಲ್ಲಿ ಜಿಲ್ಲಾಮಟ್ಟದ ಈ ಸ್ಪರ್ಧೆಯಲ್ಲಿ 100 ವಿದ್ಯಾರ್ಥಿಗಳಿಗೆ 8 ವಿದ್ಯಾರ್ಥಿಗಳಂತೆ ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಶಿವಮಾದಪ್ಪ, ಮೈಸೂರು ನಗರ ದಕ್ಷಿಣ ವಲಯ ಬಿಇಒ ಆರ್. ರಘುನಂದನ್, ಟಿ.ನರಸೀಪುರ ಬಿಇಒ ಮರಿಸ್ವಾಮಿ ಹಾಗೂ ನಂಜನಗೂಡು ಬಿಇಒ ಪುರುಷೋತ್ತಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

