ನಗರದ ವಿವಿಧೆಡೆ ಉಪಾಕರ್ಮ
ಮೈಸೂರು: ಬ್ರಾಹ್ಮಣ ಸಮುದಾಯದವರು ಮಂಗಳವಾರ ಶಾಸ್ತ್ರೋಕ್ತವಾಗಿ ಋಗ್ ಉಪಾಕರ್ಮ ಹಾಗೂ ಯಜುರುಪಾಕರ್ಮ ಆಚರಿಸಿದರು. ನಗರದ ವಿವಿಧೆಡೆ ಏರ್ಪಡಿಸಿದ್ದ ಉಪಾಕರ್ಮದಲ್ಲಿ ಬ್ರಾಹ್ಮಣ ಸಮುದಾಯದವರು ವೇದ ಪಠಣ, ಗಾಯತ್ರಿ ಮಂತ್ರವನ್ನು 1008 ಸಾರಿ ಜಪಿಸಿ ಅರ್ಚಕರ ಮುಖ್ಯಸ್ಥ ಮಾರ್ಗದರ್ಶನದಲ್ಲಿ ಉಪಾಕರ್ಮ ಆಚರಿಸಿದರು. ಉಳಿದಂತೆ ಕೆಲವು ಮಂದಿ ಮನೆಯಲ್ಲಿಯೇ ಉಪಾಕರ್ಮ ಆಚರಿಸಿದರು. ಬ್ರಾಹ್ಮಣ ಧರ್ಮ ಸಹಾಯ ಸಭಾದಲ್ಲಿ ಕೃಷ್ಣಸ್ವಾಮಿ ಶಾಸ್ತ್ರಿ, ಜೆ.ಪಿ. ನಗರ ಬ್ರಾಹ್ಮಣ ಸಂಘದ, ಕೆ.ಆರ್. ವನಂನ ಹೆಬ್ಬಾರ್ ವೈಷ್ಣವ ಉಪಸಭಾ, ಹೂಟಗಳ್ಳಿಯ ಗಾಯತ್ರಿ ವಿಪ್ರ ಸಂಘ, ತ್ಯಾಗರಾಜ ರಸ್ತೆಯ ಅರಸು ಮಂಡಲಿ ಸಂಘ, ದೇವರಾಜ ಮೊಹಲ್ಲಾದ ಆರ್ಯ ಸಮಾಜ, ಅರಮನೆ ಆವರಣದ ತ್ರಿನೇಶ್ವಸ್ವಾಮಿ ದೇವಸ್ಥಾನ, ಸರಸ್ವತಿಪುರಂನ ಮೈಸೂರು ಜಿಲ್ಲಾ ಶಾತ್ತಾದ ವೈಷ್ಣವ ಸಂಘ, ಶ್ರೀರಾಪಂರು 2ನೇ ಹಂತದ ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾದಿಂದ ಉಪಾಕರ್ಮ ಏರ್ಪಡಿಸಲಾಗಿತ್ತು.
ಕೆಜೆಪಿ ಅಭ್ಯರ್ಥಿಅವ್ಯವಹಾರ: ಆರೋಪ
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಉಪ ಚುನಾವಣೆಯ ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಸಮಾಜ ರಕ್ಷಣಾ ವೇದಿಕೆ ಅಧ್ಯಕ್ಷ ಅಯೂಬ್ ಖಾನ್ ಆರೋಪಿಸಿದರು. ಕೆಜೆಪಿ ಅಭ್ಯರ್ಥಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಬೆಂಬಲ ನೀಡಿದ್ದಾರೆ. ಇದರ ಹಿಂದೆ ಹಣದ ವ್ಯವಹಾರ ನಡೆದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಪಂಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಅಧಿಕಾರ ಕಳೆದುಕೊಂಡ ಮೇಲೆ ಹೆಚ್ಚಿನ ಅನುದಾನ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಪ್ರಮುಖ ಪಕ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಸದಸ್ಯರು ನನಗೆ ಮತ ನೀಡಲಿದ್ದಾರೆ. ಈ ಚುನಾವಣೆಯಲ್ಲಿ ನನ್ನ ಗೆಲವು ಖಚಿತ ಎಂದರು. ಮುಖಂಡರಾದ ಮಂಜುನಾಥಪ್ರಸಾದ್, ಪಿ. ಶೇಖರ್ ಇದ್ದರು.
ಲಾರಿ ಮುಷ್ಕರ ಮುಂದುವರಿಕೆ
ಮೈಸೂರು: ಮರಳು ಸಾಗಾಣಿಕೆಗೆ ರಹದಾರಿ ನೀಡುವಂತೆ ಒತ್ತಾಯಿಸಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಸೋಮವಾರ ಮಧ್ಯರಾತ್ರಿಯಿಂದ ಹಮ್ಮಿಕೊಂಡಿರುವ ಮುಷ್ಕರವು ಮಂಗಳವಾರ ಸಹ ಮುಂದುವರಿಯಿತು. ಜಿಲ್ಲಾಡಳಿತವು ಲಾರಿ ಮಾಲೀಕರಿಗೆ ತಿಂಗಳಿಗೆ 2- 3 ರಹದಾರಿ ಮಾತ್ರ ನೀಡುತ್ತಿತ್ತು. ಕಳೆದ 1 ತಿಂಗಳಿಂದ ಮರಳು ಸಾಗಾಣಿಕೆ ರಹದಾರಿ ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಲಾರಿ ಮಾಲೀಕರು ಮತ್ತು ಮರಳು ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಮರಳು ಸಾಗಿಸಲು ರಹದಾರಿ ನೀಡಬೇಕು. ಲಾರಿ ಬಾಡಿಗೆಯನ್ನು 5,000 ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮುಷ್ಕರದಲ್ಲಿ ಮೈಸೂರು ಲಾರಿ ಮಾಲೀಕರ ಸಂಘ, ಟಿ. ನರಸೀಪುರ ತಾಲೂಕು ಲಾರಿ ಮಾಲೀಕರ ಸಂಘ, ಕಟ್ಟಡ ಸಾಮಗ್ರಿಗಳ ಕಾರ್ಮಿಕರ ಸಂಘ ಮತ್ತು ಕೆ.ಆರ್. ಸಾಗರ ಲಾರಿ ಮಾಲೀಕರ ಸಂಘದವರು ಪಾಲ್ಗೊಂಡಿದ್ದಾರೆ. ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ, ಉಪಾಧ್ಯಕ್ಷ ಅಬ್ದುಲ್ ಜಾವೀದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಷರೀಫ್, ಖಜಾಂಚಿ ಎಚ್.ಎಸ್. ಕೃಷ್ಣಮೂರ್ತಿ, ಮುಖಂಡರಾದ ಎಂ. ಸ್ವಾಮಿ, ಸೋಸಲೆ ಪುಟ್ಟಸ್ವಾಮಿ ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದೆ.
ಯುವತಿಯರು ಪರಾರಿ
ಮೈಸೂರು: ಗಾವ್ಕಂರ್ ಸ್ಮಾರಕ ಸ್ತ್ರೀ ಸೇವಾ ನಿಕೇತನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಲ್ಲಿದ್ದ ರಾಜೇಗೌಡ ಎಂಬವರ ಪುತ್ರಿ ಎಸ್. ಶಶಿಕಲಾ (18) ಮತ್ತು ಶರತ್ಕುಮಾರ್ ಎಂಬವರ ಪುತ್ರಿ ಎಸ್. ಸುಚಿತ್ರಾ (18) ಎಂಬವರು ಶುಕ್ರವಾರ ಪರಾರಿಯಾಗಿದ್ದಾರೆ. ಈ ಇಬ್ಬರು ಸಂಸ್ಥೆಯ ಗಾರ್ಡ್ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಶಶಿಕಲಾ ಚಹರೆ- 5.2 ಅಡಿ ಎತ್ತರ, ತಿಳಿ ಮೈಬಣ್ಣ ಕನ್ನಡ ಮಾತನಾಡುತ್ತಾರೆ. ಸುಚಿತ್ರಾ ಚಹರೆ- 5 ಅಡಿ ಎತ್ತರ, ಕಪ್ಪು ಮೈಬಣ್ಣ, ಕನ್ನಡ, ಒರಿಯಾ, ಉರ್ದು ಮತ್ತು ಮಲೆಯಾಳಂ ಮಾತನಾಡುತ್ತಾರೆ. ಈ ಇಬ್ಬರು ಯುವತಿಯರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418117, 317, 517 ಸಂಪರ್ಕಿಸಲು ವಿಜಯನಗರ ಠಾಣೆ ಎಸ್ಐ ಕುಮಾರ್ ಕೋರಿದ್ದಾರೆ.
ವ್ಯಕ್ತಿ ನಾಪತ್ತೆ
ಮೈಸೂರು: ಗೋಕುಲಂ 2ನೇ ಹಂತ ಎಂಸಿಸಿ ಕಾಲೋನಿ ನಿವಾಸಿ ಅಮಾಸೆ ಎಂಬವರ ಪುತ್ರ ಪಳನಿ (55) ನಾಪತ್ತೆಯಾಗಿದ್ದಾರೆ. ಆ. 6 ರಂದು ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ತಮ್ಮ ತಂದೆಗೆ ಸ್ವಲ್ಪ ಬುದ್ಧಿಮಾಂದ್ಯತೆ ಇದೆ. ಅವರನ್ನು ಪತ್ತೆ ಮಾಡಿಕೊಡುವಂತೆ ಸೋಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು, ಕುರುಚಲು ಗಡ್ಡ ಬಿಟ್ಟಿದ್ದಾರೆ. ಎಡಗೈನಲ್ಲಿ ಪಳನಿ, ಎಡಭಾಗದ ಎದೆಯ ಮೇಲೆ ಓಂ ಎಂಬ ಹಚ್ಚೆ ಇದೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ.
ಮೀಸಲಾತಿ ಮಾಹಿತಿ ಅಲಭ್ಯ: ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು: ಮೈಸೂರು ವಿವಿ ಸ್ನಾತಕೋತ್ತರ ಪ್ರವೇಶಕ್ಕೆ ವಿಶೇಷ ಕೋಟಾ ಮೀಸಲಾತಿ ಕುರಿತು ಮಾಹಿತಿ ಪ್ರಕಟಿಸದಿರುವದನ್ನು ಖಂಡಿಸಿ ವಿದ್ಯಾರ್ಥಿಗಳು ಮಾನಸಗಂಗೋತ್ರಿ ಸೆನೆಟ್ ಭವನದ ಎದುರು ಮಂಗಳವಾರ ಪ್ರತಿಭಟಿಸಿದರು. ಸ್ನಾತಕೋತ್ತರ ಕೋರ್ಸ್ಗಳಿಗೆ ಮೈಸೂರು ವಿವಿ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಅಂಗವಿಕಲರು, ಎನ್ಸಿಸಿ, ಎನ್ಎಸ್ಎಸ್, ಕ್ರೀಡೆ, ಸಾಂಸ್ಕೃತಿಕ, ಮಾಜಿ ಸೈನಿಕರು ಮೊದಲಾದ ಕೋಟಾದಡಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು. ಆದರೆ, ಸ್ನಾತಕೋತ್ತರ ಪ್ರವೇಶಕ್ಕೆ ವಿಶೇಷ ಕೋಟಾದ ಮಾನದಂಡವನ್ನು ವಿವಿ ಪ್ರಕಟಿಸಿಲ್ಲ. ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಬಹಿರಂಗಪಡಿಸಿಲ್ಲ ಎಂದು ದೂರಿದರು. ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದ ಅಧಿಕಾರಿಗಳು ಈ ಸಂಬಂಧ ವಿವಿ ಕುಲಪತಿ ಅಥವಾ ಕುಲಸಚಿವರಿಗೆ ಮನವಿ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸೆನೆಟ್ ಭವನದಿಂದ ಕ್ರಾಫರ್ಡ್ ಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು, ಕುಲಸಚಿವ ಪ್ರೊ. ಸಿ. ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ರಾಬಿನ್, ಶಶಿಕುಮಾರ್, ರೇವಣ್ಣ ನೇತೃತ್ವ ವಹಿಸಿದ್ದರು.
ಬಡತನ ನಿರ್ಮೂಲನೆಗೆ ಮನವಿ
ಪಿರಿಯಾಪಟ್ಟಣ: ಸಮಾಜದಲ್ಲಿನ ಬಡತನ ಹಾಗೂ ದಾರಿದ್ರ್ಯ ಬಡಿದೊಡಿಸಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ತಹಸೀಲ್ದಾರ್ ಎಂ.ಕೆ. ಸವಿತಾ ಹೇಳಿದರು. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗುವಂತೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಮಾತನಾಡಿದರು. ಸಿಡಿಪಿಒ ದೇವ್ಕುಮಾರ್, ಪ್ರಾಂಶುಪಾಲ ರಮೇಶ್, ಉಪ ಪ್ರಾಂಶುಪಾಲ ನಾಗಶೆಟ್ಟಿ, ಎಸ್ಐ ರಫೀಕ್, ಪಪಂ ಮುಖ್ಯಾಧಿಕಾರಿ ಪಂಕಜರೆಡ್ಡಿ, ಉಪನೋಂದಣಾಧಿಕಾರಿ ರವಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್. ಹುಂಬಿ ಇದ್ದರು.
ಧ್ರವನಾರಾಯಣ್ಗೆ ಸನ್ಮಾನ
ನಂಜನಗೂಡು: ಲೋಕಸಭಾ ಸದಸ್ಯರ ಸಮಿತಿಯ ಮುಖ್ಯ ಸಚೇತಕರಾಗಿ ನೇಮಕಗೊಂಡ ಹಿನ್ನೆಲೆ ಸಂಸದ ಆರ್. ಧ್ರುವನಾರಾಯಣ್ ಅವರನ್ನು ತಾಲೂಕಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೆಗ್ಗವಾಡಿ ಗ್ರಾಮದಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಆರ್. ಧ್ರುವನಾರಾಯಣ್, ಪ್ರಪಂಚದಲ್ಲೆ ಗೌರವ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಪವಿತ್ರ ಕ್ಷೇತ್ರವಾದ ಲೋಕಸಭೆಯಲ್ಲಿ ಕಿರಿಯನಾದ ನನಗೆ, ಬಹು ದೊಡ್ಡ ಜವಾಬ್ದಾರಿ ಹುದ್ದೆ ನೀಡಿರುವುದು ಸಂತಸ ತಂದಿದೆ. ನನ್ನ ವ್ಯಾಪ್ತಿಯಲ್ಲಿರುವ ಚೀಫ್ ವಿಪ್ ಅಧಿಕಾರದಲ್ಲಿ ಸಂಸದರಿಗೆ ವಿಪ್ ಜಾರಿಗೊಳಿಸುವುದು, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರನ್ನು ಸ್ವಾಗತಿಸುವಂತಹ ಪುಣ್ಯದ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬ್ಲಾಕ್ ಅಧ್ಯಕ್ಷರಾದ ಕೆ.ಎಸ್. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಪುರಸಭಾ ಸದಸ್ಯ ದೊರೆಸ್ವಾಮಿ, ಈಡಿಗ ಸಮಾಜದ ಯುವ ಮುಖಂಡ ಗಿರೀಶ್, ನಾಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

