ಸುಗಂಧರಾಜದಿಂದ ಆದಾಯದ ಪರಿಮಳ!
ಕ.ಪ್ರ.ವಾರ್ತೆ , ಮೈಸೂರು , ಆ. 21
ಕಳೆದ 35 ವರ್ಷಗಳಿಂದಲೂ ಸುಗಂಧರಾಜ ಬೆಳೆಯುತ್ತಿರುವ ರೈತನೊಬ್ಬ ಸರ್ಕಾರಿ ನೌಕರರಂತೆ ಮಾಸಿಕ ನಿಗದಿತ ಆದಾಯ ಪಡೆಯುತ್ತಿದ್ದಾರೆ.ನಂಜನಗೂಡು ತಾಲೂಕು ಬಿಳಿಗೆರೆ ಹೋಬಳಿ ಜೀಮಾರಳ್ಳಿಯ ನಾಗರಾಜಪ್ಪ ಅವರಿಗೆ 28 ಎಕರೆ ಜಮೀನಿದೆ. ಅವಿಭಕ್ತ ಕುಟುಂಬ. ಅಣ್ಣ- ತಮ್ಮಂದಿರು ಸೇರಿ ಮನೆಯಲ್ಲಿ 22 ಮಂದಿ ಇದ್ದಾರೆ. ಸುಗಂಧರಾಜ ಸೇರಿದಂತೆ ಕೃಷಿಯಿಂದ ಬರುವ ಆದಾಯದಿಂದಲೇ ಇವರ ಮನೆಯ ಮಕ್ಕಳು ಓದಿ, ಒಬ್ಬರು ಎಂಜಿನಿಯರ್, ಮತ್ತೊಬ್ಬರು ಔಷಧ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ, ಮತ್ತೊಬ್ಬರು ಖಾಸಗಿ ಕಾಲೇಜೊಂದರಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ.
ಉತ್ತೇಜನ: 1978 ರಿಂದಲೂ ಅವರು ಒಂದು ಎಕರೆಯಲ್ಲಿ ಸುಗಂಧರಾಜ ಹೂವು ಬೆಳೆಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯರೂ ಆದ ದೇವರಾಜ ಮಾರುಕಟ್ಟೆಯ ಪ್ರಮುಖ ಹೂವಿನ ವ್ಯಾಪಾರಿ ಎಂ. ನಾರಾಯಣಪ್ಪ. ಅವರು ನೀಡಿದ ಉತ್ತೇಜನದಿಂದಲೇ ಸುಗಂಧರಾಜ ಬೆಳೆಯಲು ಶುರು ಮಾಡಿದೆ. ಮೂರೂವರೆ ದಶಕಗಳಿಂದಲೂ ಅವರೇ ಖರೀದಿಸಿ, ಪ್ರತಿ ವಾರ ಹಣ ಬಟವಾಡೆ ಮಾಡುತ್ತಿದ್ದಾರೆ. ಇದರಿಂದ ಮಾಸಿಕ ಕನಿಷ್ಠ 2 ರಿಂದ 3 ಸಾವಿರ ನಿಗದಿತ ಆದಾಯವಿದೆ. ಮುಂಗಾರು ಆರಂಭವಾಗಿ ಡಿಸೆಂಬರ್ವರೆಗೆ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಏಕೆಂದರೆ ಆಗ ಹೂವು ಹೆಚ್ಚಾಗಿ ಬರುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇರುತ್ತದೆ. ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಸಂಬಳ ಬಂದಂತೆ ನನಗೂ ಬರುತ್ತಿದೆ. ಇದರಿಂದ ಮನೆಯ ನಿರ್ವಹಣಾ ವೆಚ್ಚ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ ಎಂದು ನಾಗರಾಜಪ್ಪ ಹರ್ಷದಿಂದ ಹೇಳುತ್ತಾರೆ.
ನಿರ್ವಹಣೆ: ಸುಗಂಧರಾಜ ಗಿಡಗಳನ್ನು ಒಂದೂವರೆಯಿಂದ ಎರಡು ವರ್ಷಗಳಿಗೊಮ್ಮೆ ಬದಲಿಸಬೇಕು. ಗಿಡಗಳನ್ನು ನೆಟ್ಟ ನಂತರ 17-17, ಡಿಎಪಿ, ಯೂರಿಯಾ, ಕೊಟ್ಟಿಗೆ ಗೊಬ್ಬರ ನೀಡಬೇಕು. ಇವರ ಮನೆಯಲ್ಲಿ 20 ಜಾನುವಾರುಗಳಿದ್ದು, ಕೊಟ್ಟಿಗೆ ಗೊಬ್ಬರಕ್ಕೆ ಬರವಿಲ್ಲ. ಮೂರು ತಿಂಗಳಿಗೆ ಹೂವು ಬಿಡಲು ಆರಂಭವಾಗುತ್ತದೆ. ಮುಂಗಾರಿನಲ್ಲಿ ಹೆಚ್ಚು ಹೂವುಗಳು ಬರುತ್ತವೆ. ಡಿಸೆಂಬರ್ವರೆಗೆ ಹೆಚ್ಚು ಹೂವು ಬಿಡುತ್ತವೆ. ಮನೆಯವರೇ ಪ್ರತಿದಿನ ಹೂವು ಬಿಡಿಸಿ, ಮೈಸೂರಿನ ದೇವರಾಜ ಮಾರುಕಟ್ಟೆಗೆ ವಾಹನದಲ್ಲಿ ಸಾಗಿಸುತ್ತಾರೆ.
1 ಲಕ್ಷ ಆದಾಯ: ಒಟ್ಟಾರೆ ಒಂದು ವರ್ಷದಲ್ಲಿ ಸುಗಂಧರಾಜ ಹೂವಿನಿಂದಲೇ 1 ಲಕ್ಷ ಆದಾಯವಿದೆ. ಖರ್ಚು 30 ಸಾವಿರ ಆಗುತ್ತದೆ. ಪ್ರಸ್ತುತ ಒಂದು ಕೆಜಿ ಸುಗಂಧರಾಜ ಹೂವಿಗೆ 87 ಸಿಗುತ್ತಿದೆ.ನಾಗರಾಜಪ್ಪ ಮಾತ್ರವಲ್ಲದೆ ಜೀಮಾರಳ್ಳಿ, ಕಲ್ಕುಂದ, ನವಿಲೂರು, ಕಲ್ಮಳ್ಳಿ, ಕಾಹಳ್ಳಿ, ಕುರುಬೂರು, ಕೊತ್ತೇಗಾಲ, ಮೇಗಡಹಳ್ಳಿ, ಮೇಗಲಕೊಪ್ಪಲು ಮೊದಲಾದ ಗ್ರಾಮಗಳ ನೂರಾರು ರೈತರು ಸುಗಂಧರಾಜ ಬೆಳೆದು, ಜೀವನ ಸಾಗಿಸುತ್ತಿದ್ದಾರೆ.
ಕಬ್ಬು ಬೆಳೆ: ನಾಗರಾಜಪ್ಪ ಅವರು 6 ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಎಕರೆಗೆ 50 ಟನ್ ಇಳುವರಿ ಬರುತ್ತಿದೆ. ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದು, ಪ್ರತಿ ಟನ್ಗೆ 2,500 ಸಿಗುತ್ತಿದೆ. ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು 20 ಸಾವಿರ ವೆಚ್ಚವಾಗುತ್ತಿದ್ದು, 1.20 ಲಕ್ಷ ಆದಾಯ ಬರುತ್ತಿದೆ.
ಮತ್ತಷ್ಟು ಆದಾಯ: ಒಂಭತ್ತೂವರೆ ಎಕರೆಯಲ್ಲಿ ಬತ್ತ ಬೆಳೆಯುತ್ತಿದ್ದಾರೆ. ಬತ್ತ ಬೆಳೆಯಲು ಎಕರೆಗೆ 15 ಸಾವಿರ ವೆಚ್ಚವಾಗುತ್ತಿದ್ದು, 22 ಕ್ವಿಂಟಲ್ ಇಳುವರಿ ಬರುತ್ತಿದೆ. ಬತ್ತದಲ್ಲಿ ಎಕರೆಗೆ 18 ಸಾವಿರ ಆದಾಯ ಸಿಗುತ್ತದೆ. 3 ಎಕರೆಯಲ್ಲಿ 2,600 ಏಲಕ್ಕಿ ಬಾಳೆ ಗಿಡಗಳಿವೆ. ಇದೇ ಪ್ರಥಮ. 1 ಎಕರೆಯಲ್ಲಿ ಅರಿಶಿನ ಬೆಳೆಯೂ ಪ್ರಥಮ. ಬಾಳೆ, ಅರಿಶಿನ ಫಲ ಬಂದ ನಂತರ ಇವರ ಆದಾಯ ಮತ್ತಷ್ಟು ಹೆಚ್ಚಾಗಲಿದೆ.
1 ಎಕರೆಯಲ್ಲಿ ತೋಟವಿದ್ದು, ಅಲ್ಲಿನ 40 ತೆಂಗಿನ ಮರಗಳಿವೆ. ಇದಲ್ಲದೆ ಜಮೀನಿನಲ್ಲಿ 1000 ತೇಗ, 250 ಸಿಲ್ವರ್ ಹಾಗೂ 400 ಹೆಬ್ಬೇವು ಮರ ಬೆಳೆಸಿದ್ದಾರೆ.
ವ್ಯವಸಾಯದಲ್ಲಿ ನಷ್ಟ ಆಯ್ತದೆ ಅನ್ನೋದು ಸಾಲ ಮಾಡೋರು ಹೇಳುವ ಕಥೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಸರಿಯಾಗಿ ವ್ಯವಸಾಯ ಮಾಡಬೇಕು. ನಾನಂತೂ ಇವತ್ತಿನವರೆಗೆ ಸರ್ಕಾರಿ ಇಲಾಖೆಗಳಿಂದ ಸಹಾಯಧನ, ಸಾಲ ಪಡೆಯಲು ಹೋಗಿಲ್ಲ.
ನಾಗರಾಜಪ್ಪ, ಜೀಮಾರಳ್ಳಿ
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

