'ಮಹಿಳೆಯರು ಅತ್ಯಂತ ಶೋಷಿತ ವರ್ಗ'
ಕ.ಪ್ರ.ವಾರ್ತೆ , ಮೈಸೂರು , ಆ. 30
ಜಗತ್ತಿನಲ್ಲಿಯೇ ಅತ್ಯಂತ ಶೋಷಿತ ವರ್ಗವೆಂದರೆ ಮಹಿಳೆಯರು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಟಿ.ರಮೇಶ್ ಮತ್ತು ಕವಿತಾ ಸಂಪಾದಿಸಿರುವ ಜಾಗತೀಕರಣ ಮತ್ತು ಮಹಿಳೆ, ಡಾ.ಟಿ. ರಮೇಶ್ ಅವರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಎಚ್.ಪಿ. ಭವ್ಯಾ ಅವರ ಮಹಿಳಾ ಸ್ವಸಹಾಯ ಸಂಘಗಳು ಮತ್ತು ಆರ್ಥಿಕ ಸಬಲೀಕರಣ ಎಂಬ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾರತದಲ್ಲಿ ಆಂಧ್ರಪ್ರದೇಶದ ಮಹಿಳೆಯರು ಅತ್ಯಂತ ಶೋಷಣೆಗೆ ಒಳಗಾದವರು. ಅಲ್ಲಿನ ಪಾಳೇಗಾರಿಕೆ, ಜಮೀನ್ದಾರಿಕೆ ಹಾಗೂ ಗಂಡನ ಕಿರುಕುಳದಿಂದ ಬೇಸತ್ತು ನಲುಗಿ ಹೋಗಿದ್ದರು. ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯಿಂದ 2 ಸಂಗ್ರಹಿಸಿ ಆರ್ಥಿಕ ಸ್ವಾವಲಂಬನೆಗೆ ಮುಂದಾದರು. ಆಗ ಅಲ್ಲಿಂದ ಸ್ವಸಹಾಯ ಸಂಘಗಳು ಪ್ರಾರಂಭವಾದವು. ನಂತರ ಇದು ಹೋರಾಟದ ವೇದಿಕೆಯಾಯಿತು ಎಂದರು.
ಮನವರಿಕೆ ಮಾಡುವುದು ಅಗತ್ಯ: ಇಂದು ಸ್ವಸಹಾಯ ಸಂಘಗಳು ಯಾವ ರೀತಿ ಹಣಕಾಸು ನೆರವನ್ನು ಸದ್ಬಳಕೆ ಮಾಡುತ್ತಿವೆ ಎಂಬುದನ್ನು ಮನವರಿಕೆ ಮಾಡಿಸುವುದು ಅಗತ್ಯ. ಕೇವಲ ಸಭೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ವಿನಿಯೋಗವಾಗದಂತೆ ಮಹಿಳೆಯರು ಮುಂದಾಗಬೇಕು. ಆರ್ಥಿಕ ನಿಧಿಯನ್ನು ಸಂಪೂರ್ಣವಾಗಿ ತಮ್ಮ ಸ್ವಾವಲಂಬನೆಗೆ ಬಳಸುವಲ್ಲಿ ಆದ್ಯತೆ ವಹಿಸಬೇಕು. ಈ ದಿಸೆಯಲ್ಲಿ ಇಂತಹ ಕೃತಿಗಳು ಮಾರ್ಗದರ್ಶನವಾಗಬೇಕು ಎಂದು ಅವರು ಆಶಿಸಿದರು.
ಬಡವರು ಹಾಗೂ ಗ್ರಾಮೀಣರ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. 1 ಗೆ ಕೆಜಿ ಅಕ್ಕಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಸಬ್ಸಡಿ ವಿತರಣೆ ಮುಂತಾದವು. ಆದರೆ ಕಷ್ಟಪಟ್ಟು ದುಡಿಯುವ ಹಾಗೂ ಸ್ವಾಭಿಮಾನದಿಂದ ಬದುಕುವವರ ಸಂಖ್ಯೆ ಹೆಚ್ಚಿಸಲು ಇಂತಹ ಯೋಜನೆಗಳು ಸಹಕಾರಿಯಾಗಿವೆಯೇ ಎಂಬುದನ್ನು ಚಿಂತಿಸಬೇಕು ಎಂದರು.
ಕೃತಿಗಳನ್ನು ಕುರಿತು ಸೋಮಾನಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಬಿ.ಸಿ. ಮಂಜುಳಾ ಹಾಗೂ ಮಂಡ್ಯ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಕೆ. ಶಿವಚಿತ್ತಪ್ಪ ಮಾತನಾಡಿದರು. ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್.ಎನ್. ನಾಗರಾಜ್ ಹಾಗೂ ಟ್ರಸ್ಟಿ ಎಂ. ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ.ಎಂ. ಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

