ಹಂಪಾಪುರಕ್ಕೆ ತಲುಪದ ನೀರು
ಕ.ಪ್ರ.ವಾರ್ತೆ , ಕೆ.ಆರ್. ನಗರ , ಆ. 30
ಚಾಮರಾಜ ಎಡದಂಡ ಉಪ-ನಾಲಾ ವ್ಯಾಪ್ತಿಯ ಕೊನೆಯ ಗ್ರಾಮವಾದ ಹಂಪಾಪುರಕ್ಕೆ ನೀರು ತಲುಪದೆ ಇರುವುದರಿಂದ ರೈತರು ಕಂಗಾಲಾಗಿದ್ದು, ಇವರ ಸಂಕಷ್ಟ ಕೇಳುವವರೆ ಇಲ್ಲದಂತಾಗಿದೆ.
ಈಗಾಗಲೇ ಬತ್ತದ ಪೈರು ನಾಟಿಗೆ ಬಂದಿದ್ದು, ನೀರಿಲ್ಲದೆ ಒಣಗಿ ಹೋಗುತ್ತಿದ್ದು, ಪೈರುಗಳಿಗೆ ಕೆರೆ-ಕಟ್ಟೆ ಮತ್ತು ಇತರೆ ಮೂಲಗಳಿಂದ ರೈತರು ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಸಮಸ್ಯೆಯಾಗಿದೆಯಲ್ಲದೆ ಆರ್ಥಿಕವಾಗಿಯೂ ಹೊರೆಯಾಗುತ್ತಿದೆ.
ನಾಲೆಗಳಿಗೆ ನೀರು ಸಮರ್ಪಕವಾಗಿ ಬಾರದಿರುವ ಬಗ್ಗೆ ಈ ಭಾಗದ ರೈತರು, ಶಾಸಕರಿಗೆ ಮತ್ತು ಇತರೆ ಚುನಾಯಿತ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಕೆ.ಆರ್. ನಗರದ ಜಲಸಂಪನ್ಮೂಲ ಇಲಾಖೆಯ ಕಚೇರಿಗೆ 15 ದಿನಗಳ ಹಿಂದೆ ಮುತ್ತಿಗೆ ಹಾಕಿ ನೀರು ಹರಿಸುವಂತೆ ಪ್ರತಿಭಟಿಸಿದರೂ ಅಧಿಕಾರಿಗಳು ಗಮನ ಹರಿಸಿಲ್ಲ.
ನೆರವಿಗೂ ಧಾವಿಸುತ್ತಿಲ್ಲ: ಸುತ್ತಮುತ್ತಲ ರೈತರು ನಾಟಿ ಕಾರ್ಯದಲ್ಲಿ ತೊಡಗಿದ್ದರೆ, ಚಾಮರಾಜ ನಾಲಾ ವ್ಯಾಪ್ತಿಯ ನೂರಾರು ಎಕರೆಗೆ ನಾಟಿ ಮಾಡಬೇಕಾದ ಪೈರುಗಳು ಒಣಗುತ್ತಿದ್ದು, ಇದರಿಂದ ದಿಕ್ಕು ತೋಚದಂತಾಗಿರುವ ರೈತರು ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಇವರ ನೆರವಿಗೆ ಯಾರೂ ಬರುತ್ತಿಲ್ಲ.
ಪ್ರತಿ ವರ್ಷ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, 400 ಎಕರೆ ಜಮೀನಿಗೆ ನೀರು ಸಲೀಸಾಗಿ ಹರಿದು ಬರುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಂಬಂಧಿತರು ವಿಫಲರಾಗಿದ್ದು, ರೈತರು ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾದು ಬತ್ತದ ನಾಟಿ ಮಾಡಲು ಇನ್ನಿಲ್ಲದ ಬವಣೆ ಅನುಭವಿಸುತ್ತಿದ್ದಾರೆ. ನಾಟಿ ಕೆಲಸ ಮಾಡಲು ಈಗಾಗಲೇ ವಿಳಂಬವಾಗಿದ್ದು, ಹಾಕಿದ ಬಂಡವಾಳ ವಾಪಸ್ ಬಾರದೆ ವರ್ಷದ ಕೂಳಿಗೂ ತತ್ವಾರ ಎದುರಾಗಿದೆ. ಸಂಬಂಧಿತರು ಕೂಡಲೆ ನಾಲೆಯ ಕೊನೆಯ ಭಾಗದ ಹೂಳು ತೆಗೆಸಿ ಸ್ವಚ್ಛ ಮಾಡಿ, ಜಮೀನುಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
- ಕುಪ್ಪೆ ಮಹದೇವಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

