ಚಂಡಮಾರುತ ಪೀಡಿತರ ಹಣ 'ಸಂತ್ರಸ್ತ'

Updated on: 

ಮೈಸೂರು: ಒರಿಸ್ಸಾದಲ್ಲಿ ಸಂಭವಿಸಿದ ಭೀಕರ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಪ್ಲಾಯೀಸ್ ಯೂನಿಯನ್ ಸಂಗ್ರಹಿಸಿದ 17 ಲಕ್ಷ 13 ವರ್ಷಗಳಾದರೂ ಸಂಬಂಧಪಟ್ಟವರಿಗೆ ತಲುಪಿಯೇ ಇಲ್ಲ!
- ಇದು ವಿಚಿತ್ರವಾದರೂ ಸತ್ಯ.
ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಮೈಸೂರು ಬ್ಯಾಂಕು) ಆರಂಭವಾಯಿತು. ಇದರ ಶಾಖೆಗಳು ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಮೂಲೆಮೂಲೆಗಳಲ್ಲಿವೆ.
ಸಾಮಾನ್ಯವಾಗಿ ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಭೂಕಂಪ ಮೊದಲಾದ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಹಸ್ರಾರು ಮಂದಿ ಸಾವು- ನೋವಿಗೀಡಾಗುತ್ತಾರೆ. ಮನೆಮಠ ಕಳೆದುಕೊಳ್ಳುತ್ತಾರೆ. ಸಂಕಷ್ಟದಲ್ಲಿ ಸಿಲುಕುವ ಸಂತ್ರಸ್ತರು ಜೀವನ ನಿರ್ವಹಣೆಗೆ ಪರಿತಪಿಸುತ್ತಾರೆ. ಕೇವಲ ಸರ್ಕಾರ ನೀಡುವ ಪರಿಹಾರ ಸಾಕಾಗುವುದಿಲ್ಲ. ಆಗ ಸಂಘ, ಸಂಸ್ಥೆಗಳು, ಸರ್ಕಾರಿ ನೌಕರರು, ಮಠಮಾನ್ಯಗಳು ಸೇರಿದಂತೆ ಎಲ್ಲಾ ವರ್ಗದ ಜನತೆ ತಮ್ಮ ಕೈಲಾದಷ್ಟು ಪರಿಹಾರ ನೀಡುತ್ತಾರೆ. ಇದನ್ನು ಸಂಗ್ರಹಿಸುವವರು ಆಯಾ ರಾಜ್ಯ ಸರ್ಕಾರಗಳ ಮೂಲಕ ಅಥವಾ ನೇರವಾಗಿ ತಲುಪಿಸಿ, ಸಂತೃಪ್ತಿ ಕಂಡುಕೊಳ್ಳುತ್ತಾರೆ.
ಒಂದು ದಿನದ ವೇತನ: ಅಂತೆಯೇ ಎಸ್‌ಬಿಎಂ ನೌಕರರು ಕೂಡ ಒರಿಸ್ಸಾ ಚಂಡಮಾರುತಕ್ಕೆ ಸಿಲುಕಿ ನಲುಗಿದರ ಬಗ್ಗೆ ಮರುಕಪಟ್ಟರು. ದೇಶಾದ್ಯಂತ ಇರುವ ಈ ಬ್ಯಾಂಕಿನ ಸಹಸ್ರಾರು ನೌಕರರು ಒಂದು ದಿನದ ವೇತನವನ್ನು ಪರಿಹಾರಕ್ಕೆ ನೀಡಲು ಸಮ್ಮತಿಪತ್ರ ನೀಡಿದರು. ಅದರಂತೆ ಎಲ್ಲಾ ನೌಕರರ ಒಂದು ದಿನದ ವೇತನ ಕಟಾಯಿಸಿ, ಎಸ್‌ಬಿಎಂ ಎಂಪ್ಲಾಯೀಸ್ ಯೂನಿಯನ್ ಖಾತೆಗೆ ವರ್ಗಾಯಿಸಲಾಯಿತು. ಆದರೆ ಯೂನಿಯನ್ ಪದಾಧಿಕಾರಿಗಳು ಈವರೆಗೆ ಈ ನಿಧಿಯನ್ನು ಒರಿಸ್ಸಾ ಸಂತ್ರಸ್ತರಿಗೆ ತಲುಪಿಸಿಯೇ ಇಲ್ಲ.
ಸಾರ್ವಜನಿಕರ ಹಣಕ್ಕೆ ಉತ್ತರದಾಯಿತ್ವಯಾದ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೊಳಗೊಂಡ ಸಂಘವೇ ಈ ರೀತಿ ಮಾಡಿರುವುದು ನಿಜಕ್ಕೂ ಆಘಾತಕಾರಿ. ನೌಕರರ ಒಂದು ದಿನದ ವೇತನ ಕಟಾಯಿಸಿ, ನೌಕರರರ ಸಂಘದ ಖಾತೆಗೆ ವರ್ಗಾಯಿಸಿದ ಆಡಳಿತ ಮಂಡಳಿಯೂ ಈ ಬಗ್ಗೆ ಗಮನಹರಿಸಿಲ್ಲ.
ಯೂನಿಯನ್‌ನ ತ್ರೈವಾರ್ಷಿಕ ಅಧಿವೇಶನಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತವೆ. ಕಳೆದ ವರ್ಷ ಅಂದರೆ 2012ರ ಏ.29 ರಿಂದ ಮೇ 1 ರವರೆಗೆ ಯೂನಿಯನ್‌ನ 23ನೇ ಅಧಿವೇಶನ ಬೆಂಗಳೂರಿನಲ್ಲಿ ಜರುಗಿತು. ಆಗ ನೀಡಲಾದ 2009, 2010 ಮತ್ತು 2011ರ ಆರ್ಥಿಕ ವರದಿಯ ಪ್ರಕಾರ ಒರಿಸ್ಸಾ ಚಂಡಮಾರುತ ನಿಧಿಯ 17 ಲಕ್ಷ ಯೂನಿಯನ್ ಖಾತೆಯಲ್ಲಿಯೇ ಇದೆ. ಲಭ್ಯವಿರುವ ಮಾಹಿತಿ ಪ್ರಕಾರ ಈವರೆಗೂ ಈ ಹಣ ವರ್ಗಾವಣೆಯಾಗಿಲ್ಲ.
ಈ ಬಗ್ಗೆ ಯೂನಿಯನ್ ಅಧ್ಯಕ್ಷ ಹಿರಣ್ಣಯ್ಯ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಯೂನಿಯನ್ ಕೇಂದ್ರ ಕಚೇರಿಯನ್ನು ಸಂಪರ್ಕಿಸುವ ಕನ್ನಡಪ್ರಭದ ಯತ್ನ ವಿಫಲವಾಯಿತು. ಮೊಬೈಲ್ ಹಾಗೂ ಸ್ಥಿರ ದೂರವಾಣಿ ಕರೆಗಳನ್ನು ಸ್ವೀಕರಿಸಲಿಲ್ಲ.
ಸಂಬಂಧಪಟ್ಟವರು ಈ ನಿಧಿಯನ್ನು ವರ್ಗಾಯಿಸಿದ್ದರೆ ಸಂಘದ ಸದಸ್ಯರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಸೂಕ್ತ ತೀರ್ಮಾನ ಕೈಗೊಂಡು ನಿಧಿಯನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು. ಇಷ್ಟು ವರ್ಷಗಳ ನಂತರ ಒರಿಸ್ಸಾ ಸರ್ಕಾರ ನಿಧಿಯನ್ನು ಸ್ವೀಕರಿಸುವುದು ಅನುಮಾನ. ಹೀಗಾಗಿ ಈ ಹಣವನ್ನು ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ, ಮುಂದೆ ಈ ರೀತಿ ವಿಕೋಪಗಳು ಸಂಭವಿಸಿದಲ್ಲಿ ಬಳಸಿಕೊಳ್ಳಲು ಕೋರಬೇಕು ಎಂಬುದು ಸಂಘದ ಸದಸ್ಯರೊಬ್ಬರ ಸಲಹೆ.
-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com