ಮೈಸೂರು

ಆ.4ಕ್ಕೆ ಗ್ರಾಪಂ ಉಪ ಚುನಾವಣೆ

Published On :

ಕ.ಪ್ರ.ವಾರ್ತೆ   ಮೈಸೂರು   ಜು. 15
ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಆಗಸ್ಟ್ 4ರಂದು ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.
ಜಿಲ್ಲಾಧಿಕಾರಿಗಳು ಜು.17ರಂದು ಅಧಿಸೂಚನೆ ಹೊರಡಿಸುವರು. ನಾಮಪತ್ರ ಸಲ್ಲಿಸಲು ಜು.24 ಕೊನೆ ದಿನ. ಜು.25ರಂದು ನಾಮಪತ್ರ ಪರಿಶೀಲನೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಜು.27 ಕಡೆ ದಿನ. ಮತದಾನ ಅಗತ್ಯವಿದ್ದರೆ ಆಗಸ್ಟ್ 4ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ. ಆಗಸ್ಟ್ 7ರ ಬೆಳಗ್ಗೆ 8ರಿಂದ ಮತ ಎಣಿಕೆಯು ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.
ಖಾಲಿ ಇರುವ ಸದಸ್ಯ ಸ್ಥಾನಗಳ ವಿವರ: ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಪಂನ ಸಜ್ಜೇಹುಂಡಿ ಕ್ಷೇತ್ರ (ಸಾಮಾನ್ಯ), ಧನಗಳ್ಳಿ ಕ್ಷೇತ್ರ (ಸಾಮಾನ್ಯ), ಟಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಪಂ ಯಡಹಳ್ಳಿ ಕ್ಷೇತ್ರ (ಸಾಮಾನ್ಯ), ಕೊಳತ್ತೂರು ಗ್ರಾಪಂನ ಕೋಣಗಹಳ್ಳಿ ಕ್ಷೇತ್ರ (ಪ.ಜಾತಿ) ಹೊಳೆಸಾಲು ಗ್ರಾಪಂನ ಕೊಪ್ಪಾಳು ಕ್ಷೇತ್ರ (ಪ.ಜಾತಿ ಮಹಿಳೆ), ಮಾದಾಪುರ ಗ್ರಾಪಂನ ನಿಲಸೋಗೆ ಕ್ಷೇತ್ರ (ಪ.ಜಾತಿ), ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಪಂನ ಉಪ್ಪಿಲಗರಹುಂಡಿ (ಇಮ್ಮಾವು ಹುಂಡಿ) ಪ.ಜಾತಿ, ಕಸುವಿನಹಳ್ಳಿ ಗ್ರಾಪಂನ ಸಿದ್ದಯ್ಯನಹುಂಡಿ ಕ್ಷೇತ್ರ (ಹಿಂದುಳಿದ ವರ್ಗ ಎ ಮಹಿಳೆ), ದುಗ್ಗಹಳ್ಳಿ ಗ್ರಾಪಂ (ಹಿಂದುಳಿದ ವರ್ಗ ಎ)ಕ್ಕೆ ಮೀಸಲಾಗಿದೆ.
ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಾಪಂನ ಉದ್ದೂರು ಕ್ಷೇತ್ರ (ಹಿಂದುಳಿದ ವರ್ಗ ಎ), ಕರಿಮುದ್ದನಹಳ್ಳಿ ಗ್ರಾಪಂ ಕಾಡವಡ್ಡರಗುಡಿ ಕ್ಷೇತ್ರ (ಸಾಮಾನ್ಯ), ಕೆ.ಆರ್. ನಗರ ತಾಲೂಕು ಅಂಕನಹಳ್ಳಿ ಗ್ರಾಪಂ (ಪ. ಪಂಗಡ ಮಹಿಳೆ), ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಗ್ರಾಪಂನ (ಪ.ಜಾತಿ ಮಹಿಳೆ), ಎಚ್.ಡಿ. ಕೋಟೆ ತಾಲೂಕು ಹಂಪಾಪುರ ಗ್ರಾಪಂ (ಪ.ಜಾತಿ), ಮುತ್ತಿಗೆ ಚಿಕ್ಕತಳಲು ಗ್ರಾಪಂನ ಒಂದು ಸ್ಥಾನ (ಹಿಂದುಳಿದ ವರ್ಗ ಎ), ಮತ್ತೊಂದು ಸ್ಥಾನ (ಸಾಮಾನ್ಯ ಮಹಿಳೆ). ಹಾದನೂರು ಕ್ಷೇತ್ರ (ಸಾಮಾನ್ಯ), ಬೀಚನಹಳ್ಳಿ ಗ್ರಾಪಂ (ಪ.ಜಾತಿ) ಮತ್ತು ಎನ್. ಬೇಗೂರು ಗ್ರಾಪಂ ಕೆ.ಗಂಡತ್ತೂರು ಕ್ಷೇತ್ರ (ಹಿಂದುಳಿದ ವರ್ಗ ಎ)ಗೆ ಮೀಸಲಾಗಿದೆ.
ಒಟ್ಟು 19 ಸ್ಥಾನಗಳು: ಜಿಲ್ಲೆಯ ಒಟ್ಟು 17 ಗ್ರಾಪಂಗಳ 19 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಹೆಚ್ಚಿನ ವಿವರಗಳನ್ನು ಸಂಬಂಧಿಸಿದ ತಾಲೂಕು ತಹಸೀಲ್ದಾರರ ಕಚೇರಿಯಲ್ಲಿ ಅಥವಾ ಸಂಬಂಧಿಸಿದ ಗ್ರಾಪಂ ಚುನಾವಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಚುನಾವಣೆ ನಡೆಯುವ ಪ್ರತಿ ಗ್ರಾಪಂಗೆ ಒಬ್ಬರು ಚುನಾವಣಾಧಿಕಾರಿಯನ್ನು ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ.
ಚುನಾವಣಾಧಿಕಾರಿಗಳು ಚುನಾವಣಾ ವೇಳಾಪಟ್ಟಿಯಂತೆ ಗ್ರಾಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರವನ್ನು ಸಂಬಂಧಿಸಿದ ಗ್ರಾಪಂ ಕಚೇರಿಯಲ್ಲಿ ವೇಳಾಪಟ್ಟಿಯಂತೆ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಬಹುದು. ಸ್ಪರ್ಧೆ ಇರುವ ಸ್ಥಾನಗಳಿಗೆ ಆ.4ರಂದು ಮತದಾನವನ್ನು ಗ್ರಾಪಂ ಕ್ಷೇತ್ರಗಳಲ್ಲಿನ ಮತಗಟ್ಟೆಯಲ್ಲಿ ನಡೆಸಲಾಗುವುದು.
ಗ್ರಾಪಂ ಚುನಾವಣೆ ನಡೆಯುವ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು ಜು.17 ರಿಂದ ಆ.7ರವರೆಗೆ ಜಾರಿಯಲ್ಲಿರುತ್ತದೆ.
ಮತದಾನವು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ದಿನದಂದು ಮತದಾರರು ಶಾಂತ ರೀತಿಯಿಂದ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಾಮೇಗೌಡ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.