ಮೈಸೂರು

ಆಸ್ಥಾನ ವಿದ್ವಾನ್ ಮಾದರಿ ಪ್ರಶಸ್ತಿ ನೀಡಲು ಆಗ್ರಹ

Published On :

ಕ.ಪ್ರ.ವಾರ್ತೆ ಮೈಸೂರು ಜು. 25
ರಾಜರ ಕಾಲದಲ್ಲಿ ಸಂಗೀತ ಕಲಾವಿದರಿಗೆ ನೀಡುತ್ತಿದ್ದ ಅಸ್ಥಾನ ವಿದ್ವಾಂಸ ಪ್ರಶಸ್ತಿಯನ್ನು ಸರ್ಕಾರ ಮುಂದುವರಿಸುವುದರ ಔಚಿತ್ಯವೇನು ಎಂದು ಮೈಸೂರು ಆರ್ಟ್ ಗ್ಯಾಲರಿಯ ಸಂಸ್ಥಾಪಕ ಹಾಗೂ ಕಲಾವಿದ ಎಲ್. ಶಿವಲಿಂಗಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಂದಿನ ರಾಜರು ಕೊಡುತ್ತಿದ್ದ ದಿನಗೂಲಿಗೆ ಚಿತ್ರಕಲಾವಿದರು ಹಾಗೂ ಶಿಲ್ಪ ಕಲಾವಿದರು ಕುಟುಂಬ ಸಹಿತವಾಗಿ ದುಡಿದು ಕಲಾ ಪರಂಪರೆ ಸಾರುವ ಮೂಲಕ ರಾಜ್ಯದ ಕೀರ್ತಿ ಬೆಳಗಿಸಿದ್ದಾರೆ. ಹೀಗಿರುವಾಗ ಸಂಗೀತ ಕಲಾವಿದರಿಗೆ ಮಾತ್ರ ಅಸ್ಥಾನ ವಿದ್ವಾಂಸ ಪ್ರಶಸ್ತಿಯನ್ನು ಸರ್ಕಾರ ಕೊಡುವುದು ಎಷ್ಟು ಸಮಂಜಸ ಎಂದು ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಅರಮನೆ ನಗರಿಯಾದ ಮೈಸೂರು ಸೇರಿದಂತೆ ಬೇಲೂರು, ಹಳೇಬೀಡು, ಐಹೊಳೆ, ಪಟ್ಟದಕಲ್ಲು. ಬಾದಾಮಿ, ಹಂಪಿ, ಲಕ್ಕುಂಡಿ ಮುಂತಾದ ಕಲಾ ವೈಭವನ್ನು ನೋಡಲು ಪ್ರತಿನಿತ್ಯ ಸಾಗರೋಪಾದಿಯಲ್ಲಿ ಪ್ರವಾಸಿಗು ಬರುತ್ತಿದ್ದಾರೆ. ಇದರಿಂದ ನಾಡಿನ ಬೊಕ್ಕಸಕ್ಕೂ ಆದಾಯವಿದೆ. ಹೀಗಿರುವಾಗ ಗುಡಿ ಗೋಪುರ, ಕಟ್ಟಡ ನಿರ್ಮಿಸಿದ ಶಿಲ್ಪಿಗಳನ್ನು ಹಾಗೂ ಚಿತ್ರಕಲಾವಿದರನ್ನು ಪರಿಗಣಿಸಿ ಅಸ್ಥಾನ ವಿದ್ವಾಂಸ ಮಾದರಿಯಲ್ಲಿ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ದಸರಾ ವಸ್ತು ಪ್ರದರ್ಶನದ ಲಲಿತಕಲಾ ವಿಭಾಗಕ್ಕೆ ರಾಜಕೀಯ ವ್ಯಕ್ತಿಗಳನ್ನು ಅಧ್ಯಕ್ಷರಾಗಿ ನೇಮಿಸುವ ಹಿನ್ನೆಲೆಯಲ್ಲಿ ಆ ವಿಭಾಗದ ಮಹತ್ವ ಕಲ್ಪಿಸಬೇಕು. ಕಲಾವಿದರನ್ನು ಅಧ್ಯಕ್ಷರಾಗಿ ನೇಮಿಸಬೇಕು. ಹಾಗೂ ಕೇವಲ ಕಾವಾ ವಿದ್ಯಾರ್ಥಿಗಳಿಗೆ ಮಾತ್ರವೇ ಅನುದಾನ ನೀಡಿ ದಸರಾ ಚಿತ್ರಕಲೋತ್ಸವಕ್ಕೆ ಅವಕಾಶ ಮಾಡದೆ ಎಲ್ಲಾ ಕಲಾವಿದರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದರು.
ಸಾಂಸ್ಕೃತಿಕ ನಗರಿಯಲ್ಲಿ ಸುಸಜ್ಜಿತವಾದ ಒಂದು ಕಲಾ ಗ್ಯಾಲರಿಯಿಲ್ಲ, ಕಲಾಮಂದಿರದಲ್ಲಿರುವ ಸುಚಿತ್ರ ಕಲಾಗ್ಯಾಲರಿ ಸೂಕ್ತ ವ್ಯವಸ್ಥೆಯಿಲ್ಲದೆ ಸೊರಗಿದೆ. ಆದ್ದರಿಂದ ಅದೇ ಆವರಣದ ಖಾಲಿ ಜಾಗದಲ್ಲಿ ಕಲಾಗ್ಯಾಲರಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕಲಾ ವಿಮರ್ಶಕ ಶ್ರೀಕಂಠ ಗುಂಡಪ್ಪ ಮಾತನಾಡಿ, ಕಲೆ ಮತ್ತಿತರ ಸಾಂಸ್ಕೃತಿಕ ಸಮಿತಿಗೆ ಸರ್ಕಾರ ಅನುದಾನ ಮಾತ್ರ ನೀಡಬೇಕೆ ಹೊರತು ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಕಲಾವಿದೆ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಈ ಅವಧಿಯಲ್ಲಿ ಕಲೆ ಮತ್ತು ಕಲಾವಿದರ ಸಮಗ್ರ ಪ್ರಗತಿಗೆ ಒಳ್ಳೆಯ ಸಂಪ್ರದಾಯ ಅನುಷ್ಠಾನಕ್ಕೆ ತರಬೇಕು ಎಂದರು.  
ಕಲಾವಿದರಾದ ಬಸವಣ್ಣ ಚಾರ್, ಎಲ್.ಎಸ್.ಎನ್. ಆಚಾರ್, ಜಮುನಾರಾಣಿ, ಇನ್ಲೇ ಪುಟ್ಟರಾಜು ಹಾಗೂ ಕಿಕ್ಕೇರಿ ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.