ಈಜಲು ಹೋದ ವಿದ್ಯಾರ್ಥಿ ಸಾವು
ಮೈಸೂರು: ಕೆಆರ್ಎಸ್ ಹಿನ್ನೀರು ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾಗಿ ಮೃತಪಟ್ಟಿರುವ ಘಟನೆ ಕೆಆರ್ಎಸ್ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹೆಬ್ಬಾಳು ಬಳಿಯ ಲೋಕನಾಯಕನಗರ ನಿವಾಸಿ ಪ್ರಭಾಕರ್ ಬಡಿಗೇರ ಎಂಬವರ ಪುತ್ರ ಸಾಗರ್ (19) ಮೃತಪಟ್ಟವರು.
ಯುವರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಪಿ ವಿದ್ಯಾರ್ಥಿಯಾದ ಸಾಗರ್ ತನ್ನ 4-5 ಮಂದಿ ಸ್ನೇಹಿತರೊಂದಿಗೆ ಮೈಸೂರು ತಾಲೂಕು ಮೀನಾಕ್ಷಿಪುರದ ಬಳಿಯಿರುವ ಕೆಆರ್ಎಸ್ ಹಿನ್ನೀರು ಪ್ರದೇಶಕ್ಕೆ ಪಿಕ್ನಿಕ್ ಹೋಗಿದ್ದಾರೆ. ಎಲ್ಲರು ನೀರಿನಲ್ಲಿ ಈಜುತ್ತಿದ್ದ ವೇಳೆ ಸಾಗರ್ ಗುಂಡಿಯೊಂದರಲ್ಲಿ ಸಿಕ್ಕಿಕೊಂಡಿದ್ದು, ಜೊತೆಗಿದ್ದವರು ರಕ್ಷಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ಸಾಗರ್ ಶವ ಹೊರ ತೆಗೆಸಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೈಸೂರು: ನಗರದ ನರಸಿಂಹರಾಜ ಮೊಹಲ್ಲಾ ಕನ್ನಡ ಪರ ಸಂಘಟನೆಯ ನಾಗರಿಕ ಹಿತರಕ್ಷಣಾ ವೇದಿಕೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. 2012- 13ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದಿರುವ ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು ಪ್ರತಿ, ಭಾವಚಿತ್ರ, ವಿಳಾಸ ಹಾಗೂ ದೂರವಾಣಿ ವಿವರದೊಂದಿಗೆ ಆ. 5 ರೊಳಗೆ ನ್ಯೂಸಾಗರ್ ಹೋಂ ವರ್ಲ್ಡ್ ನಂ. 4649, 24,1 ಶಿವಾಜಿ ಮುಖ್ಯರಸ್ತೆ, ಎನ್.ಆರ್. ಮೊಹಲ್ಲಾ ಇಲ್ಲಿಗೆ ಅರ್ಜಿ ಸಲ್ಲಿಸುವುದು. ಮಾಹಿತಿಗೆ ವೇದಿಕೆ ಅಧ್ಯಕ್ಷ ಮಂಜುನಾಥ್ ಮೊ. 9844339547 ಅಥವಾ ಪ್ರಧಾನ ಕಾರ್ಯದರ್ಶಿ ರಾಮ್ಪ್ರಸಾದ್ ಮೊ. 9845414618 ಸಂಪರ್ಕಿಸಬಹುದು.
ಡಾ. ಗೀತಾ ಅವಧಾನಿ ಇಂದು ನಿವೃತ್ತಿ
ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಗೀತಾ ಕೆ. ಅವಧಾನಿ ಅವರು ಜು. 31ರಂದು ನಿವೃತ್ತಿಯಾಗಲಿದ್ದಾರೆ. ಹುಬ್ಬಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿದ ಇವರು 1976 ರಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್ (ಮಾಸ್ಟರ್ ಆಫ್ ಸರ್ಜನ್) ಮುಗಿಸಿದ್ದರು.
ಲತಾಗೆ ಡಾಕ್ಟರೇಟ್
ಮೈಸೂರು: ಡಾ. ಎಚ್.ಕೆ. ಮನೋನ್ಮಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಆರ್. ಲತಾ ಅವರು ಮಂಡಿಸಿದ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಪಿಎಚ್.ಡಿ ಪದವಿ ನೀಡಿದೆ.
ಅನ್ನಭಾಗ್ಯಕ್ಕೆ ಚಾಲನೆ
ಸುತ್ತೂರು: ಸಮೀಪದ ಬಿಳಿಗೆರೆ ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಗೆ ರೈತ ಸಹಕಾರ ಸಂಘದ ಅಧ್ಯಕ್ಷ ತಾಯೂರು ನಟರಾಜಪ್ಪ ಚಾಲನೆ ನೀಡಿದರು. ಮಂಗಳವಾರ ಗ್ರಾಮದಲ್ಲಿನ ಸಂಘದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಅಕ್ಕಿ ವಿತರಿಸಿದರು. ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷ ಸುತ್ತೂರು ಚಿಕ್ಕಮಾದಪ್ಪ, ಸಂಘದ ಸದಸ್ಯರಾದ ರೇವಣ್ಣ, ಎಸ್. ಶಿವಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಗುರುಲಿಂಗೇಗೌಡ, ಕಾರ್ಯದರ್ಶಿ ನಾಗರಾಜಪ್ಪ, ಸ್ವಾಮಿ, ಸಿದ್ದಯ್ಯ, ಜಯಶೀಲ, ಗ್ರಾಮಸ್ಥರು ಇದ್ದರು.
ಹುಲ್ಲಹಳ್ಳಿ, ರಾಂಪುರ ನಾಲೆಯಿಂದ 13,529 ಎಕರೆಗೆ ನೀರು
ಮೈಸೂರು: ಹುಲ್ಲಹಳ್ಳಿ ಅಣೆಕಟ್ಟೆಯಿಂದ ಹುಲ್ಲಹಳ್ಳಿ ಮತ್ತು ರಾಂಪುರ ನಾಲಾ ಅಚ್ಚುಕಟ್ಟು ಪ್ರದೇಶದ 13,529 ಎಕರೆ (5475 ಹೆಕ್ಟೇರ್) ಪ್ರದೇಶದ ಅಲ್ಪಾವಧಿ ಬತ್ತದ ಬೆಳೆಗೆ ಆ.17 ರವರೆಗೆ ನೀರು ಬಿಡಲಾಗುವುದು ಎಂದು ಕಬಿನಿ ನಾಲೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ ಕಬಿನಿ ಯೋಜನೆಯಡಿ ಬರುವ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಬಿಡುವ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಕಬಿನಿ ಜಲಾಶಯದಲ್ಲಿ ಹಾಲಿ ಇರುವ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವ ಗಮನಿಸಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಅಲ್ಪಾವಧಿ ಬತ್ತದ ಬೆಳೆಗೆ ಕಟ್ಟು ನೀರಿನ ವ್ಯವಸ್ಥೆಯಂತೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

