ಮೈಸೂರು

ಗುಟ್ಕಾ ವಹಿವಾಟು ಅಬಾಧಿತ!

Published On :

ಸೋಮವಾರಪೇಟೆ: ಸರ್ಕಾರವೇನೋ ಗುಟ್ಕಾ ನಿಷೇಧಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡು, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೂ, ಸೋಮವಾರಪೇಟೆಯಲ್ಲಿ ಮಾತ್ರ ಗುಟ್ಕಾ ವಹಿವಾಟುಗಳು ಯಾವುದೇ ಭಯವಿಲ್ಲದೆ ನಡೆಯುತ್ತಿದ್ದು, ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಗುಟ್ಕಾ ಸರಬರಾಜುದಾರರ ಅಂಗಡಿಗಳಲ್ಲಿ ಗುಟ್ಕಾಕ್ಕೆ ಸಂಬಂಧಿಸಿದ ಸರಕುಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ. ನಿಷೇಧದ ಬಗ್ಗೆ ತಿಳಿದಿದ್ದರೂ ಏನೇನೋ ಸಬೂಬು ಹೇಳುತ್ತಾ, ನಿಷೇಧಿತ ಸರಕುಗಳನ್ನು ದುಪ್ಪಟ್ಟು ದರದಲ್ಲಿ ಮಾರಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

'ಕನ್ನಡ ಬದುಕಿನ ಭಾಷೆಯಾಗಲಿ'
ಕೆ.ಆರ್.ಪೇಟೆ: ಇಂಗ್ಲಿಷ್ ಬದುಕು ಕಟ್ಟಿಕೊಡುವ ಭಾಷೆಯಾಗಿ ರೂಪುಗೊಂಡಿರುವುದರಿಂದ ಕನ್ನಡ ಭಾಷೆ ಮಾಸುತ್ತಿದೆ. ಕನ್ನಡ ಬದುಕು ಕಟ್ಟಿಕೊಡುವ ಭಾಷೆಯಾಗಿ ರೂಪುಗೊಳ್ಳಬೇಕಿದೆ. ಇದಕ್ಕಾಗಿ ರಾಜ್ಯಸರ್ಕಾರ ಡಾ.ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಜಾರಿಗೊಳಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ಭಾನುವಾರ ಹೇಳಿದರು. ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಅಧ್ಯಕ್ಷರಾದ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರಿಗೆ ಗೌರವ ಸಮರ್ಪಿಸಿ ಮಾತನಾಡಿದರು. ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದು ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ಹಾಗೂ ವ್ಯಾಸಂಗದಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಬೇಕು. ಕನ್ನಡ ಭಾಷೆಗೆ ಬದುಕು ಕಟ್ಟಿಕೊಡುವ ಶಕ್ತಿ ಬಂದಾಗ ಸಹಜವಾಗಿಯೇ ಜನರು ಕನ್ನಡವನ್ನು ಅಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದರು.

ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್
ಚಾಮರಾಜನಗರ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಪಿಂಚಣಿ ಸೌಲಭ್ಯ ಅರ್ಹರಿಗೆ ಸಮರ್ಪಕವಾಗಿ ತಲುಪಿಸಲು ಶೀಘ್ರವೇ ಪಿಂಚಣಿ ಅದಾಲತ್ ಅನ್ನು ಹೋಬಳಿ ಮಟ್ಟದಲ್ಲಿ ನಡೆಸುವಂತೆ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಇಲಾಖಾ ಕಾರ್ಯ ಚಟುವಟಿಕೆಗಳ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಇಲಾಖೆ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ವಯೋವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಅಸಹಾಯಕ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಈ ಸೌಲಭ್ಯ ಜಿಲ್ಲೆಯಲ್ಲಿರುವ ಆರ್ಹರಿಗೆಲ್ಲರಿಗೂ ಲಭ್ಯವಾಗಬೇಕು. ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಅದಾಲತ್ ಏರ್ಪಡಿಸುವ ಮೂಲಕ ಸ್ಥಳದಲ್ಲಿಯೆ ಪಿಂಚಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು. ಪಿಂಚಣಿ ಮಂಜೂರು ಮಾಡುವ ಕ್ರಮ ಸರಳೀಕರಣಗೊಳಿಸಬೇಕು. ಪಿಂಚಣಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಅಧಿಕಾರಿಗಳು ಗ್ರಾಮ ಮಟ್ಟದಲ್ಲೇ ನಿರ್ವಹಿಸಬೇಕು. ಬಳಿಕ ಆದಾಲತ್ ಸಂದರ್ಭದಲ್ಲಿ ಪಿಂಚಣಿ ಸೌಲಭ್ಯ ಮಂಜೂರಾತಿ ಮಾಡಬೇಕು ಎಂದು ಸೂಚಿಸಿದರು.

ಬಾಲಕನಿಗೆ ಡೆಂಘೀ ಇರಲಿಲ್ಲ: ಸ್ಪಷ್ಟನೆ
ಮೈಸೂರು: ತಾಲೂಕಿನ ಡಿ. ಸಾಲುಂಡಿಯ ಬಾಲಕ ಬೀರೇಗೌಡ ಮೂರ್ಛೆ ರೋಗದಿಂದ ಮೃತಪಟ್ಟಿದ್ದಾನೆ. ಆತನಿಗೆ ಡೆಂಘೀ ಜ್ವರ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಮೇಗೌಡ ಸ್ಪಷ್ಟಪಡಿಸಿದ್ದಾಒೆ.  ಲ್ಯಾಬ್‌ನ ವರದಿಯನ್ನು 4 ಮಂದಿ ವೈದ್ಯರು ಪರಿಶೀಲಿಸಿದ್ದು, ಡೆಂಘೀ ಜ್ವರ ಇರಲಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.