ಮೈಸೂರು

ವಿಷಯ ಅರಿಯಲು ಭಾಷಾ ಜ್ಞಾನ ಪೂರಕ

Published On :

ಕ.ಪ್ರ.ವಾರ್ತೆ   ಮೈಸೂರು   ಜೂ. 10
ಯಾವುದೇ ವಿಷಯ ಕಲಿಯಬೇಕಾದರೆ ಅದರ ಭಾಷಾ ಜ್ಞಾನ ಅವಶ್ಯಕ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ವಿವಿಯ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರವು (ಸಿಪಿಡಿಪಿಎಸ್) ಮಾನಸ ಗಂಗೋತ್ರಿಯ ಸಂಸ್ಥೆಯ ಸಭಾಂಗಣದಲ್ಲಿ ವಿವಿಯ ಸಂಶೋಧನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಮೂರು ತಿಂಗಳ ವಿಶೇಷ ಇಂಗ್ಲಿಷ್ ಸಂವಹನ ತರಗತಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಜೀವನ ಪೂರ್ಣ ಕನ್ನಡದಲ್ಲಿಯೇ ಓದುವುದು ಸಹ ಒಂದು ರೀತಿಯ ಅನುಕೂಲವಾಗಬಹುದು. ಆದರೆ ವಿಜ್ಞಾನ ಮುಂತಾದ ವಿಷಯಗಳನ್ನು ಕನ್ನಡದಲ್ಲಿ ಓದಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು. ಆದ್ದರಿಂದ ವಿಷಯವನ್ನು ಕಲಿಯಬೇಕಾದರೆ ಭಾಷಾ ಸಂವಹನ ಅವಶ್ಯಕ. ಭಾಷಾ ಕೌಶಲ ಇಲ್ಲವಾದರೆ ವಿಚಾರ ತಿಳಿಯಲು ಕಷ್ಟವಾಗಲಿದೆ ಎಂದು ಹೇಳಿದರು.
ಭಾರತ ಬಹು ಭಾಷೆಗಳ ದೇಶ. ತಮಿಳು, ತೆಲುಗು ಮುಂತಾದ ಯಾವುದೇ ಭಾಷೆಗಳನ್ನು ಕಲಿಯಬಹುದು. ಆದರೆ, ಎಲ್ಲರೊಂದಿಗೂ ಸಂವಹನ ನಡೆಸಬೇಕಾದರೆ ಇಂಗ್ಲಿಷ್ ಕಲಿಕೆ ಅತ್ಯಗತ್ಯ. ಗ್ರಾಮೀಣ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಮೂಲಕ ಅಂಕ ಗಳಿಸುತ್ತಾರೆ. ಆದರೆ, ಅವರಿಗೆ ಇಂಗ್ಲಿಷ್ ಭಾಷಾ ಪ್ರೌಢಿಮೆ ಇಲ್ಲದೆ ಇರುವುದರಿಂದ ಅವರಿಗೂ ಹೆಚ್ಚಿನ ಉತ್ತೇಜನ ನೀಡುವುದು ಅಗತ್ಯ. ಇಂಗ್ಲಿಷ್ ಸಂವಹನ ತಿಳಿಯದು ಎಂಬ ಮಾತ್ರಕ್ಕೆ ಗ್ರಾಮೀಣ ವಿದ್ಯಾರ್ಥಿಗಳು ದಡ್ಡರು ಎಂದು ಭಾವಿಸುವುದು ಸರಿಯಲ್ಲ ಎಂದು ತಿಳಿಸಿದರು.
ಗ್ರಾಮೀಣ ಅಭ್ಯರ್ಥಿಗಳಲ್ಲಿ ಇಂಗ್ಲಿಷ್ ಸಂವಹನದ ಕೊರತೆಯಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ, ಆಯ್ಕೆ ಮುಂತಾದ ಸಂದರ್ಭದಲ್ಲಿ ಸಮರ್ಪಕವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಇಂಥವರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮುಕ್ತ ವಿವಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಹಾಗೂ ಇಂಗ್ಲಷ್ ಕಲಿಕಾ ತರಬೇತಿ ಆರಂಭಿಸಲಾಯಿತು ತಿಳಿಸಿದರು.
ಮೈಸೂರು ವಿವಿಯಲ್ಲಿಯೂ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂವಹನ ಮತ್ತಿತರ ಕೌಶಲ ಕುರಿತು ತರಬೇತಿ ನೀಡುವುದನ್ನು ನಿರಂತರವಾಗಿ ನಡೆಸಬೇಕಿದೆ. ಸಿಪಿಡಿಪಿಎಸ್ ಈ ಸಂಬಂಧ ತರಬೇತಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಸಂಸ್ಥೆಯ ನಿರ್ದೇಶಕ ಡಾ. ನಿರಂಜನ ವಾನಳ್ಳಿ, ಕಳೆದ ಎರಡೂವರೆ ವರ್ಷಗಳಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂಸ್ಥೆಯು, ಉದ್ಯೋಗಕ್ಕೆ ಪೂರಕವಾದ ತರಬೇತಿ ನಡೆಸುತ್ತಿದ್ದು, ತರಬೇತಿಗೆ ಬೇಡಿಕೆ ಇರುವುದರಿಂದ ಹೆಚ್ಚುವರಿಯಾಗಿ 2 ತಂಡಗಳ ತರಗತಿಗೆ ವಿವಿಯು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ. ಸಿ. ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಗೀತಲತಾ ನಿರೂಪಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.