ಮೈಸೂರು

ಅಂಗಡಿಯಲ್ಲಿ ಸರಗೂರು ಗ್ರಂಥಾಲಯ!

Published On :

ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ   ಮೈಸೂರು   ಜೂ. 15
ಎಲ್ಲಾ ಗ್ರಂಥಾಲಯಗಳು ಸುಸಜ್ಜಿತ ಕಟ್ಟಡದಲ್ಲಿ ನಡೆದರೆ ಎಚ್.ಡಿ. ಕೋಟೆ ತಾಲೂಕು ಸರಗೂರು ಗ್ರಂಥಾಲಯ ಮಾತ್ರ ಪಟ್ಟಣ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ನಡೆಯುತ್ತಿದೆ.
ಹಲವು ವರ್ಷಗಳ ಹಿಂದೆ ಈ ಗ್ರಂಥಾಲಯವನ್ನೇ ಮುಚ್ಚಲಾಗಿತ್ತು. ಆದರೆ ಹಲವು ಪ್ರಯತ್ನಗಳ ನಂತರ ಈಗ ಕಾರ್ಯನಿರ್ವಹಿಸುತ್ತಿದೆ. ಮಣಿವಣ್ಣನ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸರಗೂರಿಗೆ ಭೇಟಿ ನೀಡಿ ಮುಚ್ಚಿದ್ದ ಗ್ರಂಥಾಲಯ ತೆರೆಯುವಂತೆ ಆದೇಶಿಸಿದ್ದರು. ಈಗಿರುವ ಅಂಗಡಿ ಮಳಿಗೆಯ ಸುತ್ತ ಗಿಡಗಂಟೆಗಳು ಬೆಳೆದು ಪೊದೆ ನಿರ್ಮಾಣವಾಗಿತ್ತು. ಬಳಿಕ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನೆರವು ಪಡೆದು ಗ್ರಂಥಾಲಯ ಕಟ್ಟಡ ಸುತ್ತಲಿನ ಎಲ್ಲಾ ಅನುಪಯುಕ್ತ ಗಿಡಗಳನ್ನು ತೆಗೆಸಿ ಸ್ವಚ್ಛಗೊಳಿಸಲಾಯಿತು. ಈಗ ಅಂಗಡಿ ಮಳಿಗೆಯಂತಿರುವ ಈ ಕಟ್ಟಡದಲ್ಲಿ ಗ್ರಂಥಾಲಯ ಕುಂಟುತ್ತಾ ಸಾಗಿದೆ.
ಯಾವುದೇ ಮೂಲಭೂತ ಸೌಲಭ್ಯ ಇಲ್ಲದಿದ್ದರೂ ಗ್ರಂಥಾಲಯ ಮಾತ್ರ ಸೂರ್ಯ ಮುಳುಗುವವರೆಗೆ ತೆರೆದಿರುತ್ತದೆ. ಏಕೆಂದರೆ ಈ ಗ್ರಂಥಾಲಯಕ್ಕೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೆಳಗ್ಗೆ 8 ರಿಂದ ಸಂಜೆ 6, ಹೆಚ್ಚೆಂದರೆ 6.30 ರೊಳಗೆ ಬಾಗಿಲು ಹಾಕಬೇಕು. ಕತ್ತಲಾದ ನಂತರ ಗ್ರಂಥಾಲಯದಲ್ಲೇನು ಕೆಲಸ. ಆದ್ದರಿಂದ ಈ ಗ್ರಂಥಾಲಯ ಇತರೆ ಶಾಖಾ ಗ್ರಂಥಾಲಯದಂತೆ ರಾತ್ರಿ 8 ರವರೆಗೆ ತೆರೆದಿರುವುದಿಲ್ಲ.
ಶೌಚಾಲಯವೇ ಇಲ್ಲ: ಇನ್ನು ಶೌಚಾಲಯದ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಬಯಲು ಶೌಚಾಲಯವಾಗಿದೆ. ಕುಡಿಯುವ ನೀರನ್ನು ಕೇಳುವಂತಿಲ್ಲ. ಇಂಥ ಸ್ಥಿತಿಯಲ್ಲಿ ಸರಗೂರು ಗ್ರಂಥಾಲಯ ಕೆಲಸ ಮಾಡುತ್ತಿದೆ. ಮುಂಚೆ ಈ ಗ್ರಂಥಾಲಯವು ಬೆಳಗ್ಗೆ 8 ರಿಂದ 11, ಸಂಜೆ 4 ರಿಂದ 8 ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಕೆಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನ ಕಾಲೇಜು ಮುಗಿದ ಬಳಿಕ ಗ್ರಂಥಾಲಯಕ್ಕೆ ತೆರಳಲು ಇಚ್ಛಿಸಿದ್ದರು. ಆದರೆ ಕಾಲೇಜು ಮುಗಿದ ಸಮಯಕ್ಕೆ ಗ್ರಂಥಾಲಯ ಬಾಗಿಲು ಹಾಕಿರುತಿತ್ತು. ಆದ್ದರಿಂದ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಬೆಳಗ್ಗೆ 8 ರಿಂದ ಕತ್ತಲಾಗುವವರೆಗೆ ಗ್ರಂಥಾಲಯ ಬಾಗಿಲು ತೆರೆದಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಈ ಮುಂಚೆ ಹುಣಸೂರು ಬೇಗೂರು ರಸ್ತೆಯಲ್ಲಿ ಗ್ರಂಥಾಲಯಕ್ಕಾಗಿ ನಿವೇಶನವೊಂದನ್ನು ಸರಗೂರು ಪಪಂ ನೀಡಿತ್ತು. ಆದರೆ ರಸ್ತೆ ಅಗಲೀಕರಣ ವೇಳೆ ಗ್ರಂಥಾಲಯಕ್ಕೆ ನೀಡಿದ ನಿವೇಶನದ ಕೆಲ ಭಾಗವನ್ನು ವಶಪಡಿಸಿಕೊಳ್ಳುವ ಸೂಚನೆ ದೂರಕಿದ ಬಳಿಕ ಗ್ರಂಥಾಲಯ ಪ್ರಾಧಿಕಾರದ ಅಧಿಕಾರಿಗಳು ಪಪಂ ಅಧಿಕಾರಿಗಳಿಗೆ ಪತ್ರ ಬರೆದು ಬೇರೆ ನಿವೇಶನಕ್ಕೆ ಮನವಿ ಸಲ್ಲಿಸಿದರು.
ಊರಾಚೆ ನಿವೇಶನ: ಈಗ ಊರಾಚೆ ನಿವೇಶನ ನೀಡಿದ್ದಾರೆ. ಅಲ್ಲಿ ಗ್ರಂಥಾಲಯ ನಿರ್ಮಾಣವಾದರೆ ಹೆಚ್ಚು ಮಂದಿಗೆ ಉಪಯೋಗವಾಗದು ಎಂಬ ಕಾರಣಕ್ಕೆ ಈಗಿರುವ ಗ್ರಂಥಾಲಯ ಕಟ್ಟಡ ಸೇರಿದಂತೆ ಸುತ್ತಲಿನ ನಿವೇಶನ ನೀಡುವಂತೆ ಅಥವಾ ಪಪಂ ಕಚೇರಿ ಆವರಣದಲ್ಲಿನ ನಿವೇಶನ ನೀಡುವಂತೆ ಕೋರಲಾಗಿದೆ. ಆದರೆ ಪಪಂ ಅಧಿಕಾರಿಗಳು ಮತ್ತು ಸದಸ್ಯರು ಆ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಆದಾಯ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರಬಹುದು ಎಂಬುದು ಸಾರ್ವಜನಿಕರ ಅನಿಸಿಕೆ.
ಒಟ್ಟಾರೆ ಸರಗೂರು ಪಪಂನಿಂದ 5 ಲಕ್ಷ ಗ್ರಂಥಾಲಯ ಸೆಸ್ ಬಾಕಿ ಇದೆ. ಈ ಗ್ರಂಥಾಲಯದಲ್ಲಿ 331 ಮಂದಿ ಸದಸ್ಯರಿದ್ದು, 7,169 ಪುಸ್ತಕ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.