ಮೈಸೂರು

ಜನತಾ ಬಡಾವಣೆ ಜನರ ನಿತ್ಯ ಬವಣೆ

Published On :

  ವಿಶೇಷ ವರದಿ
ಕ.ಪ್ರ.ವಾರ್ತೆ  ಮೈಸೂರು  ಜೂ. 20
ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಪಂಗೆ ಸೇರಿದ ಕುಂದನಹಳ್ಳಿಯಲ್ಲಿ ಜನತಾ ಬಡಾವಣೆ ನಿರ್ಮಾಣವಾಗಿ ಹದಿನೈದು ವರ್ಷಗಳೇ ಕಳೆದಿದ್ದರೂ ಇನ್ನೂ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಕಾಲ ಕೂಡಿ ಬಂದಿಲ್ಲ.
ಈ ಬಡಾವಣೆ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರವು ಮಾತುಮಾತಿಗೂ ಅಭಿವೃದ್ಧಿ ಮಂತ್ರ ಜಪಿಸುತ್ತದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿಯೇ ಬೇರೆ. ಕುಂದನಹಳ್ಳಿ ಜನತಾ ಬಡಾವಣೆಯಲ್ಲಿ 30 ಮನೆಗಳಿವೆ. ಒಂದು ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರವಿದೆ. ಕಳಪೆ ಕಾಮಗಾರಿಯಿಂದ ಅಂಗನವಾಡಿ ಕಟ್ಟಡದ ಗೋಡೆ ಶಿಥಿಲವಾಗಿದ್ದು, ಅದು ಯಾವಾಗ ಬೇಕಾದರೂ ಬೀಳಬಹುದು.
ಈ ಬಡಾವಣೆಯ ನಿವಾಸಿಗಳ ವೇದನೆ ಏನೆಂದರೆ, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದು. ಮಳೆ ನೀರು ಅಲ್ಲಿ ನಿಂತು ಸೊಳ್ಳೆಗಳ ಕಾಟ ಆರಂಭವಾಗುತ್ತದೆ. ನಿವಾಸಿಗಳು ತಾಪಂ, ಜಿಪಂ, ಜಿಲ್ಲಾಧಿಕಾರಿಯಲ್ಲಿ ನಡೆಯುವ ಜನಸ್ಪಂದನೆಯಲ್ಲಿ 10 ತಿಂಗಳು ಭಾಗವಹಿಸಿ ದೂರು ಸಲ್ಲಿಸಿದರೂ ಯಾವುದೆ ಕೆಲಸವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಭರವಸೆ ನೀಡಿ ಮತ ಕೇಳುತ್ತಾರೆ. ನಂತರ ಬಡಾವಣೆ ಕಡೆ ತಿರುಗಿ ನೋಡಿಲ್ಲ.
ಚುನಾವಣಾ ಆಯೋಗಕ್ಕೆ ದೂರು: ಬಡಾವಣೆಯ ಜಯಮ್ಮ ಶಿವಣ್ಣ ಎಂಬವರು ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೂ ಪತ್ರ ಬರೆದು, ತಾವು ಅನುಭವಿಸುತ್ತಿರುವ ವೇದನೆ ತಿಳಿಸಿದ್ದರು. ಆಯೋಗವು ಮೈಸೂರು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ರವಾನಿಸಿತು. ಈ ಆದೇಶ ಯಾವ ಮೂಲೆಗೆ ಬಿದ್ದಿದೆಯೋ ಗೊತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೂವರು ಮುಖ್ಯಮಂತ್ರಿಗಳಿಂದ ಆದೇಶ ಬಂತು. ಪ್ರಧಾನಿಯವರ ಕಾರ್ಯಾಲಯದಿಂದ 2012ರ ಜೂ.5 ಹಾಗೂ ಡಿ.12 ರಲ್ಲಿ ಆದೇಶ ಬಂತು. ಆದರೆ, ಈ ಎರಡು ಆದೇಶಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ.
ಈ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ಆದೇಶ ಬಂದಿದೆ. ಆದರೆ ಜಿಲ್ಲಾಡಳಿತದಿಂದ ಬಂದಿರುವುದು ಅರ್ಜಿದಾರರಿಗೆ ಹಿಂಬರಹದ ಮಾತ್ರ.
ಜಿಲ್ಲಾ, ತಾಲೂಕು, ಗ್ರಾಪಂ ಆಡಳಿತದ ಇಂಥ ವರ್ತನೆಯಿಂದ ಬೇಸತ್ತು ನಿವಾಸಿಗಳು ಏ.29 ರಂದು ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದಾರೆ. ಸೂಕ್ತ ಗಮನ ಹರಿಸುವಂತೆ ಮತ್ತು ಸಮಗ್ರ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಆದೇಶ ಮಾಡಿದೆ. ಈಗಲಾದರೂ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ಕೊಟ್ಟು ಕುಂದನಹಳ್ಳಿ ಜನತಾ ಬಡಾವಣೆಗೆ ರಸ್ತೆ, ಚರಂಡಿ, ವ್ಯವಸ್ಥೆ ಮಾಡುತ್ತಾರೆಯೇ?

ಶಾಲಾ ಕಾಂಪೌಂಡ್ ನಿರ್ಮಾಣ
ಸಮಾಧಾನದ ಸಂಗತಿ ಎಂದರೆ ಈ ಬಡಾವಣೆಯ ನಿವಾಸಿಗಳ ಸಮಸ್ಯೆಗಳ ಬಗ್ಗೆ ಕನ್ನಡಪ್ರಭದಲ್ಲಿ ಆಗಾಗ ವಿಶೇಷ ವರದಿಗಳನ್ನು ಪ್ರಕಟಿಸಲಾಯಿತು. ಪರಿಣಾಮ ಶಾಲಾ ಕಾಪೌಂಡ್ ಕಾಮಗಾರಿ ಮಂಜೂರಾಗಿದೆ.
ನಿರ್ಮಲ ಗ್ರಾಮ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದವರು ಗ್ರಾಮದ ಹಿರಿಯರಾದ ಶಿವಣ್ಣ. ಶೌಚಾಲಯ ನಿರ್ಮಿಸಿಕೊಂಡಿರುವ ಇನ್ನೂ ಕೆಲವರಿಗೆ ತಾಪಂ ಇಒ ಸಹಾಯಧನ ಬಿಡುಗಡೆಗೆ ಮೀನಮೇಷ ಎಣಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.