ರಮ್ಯಾ ರೆಸ್ಟೋರೆಂಟ್ ಸ್ಥಳಾಂತರ
ಕ.ಪ್ರ.ವಾರ್ತೆ , ಮೈಸೂರು , ಜೂ. 29
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದಿಯಾಗಿ ಬಹುತೇಕ ರಾಜಕಾರಣಿಗಳು, ಚಲನಚಿತ್ರ ನಟರು, ನಗರದ ಗಣ್ಯ ನಾಗರಿಕರು, ಮೈಸೂರಿಗೆ ಬರುವ ಪ್ರವಾಸಿಗರ ನೆಚ್ಚಿನ ಹೋಟೆಲ್ ಆಗಿದ್ದ ರಮ್ಯಾ ರೆಸ್ಟೋರೆಂಟ್ ನಗರದ ಡಾ.ಎಸ್. ರಾಧಾಕೃಷ್ಣನ್ ರಸ್ತೆಯಿಂದ ಸ್ಥಳಾಂತರಗೊಳ್ಳುತ್ತಿದೆ.
ಸರಿಸುಮಾರು 32 ವರ್ಷಗಳಷ್ಟು ಹಳೆಯದಾದ ಈ ರೆಸ್ಟೋರೆಂಟ್ ನಗರದ, ನಗರಕ್ಕೆ ಬರುವ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರಿಗೆ ಪ್ರವಾಸಿಗರು ಬಂದರೂ ಇದೇ ರೆಸ್ಟೋರೆಂಟ್ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದೆ, ಕಾಸ್ಮೋಪಾಲಿಟನ್ ಕ್ಲಬ್ಗೆ ಸೇರಿದ ಜಾಗದಲ್ಲಿದ್ದ ಈ ರೆಸ್ಟೋರೆಂಟ್ ಸ್ಥಳದ ಮಹಿಮೆ ಅಪಾರ. ಸಿನಿಮಾ ತಾರೆಯರಿಂದ ಹಿಡಿದು ರಾಜಕಾರಣಿಗಳ ತನಕ ಬಾಯಿ ರುಚಿ ತಣಿಸಿದ ಸ್ಥಳವಿದು. ಅದರಲ್ಲೂ ಮೈಸೂರಿನ ನಂಟಿರುವ ಪರ ಸ್ಥಳದ ಯಾರೇ ಆದರೂ ರಮ್ಯಾಗೊಂದು ಭೇಟಿ ಕೊಟ್ಟು ಹೋಗುತ್ತಿದ್ದರು. ಅಲ್ಲಿನ ಅವಲಕ್ಕಿ ಸೆಟ್ ದೋಸೆ, ಮಸಾಲೆ ದೋಸೆ- ಗಟ್ಟಿ ಚಟ್ನಿ, ಕ್ಯಾರೆಟ್ ಹಲ್ವ, ಇಡ್ಲಿ- ವಡೆ, ಕಾಫಿ, ಟೀ ಫೇಮಸ್.
ಎಲ್ಲರೂ ಬಂದು ಹೋಗಲು ಪ್ರಾಶಸ್ತ್ಯವಾಗಿದ್ದ, ವಾಹನ ನಿಲುಗಡೆಗೆ ವಿಶಾಲ ಜಾಗ ಹೊಂದಿದ್ದ ಈ ಸ್ಥಳದ ನಂಟನ್ನು ಹೋಟೆಲ್ ಕಳೆದುಕೊಳ್ಳಲಿದೆ. ಈಗ ನಗರದ ವಿವಿ ರಸ್ತೆಯ ಡಬಲ್ ಟ್ಯಾಂಕ್ ಎದುರಿಗೆ ದಿವಾನ್ಸ್ ರಸ್ತೆಯಲ್ಲಿರುವ ಕಟ್ಟಡಕ್ಕೆ ಈ ರೆಸ್ಟೋರೆಂಟ್ ಜು. 5ರಿಂದ ಸ್ಥಳಾಂತರವಾಗುತ್ತಿದೆ. ಜನಮನ್ನಣೆ ಪಡೆದಿದ್ದ ಈ ಹೋಟೆಲ್ ಮೈಸೂರಿನ ಒಂದು ಭಾಗವೇ ಆಗಿತ್ತು. ಪ್ರವಾಸಿಗರಿಗೆ ಅರಮನೆ, ಮೃಗಾಲಯ, ನಾಸ್ತಿಕರಿಗೆ ಚಾಮುಂಡಿಬೆಟ್ಟ ಹೇಗೋ ಹಾಗೆ ಬಾಯಿ ರುಚಿಯ ತಿಂಡಿ ಪೋತರಿಗೆ ರಮ್ಯಾ ಹಾಟ್ ಸ್ಪಾಟ್ ಆಗಿತ್ತು.
ಸುಗಮ ಸಂಗೀತ, ಟೆನ್ನಿಸ್ನಲ್ಲಿ ಆಸಕ್ತಿ ಹೊಂದಿದ್ದ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಬಂದು ಬೆಳಗ್ಗೆಯೇ ಹಾಜರಾಗುತ್ತಿದ್ದು ಇದೇ ರಮ್ಯಾಗೆ. ಇಲ್ಲಿಯೇ ತಿಂಡಿ ಕಾಫಿ ಮುಗಿಸಿ ಎದುರಿನ ಮಹಾರಾಜ್ ಟೆನ್ನಿಸ್ ಕೋಟ್ನಲ್ಲಿ ಟೆನ್ನಿಸ್ ಆಡುತ್ತಿದ್ದರು. ಅಧಿಕಾರ ಹೋಗಿ ಮೈಸೂರಿಗೆ ಭೇಟಿ ನೀಡಿದಾಗಲೂ ತಪ್ಪದೆ ಬಂದು ಹೋಗುತ್ತಿದ್ದರು. ಏನಾದರೂ ರಾಜಕೀಯ ಬೆಳವಣಿಗೆ ಬಗೆಗೆ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಬಂದಿಲ್ಲ. ಆದರೆ, ಪ್ರತಿಪಕ್ಷ ನಾಯಕರಾಗಿದ್ದಾಗ ಮೈಸೂರಿಗೆ ವಾರಾಂತ್ಯ ಭೇಟಿ ನೀಡಿದಾಗಲೆಲ್ಲಾ ಈ ಡ್ರೈವ್ ಇನ್ ರೆಸ್ಟೋರೆಂಟ್ನ ವಾಹನ ನಿಲುಗಡೆ ಜಾಗದಲ್ಲಿ ತಮ್ಮ ಅಧಿಕೃತ ಕಾರನ್ನು ನಿಲ್ಲಿಸಿಕೊಂಡು ಬೋಂಡಾ- ಸಾಂಬಾರ್ ರುಚಿ ನೋಡಿ, ಕಾಫಿ ಕುಡಿದು ಹೋಗುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

