ಮೈಸೂರು

ಸಿದ್ದರಾಮನಹುಂಡಿಯಲ್ಲಿ ಹಬ್ಬ

Published On :

ಕ.ಪ್ರ. ವಾರ್ತೆ   ಮೈಸೂರು   ಮೇ 10
ಹಬ್ಬ ಇಲ್ಲ, ಹರಿದಿನ ಇಲ್ಲ. ಆದರೂ ಊರ ತುಂಬೆಲ್ಲಾ ಸಂಭ್ರಮ - ಸಡಗರ. ತಮಟೆ ಸದ್ದಿನ ಹಿಮ್ಮೇಳದಲ್ಲಿ ಪಡ್ಡೆ ಹುಡುಗರೆಲ್ಲ ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರೆ ಊರಿನ ಮಧ್ಯದಲ್ಲಿದ್ದ ಸಿದ್ದರಾಮೇಶ್ವರ ದೇವಸ್ಥಾನದ ಮುಂದೆ ಪಟಾಕಿ ಸದ್ದು ಮೋರ್ಗರೆಯುತ್ತಿತ್ತು.
ಇಷ್ಟೊಂದು ಸಂಭ್ರಮಕ್ಕೆ ಕಾರಣವಿಷ್ಟೆ. ಮೈಸೂರಿನಿಂದ 25 ಕಿ.ಮೀ. ದೂರದ (ಟಿ. ನರಸೀಪುರ ಮಾರ್ಗ) ಸಿದ್ದರಾಮನಹುಂಡಿಯನ್ನು ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರುವುದು. ಊರಿಗೆ ಊರೇ ಸಂಭ್ರಮದ ಮಡುವಿನಲ್ಲಿ ಮುಳುಗಿತ್ತು. ಬೆಳಗ್ಗೆಯಿಂದ ಟಿವಿ ಪರದೆ ಮುಂದೆ ಕುಳಿತು ರಾಜ್ಯ ರಾಜಕೀಯದ ಗುಂಗಿನಲ್ಲಿದ್ದ ಗ್ರಾಮದ ಜನತೆ, ರಾಜ್ಯದ ಚುಕ್ಕಾಣಿಯನ್ನು ನಮ್ಮೂರಿನ ಸಿದ್ದರಾಮಯ್ಯ ಹಿಡಿಯುತ್ತಾರೆ ಎಂದು ಗೊತ್ತಾದ ಕೂಡಲೇ ಊರ ಮುಂದಿನ ಅರಳಿ ಮರ, ಸಿದ್ದರಾಮೇಶ್ವರ ದೇವಸ್ಥಾನದ ಪಡಸಾಲೆ, ಬೀದಿ ಬೀದಿಯ ಅಂಗಡಿಗಳ ಮೂಲೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಾರೆ ಎಂದ ಕೂಡಲೇ ಕೆಲವರು ದೇವರಾಜ ಅರಸು ಕಾಲದ ಮಾತನಾಡುತ್ತಿದ್ದರು. ಮತ್ತೆ ಕೆಲವರು ದೇವೇಗೌಡರೆ, ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಮಾಡಿದ್ದರೆ ಜೆಡಿಎಸ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಿದ್ದರು. ಮತ್ತೆ ಹಲವರು ತಾಪಂ ಚುನಾವಣೆಯಲ್ಲೂ ನಿಲ್ಲದ ಕಾ.ಪು. ಸಿದ್ದಲಿಂಗಸ್ವಾಮಿ, ಸಿದ್ದರಾಮಯ್ಯನ ಎದುರಿಗೆ ನಿಂತಿದ್ದು ಮೊದಲ ತಪ್ಪು ಎನ್ನುತ್ತಿದ್ದರು.
ರಸ್ತೆ ರಸ್ತೆಗಳಲ್ಲಿ ತಮಟೆ: ಹೀಗೆ ರಾಜಕೀಯ ವಿಶ್ಲೇಷಣೆಯಲ್ಲಿ ತೊಡಗುತ್ತಿರುವಂತೆಯೇ ಊರಿನ ಕೆಲ ಯುವಕರು ಮೈಗೆಲ್ಲ ಬಣ್ಣ ಬಳಿದುಕೊಂಡು ರಸ್ತೆ ರಸ್ತೆಗಳಲ್ಲಿ ತಮಟೆ ತಾಳಕ್ಕೆ ಕುಣಿಯುತ್ತಿದ್ದರು. ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಸಮೀಪದಲ್ಲೆ ಇದ್ದ ಸಿದ್ದರಾಮಯ್ಯ ಅವರ ಮೂಲ ಮನೆ ಬಳಿ ನೆರೆಯಿತು. ಸುತ್ತಲಿನ ಮನೆಯವರು, ಮಹಿಳೆಯರು, ಮಕ್ಕಳೆಲ್ಲಾ ಯಾವುದೋ ದೇವರ ಉತ್ಸವ ನೋಡುವಂತೆ ಆ ಸಂಭ್ರಮ ಸವಿದರು. ಪಟಾಕಿ ಸಿಡಿಸಿದಾಗ ಜೈಕಾರ ಕೂಗಿದರು.
ಸಂಜೆ 5ರ ವೇಳೆಗಾಗಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಅಧಿಕೃತ ಘೋಷಣೆ ಹೊರ ಬರುತ್ತಿದ್ದಂತೆಯೇ ಮನೆ ಒಳಗೆ ಟಿವಿ ಮುಂದೆ ಸೇರಿದ್ದ ಜನರೆಲ್ಲಾ ಸಿದ್ದರಾಮಯ್ಯನವರ ಸಹೋದರರು ಇರುವ ಹಳೆಯ ಮತ್ತು ಹೊಸ ಮನೆ ಬಳಿ ಜಮಾಯಿಸ ತೊಡಗಿದರು. ಅವರ ಮನೆ ಬಳಿಗೆ ಪೊಲೀಸ್ ಪೇದೆ ಸಹ ಬಂದರು. ಸಿದ್ದರಾಮಯ್ಯನವರ ಸಹೋದರರಾದ ಸಿದ್ದೇಗೌಡ ಮತ್ತು ರಾಮೇಗೌಡರು ತಮಗಾದ ಸಂತೋಷವನ್ನು ಎಲ್ಲರೊಡನೆ ಹಂಚಿಕೊಂಡರು. ಅವರ ಕುಟುಂಬದ ಮಹಿಳೆಯರೆಲ್ಲ ಮನೆಯಿಂದ ಹೊರಗೆ ಬಾರದಿದ್ದರೂ ಮನಸ್ಸಿನಲ್ಲಿಯೆ ಸಂಭ್ರಮಿಸಿದ್ದರು. ಮೊಮಕ್ಕಳೆಲ್ಲ ಸಂತೋಷದಿಂದ ಆಟ ಆಡುತ್ತ, ಐಸ್‌ಕ್ರೀಂ ತಿನ್ನುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಾರೆ ಎಂದಾಗಲೂ ಅವರ ಮನೆಯವರಲ್ಲಿ ಯಾವುದೆ ಹಮ್ಮುಬಿಮ್ಮು ಕಾಣಲಿಲ್ಲ.

- ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.