ಮನೆ ಬಿಟ್ಟವರು ಮಸಣ ಸೇರಿದರು...
ಬಿ. ಶೇಖರ್ ಗೋಪಿನಾಥಂ
ಮೈಸೂರು: ಕಳೆದ ಎರಡು ವರ್ಷಗಳಲ್ಲಿ 5 ಕೊಲೆ, ಇಬ್ಬರು ಆರೋಪಿಗಳು ಬಂಧನ.
- ಇದು ಸದ್ಯಕ್ಕೆ ಮೈಸೂರಿನಲ್ಲಿ ಸುದ್ದಿ ಮಾಡಿರುವ ಸಂಗತಿ. ಹಾಗಾದರೆ ಕೊಲೆಯಾದವರು ಹಾಗೂ ಬಂಧಿತ ಆರೋಪಿಗಳು ಯಾರು, ಇದರ ಬೆನ್ನತ್ತಿದ ಪೊಲೀಸರಿಗೆ ಎಲ್ಲರೂ ಮನೆ ಬಿಟ್ಟವರು, ಕುಟುಂಬದವರಿಂದ ತಿರಸ್ಕರಿಸಲ್ಪಟ್ಟವರು ಎಂಬ ಅಂಶ ಬೆಳಕಿಗೆ ಬಂದಿದೆ.
ಕೊಲೆಯಾದ 5 ಮಂದಿ ಹಾಗೂ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳು ಮನೆ ಬಿಟ್ಟು ಬಂದವರು. ಕೆಲವರು ತಮ್ಮ ಕುಟುಂಬದವರಿಂದ ತಿರಸ್ಕರಿಸಲ್ಪಟ್ಟವರು. ಹಲವು ಕಾರಣಗಳಿಂದ ಮನೆ ಬಿಟ್ಟು ಬಂದವರು, ಕುಟುಂಬದಿಂದ ದೂರವಾದವರು ಈಗ ದುರಂತ ಅಂತ್ಯ ಕಂಡಿದ್ದಾರೆ. ಸಣ್ಣ- ಪುಟ್ಟ ವಿಚಾರಕ್ಕೆ ಜಗಳ, ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗಳು ಈಗ ಜೈಲು ಸೇರಿದ್ದಾರೆ.
ಇಬ್ಬರ ಸೆರೆ: ನಂಜನಗೂಡಿನ ತ್ರಿಮೂರ್ತಿ, ಕೆ.ಆರ್. ನಗರ ನಿವಾಸಿಗಳಾದ ಲತಾ, ಚಾಂದ್ ಷರೀಫ್, ಗುಂಡ್ಲುಪೇಟೆ ಬೂದನೂರಿನ ಬಸವಶೆಟ್ಟಿ ಮತ್ತು ಹೊಳೆನರಸೀಪುರ ನಿವಾಸಿ ಸೋಮಾಚಾರಿ ಕೊಲೆಯಾದವರು. ಈ ಐದು ಮಂದಿ ಹಲವು ಕಾರಣಗಳಿಂದ ಮನೆಬಿಟ್ಟು ಬಂದಿದ್ದರು ಹಾಗೂ ಕುಟುಂಬದರಿಂದ ತಿರಸ್ಕರಿಸಲ್ಪಟ್ಟವರಾಗಿದ್ದಾರೆ.
ಬಂಧಿತ ಆರೋಪಿಗಳಾದ ಮೈಸೂರಿನ ಶಾಂತಿನಗರ ನಿವಾಸಿ ಕೈಸರ್ ಮತ್ತು ಎನ್.ಆರ್. ಮೊಹಲ್ಲಾ ಕುರಿಮಂಡಿ ನಿವಾಸಿ ಹರೀಶ ಸಹ ಕುಟುಂಬದವರಿಂದ ಕಡೆಗಣಿಸಲ್ಪಟ್ಟವರಾಗಿದ್ದಾರೆ.
ಕೈಸರ್ ಆರ್ಎಂಸಿಯಲ್ಲಿ ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಚಾಂದ್ ಷರೀಫ್, ಲತಾ, ಬಸವಶೆಟ್ಟಿ, ಸೋಮಾಚಾರಿ ಮತ್ತು ತ್ರಿಮೂರ್ತಿ ಎಂಬವರೊಂದಿಗೆ ಕೈಸರ್ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕದಲ್ಲಿದ್ದ. ಇವರ ಮಧ್ಯೆ ಹಣಕಾಸು ಹಾಗೂ ಇನ್ನಿತರ ಕಾರಣಗಳಿಗೆ ಉಂಟಾದಾಗ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೊಲೆಯಾದವರು ಮತ್ತು ಕೈಸರ್ ಒಟ್ಟಿಗೆ ಮದ್ಯ, ಸಲ್ಯೂಷನ್ ಸೇವಿಸುತ್ತಿದ್ದರು. ಇದರಿಂದ ಮತ್ತು ಹೆಚ್ಚಾಗಿ, ಸಣ್ಣ- ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಆ ಸಮಯದಲ್ಲಿ ಕೈಸರ್ ಜೊತೆಗಿದ್ದವರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡುತ್ತಿದ್ದ. ನಂತರ ಕೊಲೆಯಾದವರ ಜೇಬಿನಲ್ಲಿದ್ದ ಚಿಲ್ಲರೆ ಅಂದರೆ 50- 100 ತೆಗೆದುಕೊಂಡು ಪರಾರಿಯಾಗುತ್ತಿದ್ದ.
ಮತ್ತೊಬ್ಬ ಆರೋಪಿ ಹರೀಶ ಎಂಬಾತನು ತ್ರಿಮೂರ್ತಿಯನ್ನು ಕೊಲೆ ಮಾಡಲು ಕೈಸರ್ಗೆ ಸಹಕರಿಸಿದ್ದಾನಷ್ಟೇ. ಎಲ್ಲಾ 5 ಕೊಲೆಗಳನ್ನು ಮಾಡಿದವ ಕೈಸರ್.
ಪ್ರಜ್ಞೆ ಇರುತ್ತಿರಲಿಲ್ಲ...: ಕೈಸರ್ ಸಲ್ಯೂಷನ್, ಎರಸರ್ ಅಂತಹ ವಸ್ತುಗಳನ್ನು ಬಟ್ಟೆಯಲ್ಲಿ ಹಾಕಿ ವಾಸನೆಯನ್ನು ಹೀರುತ್ತಿದ್ದ. ಇದರಿಂದ ಆತನಿಗೆ ಮತ್ತು ಬರುತ್ತಿತ್ತ. ಈ ವೇಳೆ ತಾನು ಏನು ಮಾಡುತ್ತೇನೆಂಬುದು ಆತನಿಗೆ ಗೊತ್ತಾಗುತ್ತಿರಲಿಲ್ಲ. ಮದ್ಯ, ಸಲ್ಯೂಷನ್ ಮತ್ತಿನಲ್ಲಿ ಜೊತೆಗಿದ್ದವರ ಜೊತೆ ಜಗಳವಾಡಿ ಕೊಲೆ ಮಾಡಿದ್ದಾನೆ.
ನಗರದಲ್ಲಿ ಸಲ್ಯೂಷನ್, ಎರಸರ್ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಲ್ಯೂಷನ್ ಚಟಕ್ಕೆ ಬಲಿಯಾಗಿರುವವರನ್ನು ಗುರುತಿಸಿ, ಸ್ವಯಂಸೇವಾ ಸಂಸ್ಥೆಗಳ ಮೂಲಕ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸುವುದಾಗಿ ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

