ಕಳಪೆ ಕಾಮಗಾರಿ ಕೇಳೋರಿಲ್ಲ!
ಕ.ಪ್ರ.ವಾರ್ತೆ ಕೆ.ಆರ್. ನಗರ ಅ. 6
ತಾಲೂಕಿನ ಅನೇಕ ಕಡೆ ರಸ್ತೆಗಳು ಗುಂಡಿಬಿದ್ದು ಹಾಳಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಲೋಕೋಪಯೋಗಿ ಇಲಾಖೆಯು ಕೈಗೊಂಡಿರುವ ಗುಂಡಿ ಮುಚ್ಚುವ ಕಾಮಗಾರಿಯು ಕಳಪೆಯಿಂದ ನಡೆಯುತ್ತಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೇಳುವವರು ಕೇಳುವವರು ಇಲ್ಲದಂತಾಂಗಿದೆ.
ಮಂಚನಹಳ್ಳಿಯಿಂದ- ಮಿರ್ಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದ್ದು ಗುತ್ತಿಗೆದಾರ ತನಗಿಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ. ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ರಸ್ತೆಯ ಎಲ್ಲಾ ಗುಂಡಿಗಳನ್ನು ಮುಚ್ಚುವ ಬದಲು ಕೆಲವು ಗುಂಡಿಗಳನ್ನು ಮಾತ್ರ ಮುಚ್ಚುತ್ತಿದ್ದು ಇದನ್ನು ಯಾರೂ ಕೇಳುತ್ತಿಲ್ಲ. ಇದರಿಂದ ಕಳೆದ ವಾರ ಮುಚ್ಚಿದ ಗುಂಡಿಗಳು ಮಿರ್ಲೆ ಗ್ರಾಮದ ಬಳಿ ಡಾಂಬರು ಕಿತ್ತು ಬಂದಿವೆ. ಆದರೂ ಜನಪ್ರತಿನಿಧಿಗಳು ಈ ಕಳಪೆ ಕಾಮಗಾರಿ ನಿಲ್ಲಿಸಿಲ್ಲ.
ಕಳಪೆ ಕಾಮಗಾರಿ: ಸಾಲಿಗ್ರಾಮದಿಂದ- ದೇವಿತಂದ್ರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕರ್ಪೂರವಳ್ಳಿ ಬಳಿ ಗುಂಡಿ ಮುಚ್ಚುವ ಕಾಮಗಾರಿ ಎರಡು ದಿನಗಳಿಂದ ನಡೆಯುತ್ತಿದ್ದು, ಇಲಾಖೆಯ ಎಂಜಿನಿಯರುಗಳಾಲಿ, ಗುತ್ತಿಗೆದಾರರಾಗಲಿ ಇರದೆ ಕಾರ್ಮಿಕರನ್ನೇ ಬಿಟ್ಟು ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ದೊಡ್ಡ ಗುಂಡಿಗಳನ್ನು ಮುಚ್ಚದೆ ಕೇವಲ ಸಣ್ಣ- ಪುಟ್ಟ ಗುಂಡಿಗಳನ್ನು ಕಳಪೆಯಾಗಿ ಮುಚ್ಚುತ್ತಿದ್ದಾರೆ.
ಈ ಅಕ್ರಮಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದ್ದು ಲೋಕೋಪಯೋಗಿ ಸಚಿವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕೆಲಸ ನಡೆಯುತ್ತಿದ್ದರೂ ಯಾವ ಮೇಲಧಿಕಾರಿಗಳು ಗಮನಹರಿಸದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕ್ಷೇತ್ರದ ಶಾಸಕರು ಕೂಡಲೇ ತಾಲೂಕಿನಾದ್ಯಂತ ನಡೆಯುತ್ತಿರುವ ಲೋಕೋಪಯೋಗಿ ಇಲಾಖೆಯ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳ ಕೆಲಸದ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ನಡೆಯಲು ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕುಪ್ಪೆ ಮಹದೇವಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

