ಅರಮನೆ ಅಂಗಳದಲ್ಲಿ ಜನಪದ ಝೇಂಕಾರ
ಕ.ಪ್ರ.ವಾರ್ತೆ ಮೈಸೂರು ಅ. 7
ದಸರಾ ಮಹೋತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಮುಖ್ಯ ವೇದಿಕೆಯಲ್ಲಿ ಸೋಮವಾರ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಜಾನಪದ ಗೀತೆಗಳ ಗಾಯನ ನಡೆಸಿಕೊಟ್ಟರು.
ಚೆಲ್ಲಿದರೂ ಮಲ್ಲಿಗೆಯ... ಎಂಬ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಮಹದೇಶ್ವರ ದಯಬಾರದೇ ಬರಿದಾದ ಬಾಳಲ್ಲಿ, ಎಲ್ಲೋ ಜೋಗಪ್ಪ ನಿನ್ನರಮನೆ ಹಾಗೂ ತಿಂಗಳು ಮುಳುಗಿದವು ರಂಗೋಲಿ ಬೆಳಗಿದವು ತಾಯಿ ಚಾಮುಂಡಿಯಾ.. ಎಂಬ ಗೀತೆಗಳನ್ನು ಹಾಡಿ ಸಭಿಕರ ಪ್ರಶಂಸೆಗೆ ಪಾತ್ರರಾದರು. ಸಹ ಗಾಯಕಿಯರು ಹಾಗೂ ಪಕ್ಕ ವಾದ್ಯದ ಕಲಾವಿದರು ಸಾಥ್ ನೀಡಿದರು.
ಈ ಗಾಯಕರಿಗೆ ಕೇವಲ ಅರ್ಧಗಂಟೆ ಮಾತ್ರ ಅವಕಾಶ ಕೊಟ್ಟಿದ್ದ ಕಾರಣ 4 ಗೀತೆಗಳನ್ನು ಮಾತ್ರ ಹಾಡಲು ಸಾಧ್ಯವಾಯಿತು. ಮಹದೇವಸ್ವಾಮಿ ಅವರ ಗೀತೆಗಳನ್ನು ಕೇಳಲು ಆಗಮಿಸಿದ್ದ ಸಂಗೀತ ಪ್ರಿಯರು ಇನ್ನೊಂದೆರಡು ಹಾಡು ಹಾಡಲಿ ಎಂದು ಒತ್ತಾಯಿಸಿದ್ದು ಕೇಳಿಬಂತು.
ಬಿಹು ನೃತ್ಯ: ನಂತರ ನಾರ್ಥ್ ಈಸ್ಟ್ ಕಲ್ಚರಲ್ ಸೆಂಟರ್ ತಂಡದವರು ಬಿಹು ನೃತ್ಯ ಪ್ರದರ್ಶಿಸಿದರು. ಈಶಾನ್ಯ ರಾಜ್ಯಗಳ ಈ ಕಲಾವಿದರು ಅಲ್ಲಿನ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ತಮ್ಮ ದೇಶೀಯ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನರ್ತಿಸಿದರು. ಈ ಬಿಹು ನೃತ್ಯವು ಅಲ್ಲಿನ ಹಬ್ಬವೂ ಹಾಗೂ ಜನಪದ ನೃತ್ಯ ಪ್ರಕಾರವೂ ಆಗಿದ್ದು, ಯುವಕ ಹಾಗೂ ಯುವತಿಯರ ತಂಡ ನೃತ್ಯ ಪ್ರದರ್ಶಿಸಿತ್ತು.
ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಿಂದೂಸ್ತಾನಿ ಸಂಗೀತದ ಜತೆಗೆ ಅವರು ವಚನಗಳನ್ನು ಹಾಡಿದರು. ಮುಂಬೈನ ಲೂಯಿಸ್ ತಂಡದವರು ಫ್ಯೂಷನ್ ಸಂಗೀತ ಅರಮನೆ ಆವರಣದಲ್ಲಿ ಅಬ್ಬರಿಸಿತು.
ವಿವಿಧೆಡೆ ಕಾರ್ಯಕ್ರಮ: ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಲಾರದ ಎನ್.ಆರ್. ಜ್ಞಾನಮೂರ್ತಿ ವಚನ ಗಾಯನವನ್ನೂ, ಚಿತ್ರದುರ್ಗದ ಶಿವಪ್ರಕಾಶ್ ತಂಡದವರು ಶಾಸ್ತ್ರೀಯ ನೃತ್ಯವನ್ನೂ ಹಾಗೂ ತಲಕಾಡಿನ ವೈಷ್ಣವಿ ಹಾನಗಲ್ ಶಾಸ್ತ್ರೀಯ ಸಂಗೀತ ಗಾಯನಸುಧೆ ಹರಿಸಿದರು.
ನಜರ್ಬಾದಿನ ಕುಪ್ಪಣ್ಣ ಪಾರ್ಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರಿನ ವೀರಭದ್ರಸ್ವಾಮಿ ಮತ್ತು ತಂಡದವರು ಸುಗಮ ಸಂಗೀತವನ್ನು ನಡೆಸಿಕೊಟ್ಟರೆ, ಬೆಂಗಳೂರಿನ ರಾಜಶ್ರೀ ಮತ್ತು ತಂಡದವರು ನೃತ್ಯ ರೂಪಕ ಪ್ರದರ್ಶಿಸಿದರು.
ವಿನೋಬ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನವರಾದ ಎಂ.ಎನ್. ಗಿರೀಶ್ ಅವರಿಂದ ನಾದಸ್ವರ ವಾದನ, ರಮಾ ಜಗದೀಶ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ನಾಟ್ಯಾಂಜನ ಸಂಸ್ಥೆ ವಿದ್ಯಾರ್ಥಿನಿಯರ ನೃತ್ಯರೂಪಕ ನಡೆಯಿತು. ಶಿವರಾಂಪೇಟೆಯ ಚಿಕ್ಕ ಗಡಿಯಾರ ವೃತ್ತದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ನಂಜನಗೂಡಿನ ಕಳಲೆ ಮಹೇಶ್ ತಂಡದವರು ಕಂಸಾಳೆ ಹಾಗೂ ಬೆಂಗಳೂರಿನ ನಾಗೇಂದ್ರ ವೃಂದದವರು ಜಾನಪದ ಗೀತೆಗಳನ್ನು ಹಾಡಿದರು.
ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕುಷ್ಟಗಿ ಬೀರಲಿಂಗೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲಾವಿದರು ಡೊಳ್ಳು ಕುಣಿತವನ್ನೂ, ದೆಹಲಿಯ ಪದ್ಮಶ್ರೀ ಉದಯ್ ಮಲ್ಲಿಕ್ ತಂಡದವರು ಹಿಂದೂಸ್ತಾನಿ ಸಂಗೀತವನ್ನೂ ಹಾಗೂ ಬೆಂಗಳೂರಿನ ನಾಟೇಶ್ವರ ನೃತ್ಯಶಾಲೆ ಕಲಾವಿದರು ಗೊಂಬೆ ನೃತ್ಯ ಪ್ರದರ್ಶಿಸಿದರು.
ಪುರಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿ ತಂಡದವರು ಧರ್ಮದೇವತೆ ಸಾಮಾಜಿಕ ನಾಟಕವನ್ನೂ ಹಾಗೂ ಮೈಸೂರಿನ ಎಸ್. ವಸಂತ ಕೃಷ್ಣ ತಂಡದವರು ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಅಭಿನಯಿಸಿದರು. ರಂಗಾಯಣದ ಭೂಮಿಗೀತದಲ್ಲಿ ನವರಾತ್ರಿ ರಂಗೋತ್ಸವದ ಅಂಗವಾಗಿ ಆರ್. ನಾಗೇಶ್ ನಿರ್ದೇಶನದಲ್ಲಿ ಕೃಷ್ಣೇಗೌಡ್ರ ಆನೆ ನಾಟಕ ಪ್ರದರ್ಶಿಸಲಾಯಿತು. ಸರಸ್ವತಿಪುರಂನ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ನಟನ ತಂಡ ಆಯೋಜಿಸಿರುವ ದ್ವಾದಶ ರಂಗೋತ್ಸವದ ಅಂಗವಾಗಿ ಮಂಡ್ಯ ರಮೇಶ್ ನಿರ್ದೇಶನದಲ್ಲಿ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

