ಮೈಸೂರು

ಮೂಢನಂಬಿಕೆ ಬಿಟ್ಟು ಬದುಕಲಿ

Published On :

ಕ.ಪ್ರ.ವಾರ್ತೆ    ಹುಣಸೂರು    ಅ. 7
ತಳ ಸಮುದಾಯ ಮತ್ತು ಅಲೆಮಾರಿ ಜನಾಂಗದವರು ತಮ್ಮ ಮೂಢನಂಬಿಕೆಗಳಿಗೆ ತಿಲಾಂಜಲಿ ಇಟ್ಟು, ಮನ ಪರಿವರ್ತನೆ ಮಾಡಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದು ಜಾನಪದ ತಜ್ಞ ಡಾ. ಕೃಷ್ಣಮೂರ್ತಿ ಹನೂರು ಹೇಳಿದರು ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಪುಣ್ಯಭೂಮಿ ಹಾಸ್ಟೆಲ್ ಹಳೇ ವಿದ್ಯಾರ್ಥಿಗಳ ವೇದಿಕೆ, ಹುಣಸೂರು ಉಪವಿಭಾಗ ಮತ್ತು ಪ್ರಗತಿಪರ ಚಿಂತಕರ ಬಳಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುಪ್ಪೆ ನಾಗರಾಜು ಅವರ ಕೃತಿ ಅಲೆಮಾರಿಯ ಅಂತರಂಗ-ಅವಲೋಕನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೊಂಬಿದಾಸರು, ವಿಳಾಸವಿಲ್ಲದವರು, ದಾಖಲಾತಿ ಇಲ್ಲದವರು, ಭೂಮಿ ಕೊಟ್ಟರೆ ಬೇಡ ಎಂದು ತಂಬೂರಿ ಹೊತ್ತು ಒಡಾಡಿದರು. ದೀಕ್ಷೆ ತೆಗೆದುಕೊಂಡು ವಚನಕಾರರ ಕೃತಿಯನ್ನ ಅರಗಿಸಿಕೊಂಡವರಂತೆ ಗಾಯನದ ಮೂಲಕ ಸಮಾಜಕ್ಕೆ ತಿಳಿಸುತ್ತಿದ್ದಾರೆ. ರಾಜಕಾರಣದ ಒತ್ತೆ- ಸತ್ತೆ ತಿಳಿಯದ ಇವರ ಜೀವನ ಕ್ರಮ ಅರಿಯದೆ ಅಲೆಮಾರಿಗಳ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೆ ಹಣವಿಟ್ಟರೆ ಪ್ರಯೋಜನವಿಲ್ಲ. ಅವರಲ್ಲಿ ಮನಃಪರಿವರ್ತನೆಯಾಗದೆ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಚಿಂತಿಸುವುದು ಅತ್ಯಗತ್ಯವಿದೆ ಎಂದರು.
ಕೃತಿಯಲ್ಲಿ ಕುಪ್ಪೆ ನಾಗರಾಜು ಅವರ ಬದುಕು, ಬವಣೆಯನ್ನು ಬೇಸರ, ಅಹಂಕಾರವಿಲ್ಲದೆ, ದ್ವೇಷ ತೋರ್ಪಡಿಸದೆ ಎಲ್ಲವನ್ನೂ ದಾಖಲಿಸಿದ್ದಾರೆ. ಪುಸ್ತಕವು ಸಮಾಜದ ಕಣ್ಣು ತೆರೆಸಲಿದೆ. ಕನ್ನಡದಲ್ಲಿ ಬಂದ ಆತ್ಮಕಥೆಯು ಒಳ್ಳೆಯ ಪುಸ್ತಕವೆಂದು ಶ್ಲಾಘಿಸಿದರು.
ಹೋರಾಟ ತಿಳಿದಿಲ್ಲ: ಪ್ರಗತಿಪರ ಚಿಂತಕ ಇಂದೂಧರ ಹೊನ್ನಾಪುರ ಮಾತನಾಡಿ, ಅಲೆಮಾರಿಗಳು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಯಾರಿಗೂ ತಿಳಿದಿಲ್ಲ. ಕುಪ್ಪೆ ನಾಗರಾಜರ ಪುಸ್ತಕ ಇಂದಿನ ಸಮಾಜದವರ ಕಣ್ಣು ತೆರೆಸುವ ಪುಸ್ತಕವಾಗಿದೆ. ಅವರ ಹೋರಾಟದ ಬದುಕು ಅನನ್ಯವಾದದು. ದಲಿತ ಚಳುವಳಿಗಳು ಇಂದು ಜಾತೀಯತೆಯಲ್ಲಿ ತೊಡಗಿರುವುದು ನೋವಿನ ಸಂಗತಿಯಾಗಿದೆ ಎಂದರು. ಅಲೆಮಾರಿಗಳು ಮತ್ತು ರಾಜಕೀಯ ಕುರಿತು ಮಾತನಾಡಿದ ಡಾ.ಮುಜಾಫರ್ ಅಸಾದಿ, ಕರ್ನಾಟಕದಲ್ಲಿ 38ಕ್ಕೂ ಹೆಚ್ಚು ವಿವಿಧ ರೀತಿಯ ಅಲೆಮಾರಿ ಜನಾಂಗಗಳಿದ್ದು, ಸರ್ಕಾರ ಇವರನ್ನು ನಿರ್ದಿಷ್ಟ ಗಿರಿಜನ ಪಂಗಡವೆಂದು ಗುರುತಿಸಬೇಕು. ಎಲ್ಲೆಡೆ ಇವರ ಬಗೆಗಿನ ಮಾಹಿತಿ ದಾಖಲಿಸಬೇಕು. ಅಧಿಕೃತವಾಗಿ ಗುರುತಿಸಿ ನಾಗರಿಕ ಸೌಲಭ್ಯದ ಜತೆಗೆ ರಾಜಕೀಯ ಅಧಿಕಾರ ನೀಡಬೇಕು. ರಾಜ್ಯದ ಶೇ.31 ಅಲೆಮಾರಿ ಜನಾಂಗದ ಕುಟುಂಬಗಳಿಗೆ ಸೂರಿಲ್ಲ. ಅಲೆಮಾರಿಗಳ ಇಂತಹ ಸಂದಿಗ್ಧ ಜೀವನದ ಸಮಯದಲ್ಲಿ ಬಂದಿರುವ ಈ ಕೃತಿ ಮನಮುಟ್ಟುವಂತಿದೆ ಎಂದರು.
ಇದೇ ವೇಳೆ ಕೃತಿಕಾರ ಕುಪ್ಪೆ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಕೃಷಿಕ ಮತ್ತು ಸಂಸ್ಕೃತಿ ಚಿಂತಕ ಕ್ಷೀರಸಾಗರ, ತಂಬಾಕು ಮಂಡಳಿ ಸದಸ್ಯ ಭೀಮನಹಳ್ಳಿ ಮಹದೇವ್, ಜೆ. ಮಹದೇವ್, ಮಾಧುಪ್ರಸಾದ್, ಭಾಷಾ ತಜ್ಞ ಕಿಕ್ಕೇರಿ ನಾರಾಯಣ್, ಮೋದೂರು ಮಹೇಶಾರಾಧ್ಯ, ಶ್ರೀಕಾಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.