ರಂಗದ ಮೇಲೆ ಚಾಮಚೆಲುವೆ
ಮಾ. ವೆಂಕಟೇಶ್
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಟನ ಸಂಸ್ಥೆಯು ಆಯೋಜಿಸಿರುವ ದ್ವಾದಶ ನಾಟಕೋತ್ಸವದಲ್ಲಿ ಚಾಮಚೆಲುವೆ ಅಭಿನಯಕ್ಕೆ ಕಲಾವಿದರು ತಾಲೀಮು ನಡೆಸಿದ್ದಾರೆ.
ಈಗಾಗಲೇ ಚಾಮಚೆಲುವೆ ನಾಟಕದ ಕಥೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಬಾರಿ ಪ್ರಚಾರ ಪಡೆದಿತ್ತು. ಅದಾದ ನಂತರ ಮೈಸೂರಿನಲ್ಲಿ ಈ ನಾಟಕ ರಂಗಪ್ರಯೋಗವಾಗಿರಲಿಲ್ಲ. ಇದೀಗ ದ್ವಾದಶ ರಂಗೋತ್ಸವದ ಅಂಗವಾಗಿ ಅ.13ರಿಂದ ನಾಲ್ಕು ದಿನಗಳ ಕಲಾ ಸರಸ್ವತಿಪುರಂನ ವಿಜಯ ವಿಠಲ ಕಾಲೇಜಿನಲ್ಲಿ ನಾಟಕ ನಡೆಯಲಿದೆ.
ನಾಡಿನ ಅಧಿದೇವತೆಯೂ ಹಾಗೂ ಯದುವಂಶಸ್ಥರ ಕುಲದೇವತೆಯೂ ಆಗಿರುವ ಚಾಮುಂಡೇಶ್ವರಿ ಹಾಗೂ ನಂಜನಗೂಡು ನಂಜುಂಡ ಮತ್ತು ಉತ್ತನಹಳ್ಳಿ ಮಾರಮ್ಮ ಅವರ ನಡುವೆ ನಡೆಯುವ ಜನಪದ ಕಥಾನಕವನ್ನು ಒಳಗೊಂಡಿರುವ ಈ ಪ್ರಯೋಗಕ್ಕಾಗಿ ವಿಶೇಷ ಉಡುಗೆ ತೊಡುಗೆಗಳು ಹಾಗೂ ರಂಗ ಪರಿಕರಗಳನ್ನು ತಯಾರಿಸಿ ಅದ್ಭುತ ಪ್ರಯೋಗಕ್ಕೆ ಸಿದ್ಧವಾಗಿದೆ. ಸುಮಾರು 40 ಮಂದಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಜನಪದ ಮೂಲ ಧಾಟಿಯ ಹಾಡುಗಳನ್ನು ಇಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ಲೇಖಕಿ ಸುಜಾತ ಅಕ್ಕಿ ಅವರು ರಚಿಸಿರುವ ಚಾಮಚೆಲುವೆ ನಾಟಕ ಕೃತಿ ಈಗಾಗಲೇ ಪ್ರಕಟವಾಗಿದ್ದು, ಅದನ್ನು ಆಧರಿಸಿ ನಾಟಕ ಅಭಿನಯಿಸಲಾಗುತ್ತಿದೆ ಎನ್ನುತ್ತಾರೆ ನಟನ ನಿರ್ದೇಶಕ ಮಂಡ್ಯ ರಮೇಶ್.
ಹಿರಿಯ ರಂಗತಂಡದವರ ನಾಟಕದ ಜತೆಗೆ ಮಕ್ಕಳ ತಂಡದ ನಾಟಕ ಸಹ ಆಯೋಜಿಸಿರುವುದು ಉತ್ಸವದ ವಿಶೇಷ. ಅ.10ರಂದು ಮಕ್ಕಳಿಂದ ಅಳಿಲು ರಾಮಾಯಣ ಹಾಗೂ ಆಲೀಬಾಬಾ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. ಹೆಸರಾಂತ ಲೇಖಕಿ ವೈದೇಹಿ ಅವರ ನಾಟಕವನ್ನು ಮೇಘ ಸಮೀರ್ ನಿರ್ದೇಶಿಸಿದ್ದಾರೆ, ಮುರುಳಿ ಶೃಂಗೇರಿ ಹಾಗೂ ಸುಬ್ರಹ್ಮಣ್ಯ ಸಂಗೀತ ನೀಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಆಲೀಬಾಬಾ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದು, ರಾಜು ಅನಂತಸ್ವಾಮಿ ಸಂಗೀತ ನೀಡಿದ್ದಾರೆ. 6ರಿಂದ 14 ವರ್ಷದೊಳಗಿನ ಮಕ್ಕಳು ನಾಟಕಗಳನ್ನು ಅಭಿನಯಿಸುವರು. ನಟನ ತಂಡವು ಬುಧವಾರ ಕೆ.ವಿ. ಅಕ್ಷರ ಅವರ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶಿಸಿತು.
ಇಂದು ಪ್ರಯೋಗ: ಈ ನಾಟಕವನ್ನು ಮೈಸೂರಿನ ನಂತರ ನಂಜನಗೂಡು, ಹುಣಸೂರು ಹಾಗೂ ತೀರ್ಥಹಳ್ಳಿಯಲ್ಲಿಯ ಕೊಪ್ಪದಲ್ಲಿ ಮಾತ್ರ ಈ ಹಿಂದೆ ಪ್ರದರ್ಶಿಸಲಾಗಿತ್ತು. ಅ.10ರಂದು ದಸರಾ ಮಹೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಬಾಗ ನಟನ ತಂಡದವರು ಚಾಮಚೆಲುವೆ ನಾಟಕ ಪ್ರದರ್ಶಿಸುವರು.
ರಂಗಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ನಟನ ಹಮ್ಮಿಕೊಂಡಿರುವ ದ್ವಾದಶ ರಂಗೋತ್ಸವಕ್ಕೆ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡುತ್ತಿಲ್ಲ. ಹೀಗಿದ್ದರೂ 10 ದಿನಗಳ ನಾಟಕ ಪ್ರದರ್ಶಿಸುವುದು ಸುಲಭದ ಕೆಲಸವಲ್ಲ. ರಂಗಕಲೆ ಉಳಿವಿಗೆ ಇಂತಹ ಉತ್ಸವಕ್ಕೆ ಸರ್ಕಾರದ ಪ್ರೋತ್ಸಾಹವು ಬೇಕಾಗಿದೆ.
ಕಳೆದ 7 ವರ್ಷಗಳಿಂದ ದಸರೆಯ ಸಂದರ್ಭದಲ್ಲಿ ರಂಗೋತ್ಸವ ನಡೆಸಲಾಗುತ್ತಿದೆ. ಹಿರಿಯರ ರಂಗತಂಡದೊಂದಿಗೆ ಮಕ್ಕಳ ರಂಗತಂಡ ಹೊಂದಿರುವ ರಾಜ್ಯದ ಏಕೈಕ ಹವ್ಯಾಸಿ ಕಲಾತಂಡ ನಟನ. ದಸರೆ ಅಂಗವಾಗಿ ಹಮ್ಮಿಕೊಂಡಿರುವ ದ್ವಾದಶ ರಂಗೋತ್ಸವಕ್ಕೆ ಸರ್ಕಾರ ಯಾವುದೇ ಅರ್ಧಿಕ ನೆರವು ನೀಡಿಲ್ಲ.
ಟಿ ಮಂಡ್ಯ ರಮೇಶ್, ನಿರ್ದೇಶಕ, ನಟನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

